ಇನ್ನು ಮುಂದೆ ದೇವಾಲಯಗಳಲ್ಲಿ ಕಡ್ಡಾಯವಾಗಿ ಪ್ರಸಾದ ತಪಾಸಣೆ

ಇನ್ನು ಮುಂದೆ ದೇವಾಲಯಗಳಲ್ಲಿ ಕಡ್ಡಾಯವಾಗಿ ಪ್ರಸಾದ ತಪಾಸಣೆ

ಬೆಂಗಳೂರು, ಏ. 30, ನ್ಯೂಸ್ ಎಕ್ಸ್ ಪ್ರೆಸ್ : ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಸ್ಥಾನಗಳಲ್ಲಿ ಇನ್ನು ಮುಂದೆ ಆರೋಗ್ಯಾಧಿಕಾರಿಗಳು ತಪಾಸಣೆ ನಡೆಸದೆ ಭಕ್ತರಿಗೆ ಪ್ರಸಾದ ವಿತರಿಸುವಂತಿಲ್ಲ.  ಇದರ ಪ್ರಕಾರ ಮುಂದಿನ ದಿನಗಳಲ್ಲಿ ಮುಜರಾಯಿ ವ್ಯಾಪ್ತಿಗೆ ಬರುವ ದೇವಾಲಯಗಳಲ್ಲಿ ಕಡ್ಡಾಯವಾಗಿ ಆರೋಗ್ಯಾಧಿಕಾರಿ ಪ್ರಸಾದವನ್ನು ತಪಾಸಣೆ ನಡೆಸಿದ ಬಳಿಕವಷ್ಟೇ ಭಕ್ತರಿಗೆ ವಿತರಣೆ ಮಾಡಬೇಕು. ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡದ ದೇವಸ್ಥಾನಗಳಲ್ಲಿ ಆಯಾ ಗ್ರಾಮಸ್ಥರೇ ಸ್ವಯಂ ಪ್ರೇರಿತರಾಗಿ ಪ್ರಸಾದವನ್ನು ತಪಾಸಣೆ ನಡೆಸಿ ವಿತರಣೆ ಮಾಡುವುದು ಸೂಕ್ತ ಎಂದು ಸರ್ಕಾರ ಮನವಿ ಮಾಡಲಿದೆ. ಆದರೆ ಇಲ್ಲಿ ಕಡ್ಡಾಯವಾಗಿ ತಪಾಸಣೆ ಮಾಡಬೇಕೆಂಬ ನಿಯಮ ಇರುವುದಿಲ್ಲ. ದೇವಾಲಯದ ಆಡಳಿತ ಮಂಡಳಿಯ ವೈಯಕ್ತಿಕ ಹಿತಾಸಕ್ತಿ ಇಲ್ಲವೆ, ಗ್ರಾಮದಲ್ಲಿರುವ ಭಿನ್ನಾಭಿಪ್ರಾಯದಿಂದ ಕೆಲ ಕಿಡಿಗೇಡಿಗಳು ಪ್ರಸಾದದಲ್ಲಿ ವಿಷ ಬೆರೆಸುವಂತಹ ನೀಚ ಕೃತ್ಯವನ್ನು ನಡೆಸುತ್ತಾ ಬರುತ್ತಲೇ ಇದ್ದಾರೆ. ಇದಕ್ಕೆ ಶಾಶ್ವತ ಕಡಿವಾಣ ಹಾಕಲು ಮುಂದಾಗಿರುವ ಸರ್ಕಾರ ಹೊಸದೊಂದು ನಿಯಮಾವಳಿಯನ್ನು ಜಾರಿ ಮಾಡಲಿದೆ. ಹೊಸ ಮಾರ್ಗಸೂಚಿ ಪ್ರಕಾರ ಮುಜರಾಯಿ ದೇವಾಲಯಗಳಲ್ಲಿ ಯಾರೇ ಆದರೂ ಭಕ್ತರಿಗೆ ಪ್ರಸಾದ ವಿತರಿಸುವ ಮುನ್ನ ತಾಲೂಕಿನ ವೈದ್ಯಾಧಿಕಾರಿಗಳಿಂದ ತಪಾಸಣೆ ಮಾಡಬೇಕು. ಪ್ರಸಾದ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವುದಿಲ್ಲ ಎಂದು ಖಾತ್ರಿ ಪಡಿಸಿದ ಬಳಿಕವೇ ಭಕ್ತರಿಗೆ ವಿತರಿಸಬೇಕು. ರಾಜ್ಯದಲ್ಲಿ ಮುಜರಾಯಿ ವ್ಯಾಪ್ತಿಗೆ ಒಳಪಡುವ ಸುಮಾರು 35 ಸಾವಿರ ದೇವಾಲಯಗಳಿವೆ. ಇವುಗಳನ್ನು 3 ವರ್ಗಗಳನ್ನಾಗಿ ವಿಭಾಗಿಸಲಾಗಿದೆ. ವಾರ್ಷಿಕ 25 ಲಕ್ಷಕ್ಕಿಂತ ಹೆಚ್ಚು ವರಮಾನವಿರುವ 175 ದೇವಸ್ಥಾನಗಳನ್ನು ಎ ವರ್ಗ ಎಂದು ಪರಿಗಣಿಸಲಾಗಿದೆ. ವಾರ್ಷಿಕ 5 ಲಕ್ಷದಿಂದ 25ಲಕ್ಷದೊಳಗೆ ಆದಾಯ ವಿರುವ ಸುಮಾರು 163 ದೇವಸ್ಥಾನಗಳನ್ನು ಬಿ ದರ್ಜೆಗೆ ಸೇರಿಸಲಾಗಿದೆ. ವಾರ್ಷಿಕ 5 ಲಕ್ಷಕ್ಕಿಂತ ಕಡಿಮೆ ಆದಾಯವಿರುವ ದೇವಾಲಯಗಳನ್ನು ಸಿ ದರ್ಜೆಗೆ ಸೇರ್ಪಡೆ ಮಾಡಲಾಗಿದೆ. 2012ರಲ್ಲಿ ಮುಜರಾಯಿ ಇಲಾಖೆ ತಂದಿರುವ ನೂತನ ನಿಯಮಾವಳಿಗಳ ಪ್ರಕಾರ ಪ್ರಸಾದ ವಿತರಣೆಗೆ ಬಳಸುವ ಆಹಾರ ಸಾಮಗ್ರಿಗಳು ಉತ್ತಮವಾದ ಗುಣಮಟ್ಟದಿಂದ ಕೂಡಿರಬೇಕು. ಕಳಪೆ ವಸ್ತುಗಳನ್ನು ಬಳಸಿದರೆ ಅಂತಹವರ ವಿರುದ್ಧ ಕ್ರಮಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ರಾಜ್ಯದಲ್ಲಿ ಇತ್ತೀಚೆಗೆ ಪ್ರಸಾದಕ್ಕೆ ವಿಷ ಬೆರೆಸುವಂತಹ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಸರ್ಕಾರ ಮುಜರಾಯಿ ವ್ಯಾಪ್ತಿಗೆ ಒಳಪಡುವ ಹೊಸ ನಿಯಮಾವಳಿಗಳನ್ನು ಜಾರಿ ಮಾಡಲಿದೆ. ಇನ್ನೆರಡು ದಿನಗಳಲ್ಲಿ ಇದು ಅನುಷ್ಠಾನಕ್ಕೆ ಬರಲಿದೆ ಎಂದು ಮುಜರಾಯಿ ಇಲಾಖೆ ಸಚಿವ ಪಿ.ಟಿ.ಪರಮೇಶ್ವರ್‍ನಾಯ್ಕ್ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos