ಹಾಲುಮತ ಮಾಹಿತಿ ನೀಡಿ

ಹಾಲುಮತ ಮಾಹಿತಿ ನೀಡಿ

ಕೋಲಾರ: ಕುರುಬ ಜನಾಂಗವನ್ನು ಪರಿಶಿಷ್ಟ ಪಂಗಡ (ಎಸ್‌ಟಿ) ಪಟ್ಟಿಗೆ ಸೇರಿಸುವ ಸಂಬಂಧ ಅಧ್ಯಯನ ನಡೆಸಲು ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ತಂಡ ಜಿಲ್ಲೆಗೆ ಬರುತ್ತಿದ್ದು ಅವರೊಂದಿಗೆ ಸ್ಪಂದಿಸಿ ಸರಿಯಾದ ಮಾಹಿತಿ ನೀಡಿ ಎಂದು ಹಾಲುಮತ ಮಹಾಸಭಾ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜುಮೌರ್ಯ ಮನವಿ ಮಾಡಿದರು.

ನಗರದ ಕನಕ ಮಂದಿರದಲ್ಲಿ ಕೋಲಾರ ಜಿಲ್ಲಾ ಹಾಲುಮತ ಮಹಾಸಭಾ ವತಿಯಿಂದ ಹಮ್ಮಿಕೊಂಡ ಎಸ್ಟಿ ಮೀಸಲಾತಿಗೆ ಕುರುಬರನ್ನು ಸೇರಿಸುವ ಕುರಿತು ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಕುರುಬ ಸಮಾಜದ ಆಚಾರ-ವಿಚಾರ, ಭಾಷೆ, ಸಾಮಾಜಿಕ, ಶೈಕ್ಷಣಿಕ-ಆರ್ಥಿಕ ಸ್ಥಿತಿಗತಿ ಹಾಗೂ ಭೌಗೋಳಿಕ ಅಂಶಗಳ ಕುರಿತಂತೆ ಕುಲಶಾಸ್ತ್ರೀಯ ಅಧ್ಯಯನ ತಂಡ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡುವುದರಿಂದ ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸಲು ಸಹಕಾರವಾಗುತ್ತದೆ ಎಂದು ತಿಳಿಸಿದರು.

ಹಾಲುಮತ ಮಹಾಸಭಾ ಕೋಲಾರ ಜಿಲ್ಲಾಧ್ಯಕ್ಷ ಎನ್.ಕೆ.ಗೋವಿಂದರಾಜು ಮಾತನಾಡಿ, ಮನೆಗೊಂದು ಮರ ನೆಡುವಂತೆ ನಮ್ಮ ಜಿಲ್ಲೆಯ ಕುರುಬ ಸಮಾಜದ ಪ್ರತಿಯೊಂದು ಮನೆಯಿಂದ ಒಬ್ಬರನ್ನು ಹಾಲುಮತದ ಸಿಪಾಯಿಯಾಗಿ ಬೆಳೆಸುವುದೇ ನಮ್ಮ ಗುರಿ ಮತ್ತು ಸಂಕಲ್ಪವಾಗಿರುತ್ತದೆ ಎಂದು ತಿಳಿಸಿದರು.

ಹಾಲುಮತ ಮಹಾಸಭಾ ಕಾನೂನು ಸಲಹೆಗಾರ ಲೋಕೇಶ್ ಮೂರ್ತಿ, ರಾಜ್ಯ ಸಂಚಾಲಕರಾದ ಉಮೇಶ್ ಕುಂದನ್, ಜಗದೀಶ್, ರಮೇಶ್, ಶ್ರೀನಿವಾಸ್, ಗೌರವಾಧ್ಯಕ್ಷ ಸೊಣ್ಣೂರು ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಮುರಳಿ, ಖಜಾಂಚಿ ರಮೇಶ್ ಬಾಬು, ಸ್ವಸ್ತಿಕ್ ಶಿವು, ಮಹಿಳಾ ಘಟಕ ಸದಸ್ಯೆ ಪ್ರೇಮಾ, ವಕೀಲರಾದ ಲಲಿತಮ್ಮ ಮತ್ತಿತರರು ಹಾಜರಿದ್ದರು. ಕಾರ್ಯಕ್ರಮವನ್ನು ಶ್ರೀಲತಾ ರವರು ನಿರೂಪಿಸಿ, ಶಿಕ್ಷಕ ಮುನಿರತ್ನಯ್ಯ ರವರು ವಂದಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos