ಕೆಸರು ಗದ್ದೆಯಾಗಿ ಮಾರ್ಪಡುತ್ತಿವೆ ಮಾರುಕಟ್ಟೆ ರಸ್ತೆಗಳು

ಕೆಸರು ಗದ್ದೆಯಾಗಿ ಮಾರ್ಪಡುತ್ತಿವೆ ಮಾರುಕಟ್ಟೆ ರಸ್ತೆಗಳು

ಬೆಂಗಳೂರು, ನ. 01: ನಿತ್ಯ ಸಾವಿರಾರು ವಾಹನಗಳು, ಲಕ್ಷಾಂತರ ಜನರು ಓಡಾಡುವ ಕೆ.ಆರ್.ಮಾರುಕಟ್ಟೆ ಬಸ್ ನಿಲ್ದಾಣ ಕೆಸರುಗದ್ದೆಂತಾಗಿದ್ದು, ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದು ಬಿಡಾಡಿ ದನಗಳು ಓಡಾಡುವ ಅವಾಸ ಸ್ಥನವಾಗಿದೆ.

ಸ್ವಚ್ಛತೆಯಂತೂ ಇಲ್ಲವೇ ಇಲ್ಲ. ನಗರದ ಹೃದಯ ಭಾಗವಾಗಿರುವ ಕೆ.ಆರ್.ಮಾರುಕಟ್ಟೆ ಪ್ರತಿದಿನ ವಾಹನ,ಜನಜಂಗುಳಿಯಿಂದ ಕೂಡಿದ್ದು, ಲಕ್ಷಾಂತರ ಜನರು ಓಡಾಡುವ ಸ್ಥಳ. 1264 ಬಿಎಂಟಿಸಿ ಬಸ್‌ಗಳು, 155 ಕೆಎಸ್‌ಆರ್‌ಟಿಸಿ, 500ಕ್ಕೂ ಹೆಚ್ಚು ಖಾಸಗಿ ಬಸ್‌ಗಳು, ಲಗೇಜ್ ವಾಹನಗಳು, ತಳ್ಳುವ ಗಾಡಿಗಳು, ಆಟೋಗಳು ಸಂಚರಿಸುತ್ತವೆ.

ಕಲಾಸಿಪಾಳ್ಯ ಮೊದಲನೇ ಮುಖ್ಯರಸ್ತೆ, ಕೆ.ಆರ್.ಮಾರುಕಟ್ಟೆ, ಅಯಪ್ಪ ಸ್ವಾಮಿ, ಮಾರಮ್ಮ ದೇವಸ್ಥಾನದ ಬಳಿಯೇ ನಿಲ್ಲುತ್ತವೆ. ಈ ರಸ್ತೆ ವಾಹನ ಸಂಚಾರಕ್ಕೆ ದುಸ್ತರವಾಗಿದ್ದು, ಸಾರ್ವಜನಿಕರು ಕೆಸರಿನಲ್ಲಿಯೇ ಓಡಾಡುವಂತಾಗಿದೆ.

ನಗರದ ಹೊರವಲಯದ ರೈತರು ಹೂವು, ಹಣ್ಣು, ತರಕಾರಿಯನ್ನು ಇದೇ ರಸ್ತೆಯಲ್ಲಿ ತರಬೇಕು. ಚಿಲ್ಲರೆ ಅಂಗಡಿಗಳ ವ್ಯಾಪಾರಿಗಳು, ಹೂವಿನ ವ್ಯಾಪಾರಿಗಳು ಖರೀದಿಗಾಗಿ ಮಾರುಕಟ್ಟೆಗೆ ಬರುತ್ತಾರೆ. ಇದಲ್ಲದೆ, ವಾಣಿವಿಲಾಸ ಆಸ್ಪತ್ರೆ ಮತ್ತು ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸಾವಿರಾರು ರೋಗಿಗಳು ಬಂದು ಹೋಗುತ್ತಾರೆ.

ಅಧಿಕಾರಿಗಳ ನಿರ್ಲಕ್ಷಯ

ಕಲಾಸಿಪಾಳ್ಯ ಮುಖ್ಯರಸ್ತೆಯಿಂದ ಕೆ.ಆರ್. ಮಾರುಕಟ್ಟೆ ಮೆಟ್ರೋ ನಿಲ್ದಾಣಕ್ಕೆ ಸಂಪರ್ಕಿಸುವ ರಸ್ತೆಯ ಬದಿ ಇರುವ ಮುನೇಶ್ವರಸ್ವಾಮಿ ದೇವಸ್ಥಾನದ ಮುಂಭಾಗವೇ ಕಸ ರಾಶಿ ಇದ್ದು, ತೆರವುಗೊಳಿಸಲು ಪಾಲಿಕೆ ಅಧಿಕಾರಿಗಳು ಮುಂದಾಗಿಲ್ಲ. ಮಾರಮ್ಮ ದೇವಸ್ಥಾನದ ಮುಂಭಾಗದ ರಸ್ತೆ ಸಿಸಿ ರಸ್ತೆಯಾಗಿದ್ದರೂ, ಗುಂಡಿಗಳು ರಾರಾಜಿಸುತ್ತಿವೆ. ಕೆ.ಆರ್.ಮಾರುಕಟ್ಟೆ ಹೊಸ ಬಸ್ ನಿಲ್ದಾಣ ಕಾಮಗಾರಿ ಸುತ್ತಲ ಪ್ರದೇಶದಲ್ಲಿ ಕಸದ ರಾಶಿ ಬಿದ್ದಿದ್ದು, ಬಿಡಾಡಿ ದನಗಳ ಆವಾಸ ಸ್ಥಾನವಾಗಿ ಸಾಂಕ್ರಾಮಿಕ ರೋಗಗಳ ತಾಣವಾಗಿ ಮಾರ್ಪಟ್ಟು ದುವಾರ್ಸನೆಯಿಂದ ಕೂಡಿದೆ.

ಕೊಳಕು ಗದ್ದೆಯಾಗಿವೆ

ರಸ್ತೆಗಳು ಕೊಳಕು ಗದ್ದೆಯಂತಾಗಿದ್ದು, ಜನರು ಇದೇ ರಸ್ತೆಯಲ್ಲಿ ಓಡಾಟ ನಡೆಸಬೇಕಾದ ದುಸ್ಥಿತಿ ಎದುರಿಸುತ್ತಿದ್ದಾರೆ. ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಬಿಎಂಟಿಸಿ ಮುಂದಾಗಿದೆ. ಆದರೆ, ಪರ್ಯಾಯ ವ್ಯವಸ್ಥೆ ಕಲ್ಪಿಸುವಲ್ಲಿ ಪಾಲಿಕೆ ವಿಫಲವಾಗಿದೆ.

ಮೂಲಸೌಕರ್ಯವಿಲ್ಲ

ಪ್ರಯಾಣಿಕರು ಮತ್ತು ಸಾರಿಗೆ ಸಿಬ್ಬಂದಿಗೆ ತಾತ್ಕಾಲಿಕವಾಗಿ ಕನಿಷ್ಠ ಮೂಲಸೌಕರ್ಯ ಕಲ್ಪಿಸಿಲ್ಲ. ಬೀದಿ ದೀಪಗಳಿಲ್ಲ. ಕುಳಿತು ದಣಿವಾರಿಸಿಕೊಳ್ಳಲು ಕುರ್ಚಿಗಳಿಲ್ಲ. ಶೌಚಾಲಯಗಳಿದ್ದರೂ, ಬಳಕೆಗೆ ಯೋಗ್ಯವಾಗಿಲ್ಲ.

ಗೂಡಂಗಡಿಗಳ ದಾಂಗುಡಿ

ಕೆ.ಆರ್. ಮಾರುಕಟ್ಟೆ ಬಸ್ ನಿಲ್ದಾಣದ ಪ್ರದೇಶದಲ್ಲಿರುವ ಪಾದಚಾರಿ ರಸ್ತೆಗಳನ್ನು ಗೂಡಂಗಡಿಗಳು ದಾಂಗುಡಿಯಿಟ್ಟಿದ್ದು, ವಾಹನ ಸಂಚರಿಸುವ ರಸ್ತೆ ಮೇಲೆ ಜನರು ಸಂಚರಿಸಬೇಕಾಗಿದೆ. ವೃದ್ಧರು ಕೆಸರು ರಸ್ತೆಯಲ್ಲಿ ಸಂಚರಿಸಲು ತೊಂದರೆ ಅನುಭವಿಸುತ್ತಿದ್ದಾರೆ, ವಾಹನಗಳು ಸಂಚರಿಸುವಾಗ ಪಕ್ಕದಲ್ಲೇ ಸಂಚರಿಸುವ ಜನರಿಗೆ ಕೆಸರು ಚಿಮ್ಮಲಿದ್ದು, ರಸ್ತೆ ಸರಿಪಡಿಸುವ ಗೋಜಿಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮುಂದಾಗಿಲ್ಲ ಎಂದು ಪಾದಚಾರಿಗಳು ಆರೋಪಿಸಿದ್ದಾರೆ.

ಮುಗಿಯದ ನಿಲ್ದಾಣ ಕಾಮಗಾರಿ

4.13 ಎಕರೆ ವಿಸ್ತೀರ್ಣದಲ್ಲಿ 6೦ ಕೋಟಿ ರೂ. ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಿಸಲು ಕೆಎಂವಿ ಪ್ರಾಜೆಕ್ಟಸ್ ಲಿಮಿಟೆಡ್ ಸಂಸ್ಥೆ ಗುತ್ತಿಗೆ ಪಡೆದಿದೆ. 6೦ ಕೋಟಿ ರೂ. ಪೈಕಿ ನಗರ ಭೂಸಾರಿಗೆ ನಿರ್ದೇಶನಾಲಯ ೨೫ ಕೋಟಿ ರೂ. ಉಳಿದ ಹಣ ಬಿಎಂಟಿಸಿ ಭರಿಸಲಿದೆ. ಎರಡು ವರ್ಷದಲ್ಲಿ ಕಾಮಗಾರಿ ಮುಗಿಸುವುದಾಗಿ ತಿಳಿಸಿದ್ದ ಕಂಪನಿ, 4 ವರ್ಷವಾದರೂ ಮುಗಿಸಿಲ್ಲ.

ಕೆ.ಆರ್.ಮಾರುಕಟ್ಟೆ ರಸ್ತೆಗಳ ಡಾಂಬರೀಕರಣಕ್ಕೆ ಶಾಸಕರು ಮತ್ತು ಮೇಯರ್ ಜತೆ ಚರ್ಚಿಸಲಾಗಿದೆ. ಶೀಘ್ರವೇ ಡಾಂಬರೀಕರಣ ಮತ್ತು ರಸ್ತೆ ದುರಸ್ತಿಗೆ ಚಾಲನೆ ನೀಡಲಾಗುವುದು, ಪಾದಚಾರಿ ರಸ್ತೆ ಮೇಲಿನ ಅನಧಿಕೃತ ಗೂಡಂಗಂಡಿಗಳನ್ನು ತೆರವುಗೊಳಿಸಲಾಗಿದೆ. ಕಲಾಸಿಪಾಳ್ಯ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಮಾಯವಾಗಿದೆ. ಸಾಂಕ್ರಾಮಿಕ ರೋಗಗಳ ತಾಣವಾಗಿ ಮಾರ್ಪಟ್ಟಿದೆ. ರಸ್ತೆಗಳೆಲ್ಲ ಗುಂಡಿಮಯವಾಗಿವೆ. ಪ್ರಯಾಣಿಕರು ಪ್ರತಿ ದಿನ ಅನುಭವಿಸುತ್ತಿದ್ದಾರೆ. ನಾವು ಯಾರಿಗೆ ಹೇಳಬೇಕೆಂಬುದೇ ಅರ್ಥವಾಗುತ್ತಿಲ್ಲ.

 

 

 

 

 

 

 

 

ಫ್ರೆಶ್ ನ್ಯೂಸ್

Latest Posts

Featured Videos