ಹತ್ರಾಸ್ ಘಟನೆ ಖಂಡಿಸಿ ಪ್ರತಿಭಟನೆ

ಹತ್ರಾಸ್ ಘಟನೆ ಖಂಡಿಸಿ ಪ್ರತಿಭಟನೆ

ಮಧುಗಿರಿ: ಪರಿಶಿಷ್ಠ ಜಾತಿ ದೌರ್ಜನ್ಯ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ ನೊಂದ ದಲಿತ ಮಹಿಳೆಯ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕೆಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ, ಜೀವಿಕ ಸಂಘಟನೆ ಹಾಗೂ ವಿವಿಧ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಕಚೇರಿಯ ಸಿಬ್ಬಂದಿ ಶ್ರೀನಿವಾಸ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ದೊಡ್ಡೇರಿ ಕಣಿಮಯ್ಯ ಮಾತನಾಡಿ, ಉತ್ತರಪ್ರದೇಶದ ಹತ್ರಾಸ್ ಎಂಬಲ್ಲಿ ಸೆ.೧೪ರಂದು ೧೯ ವರ್ಷದ ಮನ್ವಿತ ಎಂಬ ದಲಿತ ಯುವತಿಯ ಮೇಲೆ ನಡೆದ ಭೀಕರ ಅತ್ಯಾಚಾರ-ಕೊಲೆ ಅಮಾನವೀಯ ಕೃತ್ಯ ಕಂಡು, ಹಿಡಿ ಮನುಕುಲವೇ ನಲುಗಿದೆ. ಕುಟುಂಬಸ್ಥರಿಗೆ ಕೊನೆ ಪಕ್ಷ ಶವ ಸಂಸ್ಕಾರಕ್ಕೂ ಅವಕಾಶ ಕೊಡದೆ ಸಾಕ್ಷಿ ನಾಶಪಡಿಸುವ ಉದ್ದೇಶದಿಂದ ಪೋಲೀಸ್ ಅಧಿಕಾರಿಗಳು ರಾತ್ರೋರಾತ್ರಿ ಶವಸಂಸ್ಕಾರ ಮಾಡಿ ದಲಿತ ವಿರೋಧಿ ನೀತಿಯನ್ನು ಅನುಸರಿಸಿರುವುದು ನೇರವಾಗಿ ಕಂಡುಬಂದಿದೆ.
ಹೆಣ್ಣುಮಗಳನ್ನು ನಡೆಸಿಕೊಂಡ ರೀತಿ ಹೇಳಲು ಪದಗಳೇ ಇಲ್ಲದಂತಾಗಿದೆ. ಇಂತಹ ಅಮಾನವೀಯ ಕೃತ್ಯ ನಡೆದರೂ ಮೌನವಾಗಿರುವ ಮುಖ್ಯಮಂತ್ರಿ ಯೋಗಿ ಮತ್ತು ದೇಶದ ಪ್ರಧಾನಿಯಿಂದ ದೇಶದ ಹೆಣ್ಣು ಮಕ್ಕಳಿಗೆ ಮುಂದಿನ ದಿನಗಳಲ್ಲಿ ದೊಡ್ಡ ಅಪಾಯ ಎದುರಾಗಲಿದ್ದು, ರಾಮ ಹುಟ್ಟಿದ ನೆಲದಲ್ಲಿ ಹೆಣ್ಣುಮಕ್ಕಳಿಗೆ ನ್ಯಾಯ ಎಂಬುದು ಸಾಬೀತಾಗಿದೆ. ಆದ್ದರಿಂದ ಉತ್ತರ ಪ್ರದೇಶದ ಯೋಗಿ ಸರ್ಕಾರವನ್ನು ವಜಾಗೊಳಿಸಿ ಅಲ್ಲಿನ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಸಿಐಟಿಯು ಸಂಚಾಲಕಿ ಎಲ್.ಎಸ್.ಸುಕನ್ಯ ಮಾತನಾಡಿ, ಗಾಂಧೀಜಿ ಕಂಡ ಕನಸನ್ನು ನನಸು ಮಾಡಿ ರಾತ್ರಿ ವೇಳೆಯಲ್ಲಿ ಮಹಿಳೆ ಧೈರ್ಯದಿಂದ ಓಡಾಡುವಂತೆ ಮಾಡುತ್ತೇವೆ ಎಂದು ಹೇಳಿಕೊಂಡೇ ಅಧಿಕಾರ ಚುಕ್ಕಾಣಿ ಹಿಡಿದ ಬಿಜೆಪಿ ಸರ್ಕಾರದಿಂದ ಹಗಲಿನಲ್ಲಿಯೇ ಮಹಿಳೆಯರಿಗೆ ರಕ್ಷಣೆ ನೀಡಲು ಆಗುತ್ತಿಲ್ಲ. ಬಿಜೆಪಿ ಸರ್ಕಾರ ಬಂದಾಗಿನಿಂದ ಮಹಿಳೆಯರಿಗೆ ಸೂಕ್ತ ರಕ್ಷಣೆ ಇಲ್ಲದಂತಾಗಿದ್ದು, ಇಂತಹ ಪೈಶಾಚಿಕ ಕೃತ್ಯ ಎಸಗಿದವರಿಗೆ ಮರಣದಂಡನೆ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos