ಪ್ರೇಮ ವಿವಾಹ ರಿಜಿಸ್ಟರ್ ಸಮಯದಲ್ಲಿ ಮಾರಾಮಾರಿ!

ಪ್ರೇಮ ವಿವಾಹ ರಿಜಿಸ್ಟರ್ ಸಮಯದಲ್ಲಿ ಮಾರಾಮಾರಿ!

ಗದಗ, ಮೇ.2, ನ್ಯೂಸ್ ಎಕ್ಸ್ ಪ್ರೆಸ್: ಪ್ರೀತಿಸಿದ್ದ ಯುವಕ-ಯುವತಿಯ ಮದುವೆಯ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಮಾರಾಮಾರಿ ನಡೆದಿದೆ. ನಗರದ ಸಬ್‍ ರಿಜಿಸ್ಟರ್ ಕಚೇರಿ ಎದುರು ಘಟನೆ ನಡೆದಿದೆ. ಗದಗ ತಾಲೂಕಿನ ಹೊಸಳ್ಳಿ ಗ್ರಾಮದ ಅಪ್ಪಣ್ಣ ಕೊಟಗಾರ ಮತ್ತು ಕಮಲಮ್ಮ(ಹೆಸರು ಬದಲಾಯಿಸಲಾಗಿದೆ) ಎಂಬುವರು ಪರಸ್ಪರ ಪ್ರೀತಿಸಿದ ಯುವಜೋಡಿ. ಆರಂಭದಲ್ಲಿ ಇವರ ಮದುವೆಗೆ ಇಬ್ಬರ ಮನೆಯಲ್ಲೂ ವಿರೋಧ ವ್ಯಕ್ತವಾಗಿತ್ತು. ನಂತರ ಹಾಗೋ ಹೀಗೋ ಮಾಡಿ ಎರಡು ಕುಟುಂಬದವರೂ ಒಪ್ಪಿಕೊಂಡು ಗದಗ ಸಬ್‍ ರಿಜಿಸ್ಟರ್ ಕಚೇರಿಗೆ ಇಂದು ಮದುವೆ ಮಾಡಿಸಲು ಬಂದಿದ್ದಾರೆ. ಆದರೆ ಕಚೇರಿ ಬಳಿ ಎರಡು ಕುಟುಂಬದವರ ನಡುವೆ ಸ್ವಲ್ಪ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ ಎನ್ನಲಾಗಿದೆ. ಈ ವೇಳೆ ಯುವಕ ಅಪ್ಪಣ್ಣನ ಮನೆಯ ನಾಲ್ಕೈದು ಜನರು ಏಕಾಏಕಿ ಹುಡುಗಿ ಮನೆಯವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಈ ವೇಳೆ ಇಬ್ಬರಿಗೆ ಗಾಯಗಳಾಗಿವೆ. ಇಬ್ಬರು ಗಾಯಾಳುಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಬ್‍ ರಿಜಿಸ್ಟರ್ ಕಚೇರಿ, ಗದಗ ಗ್ರಾಮೀಣ ಪೊಲೀಸ್ ಠಾಣೆ, ತಹಶೀಲ್ದಾರ್ ಕಚೇರಿ ಇರುವಂತಹ ಪ್ರದೇಶದಲ್ಲಿ ಯಾವುದೇ ಭಯವಿಲ್ಲದೇ ನಾಲ್ಕೈದು ಜನರು ಮಾರಕಾಸ್ತ್ರ ಹಿಡಿದುಕೊಂಡು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಜನಜಂಗುಳಿಯಿದ್ದರೂ ಕೂಡ ಯಾರೂ ಸಹ ರಕ್ಷಣೆಗೆ ಬಂದಿಲ್ಲ ಅಂತ ಹಲ್ಲೆಗೊಳಗಾದ ಕಿರಣ ಎಂಬಾತ ಆರೋಪಿಸಿದ್ದಾನೆ. ಇನ್ನು ಘಟನೆಯಿಂದ ಗದಗ ಜನರು ಭಯಭೀತರಾಗಿದ್ದರು. ಈ ಘಟನೆ ಬಗ್ಗೆ ಗದಗ ಎಸ್ಪಿ ಪ್ರತಿಕ್ರಿಯೆ ನೀಡಿ, ಇನ್ನೂ ದೂರು ನೀಡಿಲ್ಲ. ಎರಡು ಕಡೆಯವರೂ ಒಂದೇ ಸಮುದಾಯದವರು. ದೂರು ನೀಡಿದ್ರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗವುದು ಎಂದು ಹೇಳಿದ್ದಾರೆ. ಒಟ್ಟಾರೆ, ಪ್ರೀತಿಯಿಂದಾಗಿ ಗದಗದಲ್ಲಿ ರಕ್ತ ಹರಿದಿದೆ. ಸಾರ್ವಜನಿಕ ಪ್ರದೇಶದಲ್ಲಿ ಮಾರಕಾಸ್ತ್ರಗಳಿಂದ ದಾಳಿ ನಡೆದಿದ್ದು, ಗದಗ-ಬೆಟಗೇರಿ ಅವಳಿ ನಗರದ ಜನರನ್ನು ಬೆಚ್ಚಿಬೀಳಿಸಿದೆ. ಸುಮೊಟೋ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಳಿಗೆ ಶಿಕ್ಷೆ ನೀಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos