ಮಂಗಳೂರಿನಲ್ಲಿ ನಾಳೆ ಕಾರ್ಮಿಕರ ಪ್ರತಿಭಟನೆ

ಮಂಗಳೂರಿನಲ್ಲಿ ನಾಳೆ ಕಾರ್ಮಿಕರ ಪ್ರತಿಭಟನೆ

ಮಂಗಳೂರು, ಜ.07: ಕೇಂದ್ರ ಸರಕಾರದ ಕಾರ್ಮಿಕ ನೀತಿಯನ್ನು ವಿರೋಧಿಸಿ ರಾಜ್ಯದೆಲ್ಲೆಡೆ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಕಾರ್ಮಿಕರ ಕಾನೂನು ಮತ್ತು ಹಕ್ಕುಗಳ ರಕ್ಷಣೆಗಾಗಿ ಜ.8ರಂದು ದೇಶವ್ಯಾಪಿ ನಡೆಯುವ ಕಾರ್ಮಿಕರ ಮುಷ್ಕರ ಬೆಂಬಲಿಸಿ ಮಂಗಳೂರಿನ ಶ್ರಮಿಕರ ಸಂಘ ನೇತೃತ್ವದಲ್ಲಿ ಮಂಗಳವಾರ  ಕಾರ್ಮಿಕರ ಕಟ್ಟೆ ಬಳಿ ಸಭೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಬಂದರು ಶ್ರಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಮತ್ತು ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್ ಮಾತನಾಡಿ, ನರೇಂದ್ರ ಮೋದಿ ಸರಕಾರವು ಕಾರ್ಮಿಕ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿದ್ದು, ಇದರ ತಪ್ಪು ಆರ್ಥಿಕ ನೀತಿಯಿಂದಾಗಿ ಜಿಡಿಪಿ ಪಾತಾಳಕ್ಕೆ ಕುಸಿದಿದೆ. ಇದರ ಪರಿಣಾಮವಾಗಿ ಉತ್ಪಾದನಾ ಮತ್ತು ನಿರ್ಮಾಣ ಕ್ಷೇತ್ರಗಳಲ್ಲಿ ಭಾರಿ ಮಟ್ಟದ ಕುಸಿತ ಉಂಟಾಗಿದೆ ಎಂದರು.

ಜಿಡಿಪಿಯ ಕುಸಿತದಿಂದಾಗಿ ರಾಷ್ಟ್ರದೆಲ್ಲೆಡೆ ನಿರುದ್ಯೋಗ ಸಮಸ್ಯೆ ತಲೆದೂರಿದೆ. ಇದರ ಜೊತೆಗೆ ಬೆಲೆ ಏರಿಕೆ ಕಾವನ್ನು ನಾಗರಿಕರು ಎದುರಿಸುವಂತಾಗಿದೆ ಎಂದು ಅವರು ಆರೋಪಿಸಿದರು.

ದೇಶದ ಜನರು ಆರ್ಥಿಕ ಮುಗ್ಗಟ್ಟಿನಿಂದ ಹೊಟ್ಟೆಯ ಹಸಿವು ತಣಿಸಲು ಪರದಾಡುತ್ತಿರುವಾಗಲೇ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಜನರಿಗೆ ಬೇಡವಾದ ಎನ್‌ಆರ್‌ಸಿ, ಸಿಎಎ, ಎನ್‌ಪಿಆರ್‌‌ನಂತಹ ಕೋಮುವಾದಿ ಕಾರ್ಯನೀತಿಯನ್ನು ಜಾರಿಗೊಳಿಸಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಇವೆಲ್ಲವು ಹೀಗೇ ನಡೆದರೆ ಮುಂದಿನ ದಿನಗಳಲ್ಲಿ ಮೋದಿ ಸರಕಾರದ ಎಲ್ಲಾ ಹುನ್ನಾರಗಳು ವಿಫಲಗೊಳ್ಳಲಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದೆಲ್ಲೆಡೆ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಡೆಯುತ್ತಿರುವ ಮುಷ್ಕರಕ್ಕೆನಾಳೆ ನಗರದಾದ್ಯಂತ ಹಮಾಲಿ ಕಾರ್ಮಿಕರು ಯಾವುದೇ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳದೆ ಮುಷ್ಕರದಲ್ಲಿ ಸ್ವಯಂಪ್ರೇರಿತವಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಇಮ್ತಿಯಾಝ್‌ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos