ಜಿಲ್ಲೆಗೆ ಕೀರ್ತಿ ತಂದ ಬ್ಯಾಂಡ್ ಬಾರಿಸುವವರ ಪುತ್ರ ಸುರೇಶ ಭಜಂತ್ರಿ!

ಜಿಲ್ಲೆಗೆ ಕೀರ್ತಿ ತಂದ ಬ್ಯಾಂಡ್ ಬಾರಿಸುವವರ ಪುತ್ರ ಸುರೇಶ ಭಜಂತ್ರಿ!

ಬಾಗಲಕೋಟೆ, ಏ. 17, ನ್ಯೂಸ್ ಎಕ್ಸ್ ಪ್ರೆಸ್:  ಇಲ್ಲೊಬ್ಬ ವಿದ್ಯಾರ್ಥಿ ತೀವ್ರ ಬಡತನದಲ್ಲಿಯೂ ತಾನು ವಾಸವಿರುವ ಗದ್ದೆಯಿಂದ 9 ಕಿ.ಮೀ. ದೂರದ ವಿದ್ಯಾಲಯಕ್ಕೆ ಪ್ರತಿ ದಿನ ಸೈಕಲ್ ಮೂಲಕ ಸಂಚರಿಸಿ ಜಿಲ್ಲೆಗೆ ತೃತೀಯ ಸ್ಥಾನ ಪಡೆದು ಗಮನ ಸೆಳೆದಿದ್ದಾನೆ. ವಿದ್ಯಾರ್ಥಿ ಸುರೇಶ ಸಿದ್ರಾಮ ಭಜಂತ್ರಿ ಬನಹಟ್ಟಿಯ ಎಸ್ಆರ್​ಎ ಪದವಿಪೂರ್ವ ಮಹಾವಿದ್ಯಾಲಯದ ವಿಜ್ಞಾನ ವಿಭಾಗದಲ್ಲಿ ಗಣಿತ ವಿಷಯದಲ್ಲಿ ಶೇ. ನೂರು ಅಂಕಗಳೊಂದಿಗೆ 578 (ಶೇ 96.33) ಅಂಕ ಪಡೆದು ಬಾಗಲಕೋಟೆ ಜಿಲ್ಲೆಗೆ ತೃತೀಯ ಸ್ಥಾನ ಪಡೆದಿದ್ದಾನೆ. ಏಳನೇ ತರಗತಿವರೆಗೆ ಗ್ರಾಮದ ಪಿ.ಪಿ. ಮಾಳೀಗಡ್ಡಿ ಮಠದ ಶಾಲೆಯಲ್ಲಿ ಕಲಿತು ಎಂಟನೇಯ ತರಗತಿಯಿಂದ ಬೆಳಗಾವಿ ಜಿಲ್ಲೆಯ ಕಾನಟ್ಟಿ ಗ್ರಾಮದಲ್ಲಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವಸತಿ ಗೃಹದಲ್ಲಿ ಪ್ರವೇಶ ಪಡೆದು ಅಲ್ಲಿನ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಲಿತು ಎಸ್‍ಎಸ್‍ಎಲ್‍ಸಿ ಪರಿಕ್ಷೆಯಲ್ಲಿ 594 (ಶೇ 95) ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದ. ಸದ್ಯ ಸುರೇಶ ಸಿಇಟಿಯಲ್ಲಿ ಉತ್ತಮ ಸ್ಥಾನ ದೊರೆತರೆ ಎಂಜಿನಿಯರಿಂಗ್ ಓದುವ ಕನಸು ಕಾಣುತ್ತಿದ್ದಾನೆ. ಈಗ ದೊರೆತಿರುವ ಫಲಿತಾಂಶ ತೃಪ್ತಿದಾಯಕವಾಗಿದ್ದು, ಮುಂದಿನ ಸಿಇಟಿ ಫಲಿತಾಂಶದ ನಿರೀಕ್ಷೆಯಲ್ಲಿದ್ದಾನೆ. ತನ್ನ 11 ಗುಂಟೆ ಜಮೀನಿನಲ್ಲಿ ಕಚ್ಚಾ ಮನೆ ಮಾಡಿಕೊಂಡು ವಾಸವಿರುವ ತಂದೆ ಸಿದ್ರಾಮ, ಮದುವೆ ಇನ್ನಿತರ ಶುಭ ಕಾರ್ಯಗಳಲ್ಲಿ ವಾದ್ಯ ನುಡಿಸುವ ಕಾಯಕ ಮಾಡುತ್ತ ಇನ್ನುಳಿದ ದಿನಗಳಲ್ಲಿ ರೈತರ ಗದ್ದೆಗಳಲ್ಲಿ ಕೂಲಿ ಮಾಡುತ್ತಾ ಮಗನನ್ನು ಓದಿಸುತ್ತಿದ್ದಾರೆ. ಬಡತನದ ಬೇಗೆಯಿಂದ ನಮಗೆ ಕಲಿಯಲಾಗಲಿಲ್ಲ. ನನ್ನ ಮಗನಾದರು ಕಲಿತು ಒಳ್ಳೆಯ ದೇಶ ಸೇವೆಯೊಂದಿಗೆ ಕುಟುಂಬದ ಬಡತನ ನಿವಾರಣೆಯಾಗಬಹುದೆಂಬ ಆಶಾಭಾವನೆ ವ್ಯಕ್ತಪಡಿಸುತ್ತಾರೆ. ಎಲ್ಲ ಸೌಕರ್ಯಗಳಿದ್ದು ಮನಸ್ಫೂರ್ತಿಯಿಂದ ಓದದ ವಿದ್ಯಾರ್ಥಿಗಳ ನಡುವೆ ಯಾವುದೇ ಸೌಲಭ್ಯಗಳಿಲ್ಲದೆ ತನ್ನ ಕಠಿಣ ಪರಿಶ್ರಮದೊಂದಿಗೆ ವಿದ್ಯಾಭ್ಯಾಸ ಮಾಡಿ ಉತ್ತಮ ಸಾಧನೆಗೈದಿರುವ ವಿದ್ಯಾರ್ಥಿಯನ್ನು ಕೊರಮ ಸಮಾಜದ ಪ್ರಮುಖರು ಅಭಿನಂದಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos