ನಾನೊಂದು ತೀರಾ ನೀನೊಂದು ತೀರಾ

ನಾನೊಂದು ತೀರಾ ನೀನೊಂದು ತೀರಾ

ಬೆಂಗಳೂರು, ನ. 9: ವಿಪಕ್ಷನಾಯಕ ಸಿದ್ದರಾಮಯ್ಯ ಜೆಡಿಎಸ್ ಜೊತೆ ಅಂತರ ಕಾಯ್ದುಕೊಳ್ಳಬೇಕೆಂದು ಪದೇ ಪದೇ ಪ್ರತಿಪಾದಿಸುತ್ತಿದ್ದರೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಜೆಡಿಎಸ್ ನಾಯಕರ ಜೊತೆ ಆತ್ಮೀಯತೆ ಹೆಚ್ಚಿಸಿಕೊಳ್ಳುವ ಮೂಲಕ ಸಿದ್ದರಾಮಯ್ಯನವರಿಗೆ ಟಾಂಗ್ ನೀಡಲು ಆರಂಭಿಸಿದ್ದಾರೆ.

ಇತ್ತೀಚೆಗೆ ಬಹಿರಂಗ ಸಭೆಗಳಲ್ಲಿ ಸಿದ್ದರಾಮಯ್ಯನವರು ಬಿಜೆಪಿಗಿಂತಲೂ ಹೆಚ್ಚಾಗಿ ಜೆಡಿಎಸ್ ನಾಯಕರನ್ನೇ ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸುತ್ತಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಷ್ಟು ಕಾಂಗ್ರೆಸ್‌ಗೆ ಅನುಕೂಲವಾಗುತ್ತದೆ. ಜೆಡಿಸ್‌ನೊಂದಿಗೆ ಸ್ನೇಹವನ್ನು ಮುಂದುವರೆಸಿದ್ದೇ ಆದರೆ ಹಳೇಮೈಸೂರು ಭಾಗದಲ್ಲಿ ರಾಜಕೀಯವಾಗಿ ಅವನತಿ ಕಟ್ಟಿಟ್ಟ ಬುತ್ತಿ ಎಂಬ ಆತಂಕ ಸಿದ್ದರಾಮಯ್ಯ ಅವರನ್ನು ಕಾಡುತ್ತಿದೆ.

ಇತ್ತೀಚೆಗೆ ತಿಹಾರ್ ಜೈಲಿನಿಂದ ಬಿಡುಗಡೆಯಾಗಿ ಬಂದ ಡಿ.ಕೆ.ಶಿವಕುಮಾರ್‌ನ್ನು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ಏರ್‌ಪೋರ್ಟ್ಗೆ ತೆರಳಿ ಸ್ವಾಗತಿಸಿದ್ದರು. ಅಲ್ಲಿ ನಡೆದ ಸಮಾವೇಶದಲ್ಲಿ ಡಿ.ಕೆ.ಶಿವಕುಮಾರ್ ಜೆಡಿಎಸ್ ಬಾವುಟ ಹಿಡಿದದ್ದು ಚರ್ಚೆಗೆ ಗ್ರಾಸವಾಗಿತ್ತು.  ಸಿದ್ದರಾಮಯ್ಯ ಬೆಂಬಲಿಗರು ಇದನ್ನು ತೀವ್ರವಾಗಿ ಆಕ್ಷೇಪಿಸಿದರು.

ಡಿ.ಕೆ.ಶಿವಕುಮಾರ್ ಯಾವುದನ್ನೂ ಲೆಕ್ಕಕ್ಕೆ ಇಟ್ಟುಕೊಳ್ಳದೆ ಜೆಡಿಎಸ್ ನಾಯಕರು, ಶಾಸಕರು, ಮುಖಂಡರ ಜೊತೆ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿದ್ದಾರೆ, ವೇದಿಕೆ ಹಂಚಿಕೊಳ್ಳುತ್ತಿದ್ದಾರೆ. ಇದು ಜೆಡಿಎಸ್‌ನ್ನು ವಿರೋಧಿಸುವ ಕಾಂಗ್ರೆಸ್ ನಾಯಕರಿಗೆ ಇದು ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಬಹುತೇಕ ನಾಯಕರು ಅನಿವಾರ್ಯವಾದರೆ ಬಿಜೆಪಿ ಮೈತ್ರಿ ಮಾಡಿಕೊಳ್ಳಲು ಸಿದ್ದ ಎಂಬರ್ಥದಲ್ಲಿ ಹೇಳಿಕೆ ನೀಡುತ್ತಿದ್ದಾರೆ.  ಬಿಜೆಪಿ ನಾಯಕರು ಆರಂಭದಲ್ಲಿ ಜೆಡಿಎಸ್‌ನ ಪ್ರಸ್ತಾವನೆಯನ್ನು ತಿರಸ್ಕರಿಸಿದಂತೆ ಕಂಡುಬಂದರೂ ಇತ್ತೀಚೆಗೆ ಮೃದುಧೋರಣೆ ಅನುಸರಿಸುತ್ತಿದ್ದಾರೆ. ವಿಧಾನಸಭೆಯಲ್ಲಿ ದೇವೇಗೌಡರು ಮತ್ತು ಅವರ ಕುಟುಂಬದವರನ್ನು ದುಶ್ಯಾಸನ, ಕೌರವ ಎಂದೆಲ್ಲ ವಾಗ್ದಾಳಿ ನಡೆಸಿದ ಯಡಿಯೂರಪ್ಪನವರು ಏಕಾಏಕಿ ದೇವೇಗೌಡರ ಬಗ್ಗೆ ನಮಗೆ ಪ್ರೀತಿ ಇದೆ ಎಂದು ಹೇಳಲಾರಂಭಿಸಿದ್ದಾರೆ.ಈ ಸಂದರ್ಭದಲ್ಲೂ ಜೆಡಿಎಸ್ ಸಾಂಗತ್ಯದಲ್ಲಿ ರಾಜಕಾರಣ ಮಾಡುವುದಾದರೆ ಅದು ಅಪಾಯಕಾರಿ ಬೆಳವಣಿಗೆಯಾಗಲಿದೆ ಎಂಬ ಆತಂಕಗಳು ಕೇಳಿಬಂದಿವೆ. ಆದರೆ ಡಿ.ಕೆ.ಶಿವಕುಮಾರ್ ಅವರು ರಾಜಕಾರಣವೇ ಬೇರೆ. ವೈಯಕ್ತಿಕ ಸ್ನೇಹವೇ ಬೇರೆ. ನನ್ನ ಕಷ್ಟ ಕಾಲದಲ್ಲಿ ಜೊತೆಯಲ್ಲಿದ್ದವರಿಗೆ ಕೃತಜ್ಞತೆ ಹೇಳುವುದು ನನ್ನ ಧರ್ಮ ಎಂದು ಸಮರ್ಥಿಸಿಕೊಳ್ಳುತ್ತಾ ಜೆಡಿಎಸ್ ನಾಯಕರ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ.

ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದಾಗ ಮಾಜಿ ಪ್ರಧಾನಿ ದೇವೇಗೌಡರು ಕೂಡ ಅಲ್ಲಿಗೆ ಬಂದಿದ್ದು, ಇವರಿಬ್ಬರ ಭೇಟಿಯ ಜೊತೆಗೆ ಗೌಡರ ಕಾಲಿಗೆರಗಿರುವುದು ತೀವ್ರ ಕುತೂಹಲ ಕೆರಳಿಸಿದೆ.

 

 

ಫ್ರೆಶ್ ನ್ಯೂಸ್

Latest Posts

Featured Videos