ದೇಶಿಯ ಮತ್ತು ಜಾಗತಿಕ ಬಂಡವಾಳ ಹೂಡಿಕೆಗೆ ಸೂಕ್ತ ಸ್ಥಳ

ದೇಶಿಯ ಮತ್ತು ಜಾಗತಿಕ ಬಂಡವಾಳ ಹೂಡಿಕೆಗೆ ಸೂಕ್ತ ಸ್ಥಳ

ಹುಬ್ಬಳ್ಳಿ, ಫೆ. 14: ಭಾರತ ಐದು ಟ್ರಿಲಿಯನ್ ಡಾಲರ್ ಆರ್ಥಿಕ ವ್ಯವಸ್ಥೆ ಹೊಂದಿದ ರಾಷ್ಟ್ರವಾಗಿ ರೂಪುಗೊಳ್ಳಲು ಕರ್ನಾಟಕದಂತಹ ರಾಜ್ಯಗಳ ಪಾಲುದಾರಿಕೆ ಅತ್ಯಂತ ಪ್ರಮುಖವಾಗಿದ್ದು, ದೇಶದ ಅರ್ಥ ವ್ಯವಸ್ಥೆಗೆ ಮಹತ್ವದ ಕೊಡುಗೆ ನೀಡುವಂತಹ ಸಾಮರ್ಥ್ಯ ಕರ್ನಾಟಕಕ್ಕಿದೆ ಎಂದು  ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರತಿಪಾದಿಸಿದ್ದಾರೆ.

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕರ್ನಾಟಕ ಉದ್ಯೋಗ ಮಿತ್ರ ,ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಸಹಯೋಗದಲ್ಲಿ ನಗರದ ಡೆನಿಸನ್ಸ್  ಹೋಟೆಲ್ ಆವರಣದಲ್ಲಿ ಏರ್ಪಡಿಸಿದ್ದ ಇನ್ ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶ-2020 ಉದ್ಘಾಟಿಸಿ ಮಾತನಾಡಿದರು.

ಸರ್.ಎಂ.ವಿಶ್ವೇಶ್ವರಯ್ಯನರ ಕೈಗಾರೀಕರಣ ಇಲ್ಲವೇ ವಿನಾಶ ಎಂಬ ತತ್ವ ಅರಿತುಕೊಂಡಿರುವ ಸರ್ಕಾರ ಆ ನಿಟ್ಟಿನಲ್ಲಿ ದೃಢವಾದ ಹೆಜ್ಜೆ ಇಡುತ್ತಿದೆ. ಕರ್ನಾಟಕದಲ್ಲಿ ಈಸ್ ಆಪ್ ಡೂಯಿಂಗ್ ಬಿಸಿನೆಸ್ ಸುಗಮ ವ್ಯವಹಾರ ನಡೆಸಲು ಅನುವಾಗುವಂತೆ ಸಕಲ ವ್ಯವಸ್ಥೆ ಕಲ್ಪಿಸಲು ನಾವು ಬದ್ಧವಾಗಿದ್ದೇವೆ. ಉದ್ಯಮ ಆರಂಭಿಸಲು ಉಂಟಾಗುವ ಅನಗತ್ಯ ವಿಳಂಬ ತಪ್ಪಿಸಲು ಹಾಗೂ ಶೀಘ್ರವೇ ಅನುಮೋದನೆ ಸಿಗುವಂತಹ ವ್ಯವಸ್ಥೆ ರೂಪಿಸುವುದು ನಮ್ಮ ಸರಕಾರದ ಆದ್ಯತೆಯಾಗಿದೆ ಎಂದರು.

ಹುಬ್ಬಳ್ಳಿ ಧಾರವಾಡ ಭೂ ಪ್ರದೇಶ ದೇಶಿಯ ಮತ್ತು ಜಾಗತಿಕ ಬಂಡವಾಳ ಹೂಡಿಕೆಗೆ ಸೂಕ್ತ ಸ್ಥಳವಾಗಿದ್ದು, ಇಲ್ಲಿ ಸಕಲ ಮೂಲಸೌಕರ್ಯ, ನುರಿತ ಮಾನವ ಸಂಪನ್ಮೂಲದ ಲಭ್ಯತೆ ಇದೆ. ಉತ್ತರ ಕರ್ನಾಟಕದಲ್ಲಿ ಕೈಗಾರಿಕಾ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ರಾಜ್ಯದಲ್ಲಿ ಪಾರದರ್ಶಕ ಆಡಳಿತ ವ್ಯವಸ್ಥೆ ಇದ್ದು, ಇದರ ಲಾಭವನ್ನು ಪಡೆಯಲು ಹೂಡಿಕೆದಾರರು ಮುಂದಾಗಬೇಕು ಎಂದರು.

ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶದಲ್ಲಿ ಪಾಲ್ಗೊಂಡಿರುವ ಉದ್ಯಮಿಗಳ ಉಪಸ್ಥಿತಿಯು ರಾಜ್ಯದ ಮೇಲಿನ ಬದ್ಧತೆ ಮತ್ತು ನಂಬಿಕೆಯನ್ನು ನಿರೂಪಿಸುತ್ತದೆ. ರಾಜ್ಯ ಸರ್ಕಾರ ಕೂಡ ನಿಮ್ಮೆಲ್ಲರನ್ನು ಎಲ್ಲಾ ರೀತಿಯಲ್ಲೂ ಬೆಂಬಲಿಸುತ್ತದೆ. ಇತ್ತೀಚೆಗೆ ದಾವೋಸ್ ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗ ಸಭೆ ಅತ್ಯಂತ ಫಲಪ್ರದವಾಗಿದ್ದು, ಆ ಸಂದರ್ಭದಲ್ಲಿ 40 ಕ್ಕೂ ಹೆಚ್ಚು ಕಂಪನಿಗಳು ಕರ್ನಾಟಕದಲ್ಲಿ ಹೂಡಿಕೆ ಮಾಡುವ ಸಂಬಂಧ ತಮ್ಮೊಂದಿಗೆ ಚರ್ಚಿಸಿ ಆಸಕ್ತಿ ತೋರಿದ್ದವು ಎಂದು ಮುಖ್ಯಮಂತ್ರಿಯವರು  ಹೇಳಿದರುಉದ್ಘಾಟನಾ ಸಮಾರಂಭಕ್ಕೂ ಮುನ್ನ ಕರ್ನಾಟಕ ವಲಯದ ಸಾಮರ್ಥ್ಯ ಹಾಗೂ ಬಲವರ್ಧನೆ ಕುರಿತು ವಿಚಾರಗೋಷ್ಠಿ ನಡೆಸಲಾಯಿತು. ಸಮಾವೇಶದ ಬಳಿಕ ಮುಖ್ಯಮಂತ್ರಿ  ಬಿ.ಎಸ್. ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಹಲವಾರು ಉದ್ಯಮ ಸಂಸ್ಥೆಗಳ ಒಡಂಬಡಿಕೆಗಳಿಗೆ ಸಹಿ ಹಾಕಲಾಯಿತು.

 

ಫ್ರೆಶ್ ನ್ಯೂಸ್

Latest Posts

Featured Videos