ವಿಕಲಚೇತನರ ಆರೋಗ್ಯ ಶಿಬಿರಗಳನ್ನು ಆಯೋಜಿಸಿ: ಗಾಣಕಲ್ ನಟರಾಜು

ವಿಕಲಚೇತನರ ಆರೋಗ್ಯ ಶಿಬಿರಗಳನ್ನು ಆಯೋಜಿಸಿ: ಗಾಣಕಲ್ ನಟರಾಜು

ರಾಮನಗರ, ಡಿ. 11: ವಿಕಲಚೇತನರ ಆರೋಗ್ಯದ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕು. ವಿಕಲಚೇತನರ ಕಾರ್ಯಕ್ರಮಗಳನ್ನು ನಡೆಸುವಾಗ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಆರೋಗ್ಯ ಶಿಬಿರಗಳನ್ನು ಆಯೋಜಿಸಿ, ಅವರಿಗೆ ಬೇಕಿರುವ ಚಿಕಿತ್ಸೆ ಹಾಗೂ ಸಾಧನ ಸಲಕರಣೆಗಳನ್ನು ಒದಗಿಸಿಕೊಟ್ಟರೆ ಕಾರ್ಯಕ್ರಮ ಸಾರ್ಥಕವಾಗುತ್ತದೆ ಎಂದು ತಾಲ್ಲೂಕು ಪಂಚಾಯತ್ ಅಧ್ಯಕ್ಷ ಗಾಣಕಲ್ ನಟರಾಜು ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಗುರುಭವನದಲ್ಲಿ ಇಂದು ಆಯೋಜಿಸಲಾಗಿದ್ದ ವಿಶ್ವ ವಿಕಲಚೇತನರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿರುವ ವಿಕಲಚೇತನರಿಗೆ ಗುರುತಿನ ಚೀಟಿಗಳನ್ನು ಮೊದಲು ನೀಡಬೇಕು. ಇದರಿಂದ ಅವರು ಇತರೆ ಇಲಾಖೆಗಳಿಂದ ನೀಡಲಾಗುವ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಇದಕ್ಕಾಗಿ ಪಂಚಾಯತ್ ಮಟ್ಟದಲ್ಲಿ ಒಂದು ದಿನದ ಆಂದೋಲನ ನಡೆಸಬೇಕು. ದಿನಾಂಕ ನಿಗಧಿಪಡಿಸಿ ಸಂಯೋಜಕರಿಗೆ ತಿಳಿಸಿದರೆ ಅವರು ಪಂಚಾಯತ್ ಮಟ್ಟದಲ್ಲಿ ಇರುವ ವಿಕಲಚೇತನರಿಗೆ ಗುರುತಿನ ಚೀಟಿ ದೊರಕಿಸುವ ಕೆಲಸ ಮಾಡುತ್ತಾರೆ. ಸರ್ಕಾರದ ಅನುದಾನದಲ್ಲಿ ಶೇ. 5 ರಷ್ಟು ಅನುದಾನವನ್ನು ವಿಕಲಚೇತನರಿಗೆ ಮೀಸಲಿರಿಸಲಾಗಿದೆ. ಈ ಅನುದಾನ ಸದುಪಯೋಗವಾಗಬೇಕು ಎಂದರು.

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಜ್ಯೋತಿ ಅವರು  ಪ್ರಾಸ್ತವಿಕವಾಗಿ ಮಾತನಾಡಿ ಜಿಲ್ಲೆಯಲ್ಲಿ 19183 ವಿಕಲಚೇತನರಿದ್ದು, ಕಳೆದ 2 ವರ್ಷಗಳಿಂದ ಸರ್ಕಾರದಿಂದ ವಿವಿಧ ಕಾರ್ಯಕ್ರಮದಡಿ ಇಲಾಖೆಗೆ 5.25 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಇಲಾಖಾ ಅನುದಾನದಿಂದ  121 ದಿಚಕ್ರ ವಾಹನ ಹಾಗೂ ಶಾಸಕರ ಅನುದಾನದಿಂದ 95 ದ್ವಿಚಕ್ರ ವಾಹನಗಳನ್ನು ವಿತರಿಸಲಾಗಿದೆ.  37 ಲ್ಯಾಪ್‌ಟಾಪ್‌ಗಳನ್ನು ನೀಡಲಾಗಿದೆ ಎಂದರು.

ಅಂಗವಿಕಲತೆಯಿಂದ ಗುಣಮುಖರಾಗಲು ವೈದ್ಯಕೀಯ ಪರಿಹಾರ ಯೋಜನೆಯಡಿ 1 ಲಕ್ಷ ರೂ ಸಹಾಯಧನ ನೀಡಲಾಗುವುದು. ಇಲಾಖೆಯಲ್ಲಿ ಈ ವರ್ಷ ವಿಕಲಚೇತನರಿಗೆ ಸಾಧನೆ ಸಲಕರಣೆಗಾಗಿ 5 ಲಕ್ಷ ರೂ ಮೀಸಲಿರಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ದೇವಿ, ರಾಮನಗರ ತಹಶೀಲ್ದಾರ್ ಜಯಣ್ಣ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos