ಟಿವಿ, ಮೊಬೈಲ್ ಗೀಳಿನಿಂದ ಹೊರ ಬನ್ನಿ

  • In State
  • December 30, 2020
  • 203 Views
ಟಿವಿ, ಮೊಬೈಲ್ ಗೀಳಿನಿಂದ ಹೊರ ಬನ್ನಿ

ಟಿ.ದಾಸರಹಳ್ಳಿ: ಮಹಿಳೆಯರು, ಮಕ್ಕಳು, ಯುವಜನತೆ ಮೊಬೈಲ್ ಟಿವಿ ನೋಡುವುದಕ್ಕೆ ಅಮೂಲ್ಯವಾದ ಸಮಯಯನ್ನು ವ್ಯರ್ಥ ಮಾಡುವ ಬದಲು ಮನುಷ್ಯನ ಉನ್ನತಿ ಹಾಗೂ ವಿಕಾಸಕ್ಕೆ ನೆರವಾಗುವ ಓದುವ ಹವ್ಯಾಸವನ್ನು ರೂಢಿಸಿಕೊಳ್ಳಿ ಎಂದು ಕ್ಷೇತ್ರ ಬಿಜೆಪಿ ಮಂಡಲಾಧ್ಯಕ್ಷ ಎನ್. ಲೋಕೇಶ್ ಸಲಹೆ ನೀಡಿದರು.
ಮಲ್ಲಸಂದ್ರದ ಏಕತಾಭವನದಲ್ಲಿ ಕ್ಷೇತ್ರ ಕನ್ನಡ ಜಾಗೃತ ಸಮಿತಿ ಹಾಗೂ ಕಸಾಪ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕುವೆಂಪು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡದಲ್ಲಿ ಸಾಹಿತ್ಯ ಸಂಪತ್ತು ಅಗಾಧವಾಗಿದೆ. ಕನ್ನಡಕ್ಕೆ ಮೊದಲ ಜ್ಞಾನಪೀಠ ತಂದುಕೊಟ್ಟ ಶ್ರೀ ರಾಮಾಯಣ ದರ್ಶನಂ ಉತ್ಕೃಷ್ಟ ಕೃತಿಯನ್ನು ರಚಿಸಿದಷ್ಟೇ ಶ್ರದ್ಧೆಯಿಂದ ಕುವೆಂಪು ಅವರು ಶಿಶು ಸಾಹಿತ್ಯವನ್ನು ಬರೆದಿದ್ದಾರೆ. ಆದ್ದರಿಂದ ಬಾಲ್ಯದಿಂದಲೇ ಮಕ್ಕಳು ಸಾಹಿತ್ಯದೆಡೆಗೆ ಆಸಕ್ತಿ ಬೆಳೆಸಿಕೊಳ್ಳುವಂತೆ ಪಾಲಕರು ನಿಗಾ ವಹಿಸಬೇಕು ಎಂದರು.
ಜನತೆ ಮದುವೆ, ನಾಮಕರಣ ಹುಟ್ಟುಹಬ್ಬದಂತಹ ಶುಭ ಸಮಾರಂಭಗಳಲ್ಲಿ ಸಡಗರದಿಂದ ಪಾಲ್ಗೊಳ್ಳುವಂತೆ ನಾಡುನುಡಿಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದರು.
ಶ್ರೀಕೃಷ್ಣ ಕಲಾ ಸಂಗಮ ತಂಡದಿಂದ ರಾಷ್ಟ್ರಕವಿ ಕುವೆಂಪು ವಿರಚಿತ ಭಾವಗೀತೆಗಳ ಗಾಯನ ನಡೆಯಿತು. ಜತೆಗೆ ವಾಗ್ಮಿ ಚಿಕ್ಕಹೆಜ್ಜಾಜಿ ಮಹಾದೇವ ಅವರು ಕುವೆಂಪು ಅವರು ಅಭಿನವ ವಾಲ್ಮೀಕಿ ಎಂದು ಬಣ್ಣಿಸಿ ಉಪನ್ಯಾಸ ನೀಡಿದರು.
ಕವಿ ನಾರಸಂದ್ರ ರಾಮಚಂದ್ರಯ್ಯ, ಕಾದಂಬರಿಕಾರ ದ್ವಾರನಕುಂಟೆ ಪಾತಣ್ಣ, ಕಥೆಗಾರರಾದ ಡಾ. ಸಿ.ಆರ್ ಪಾರ್ಥಸಾರಥಿ,ಕಂನಾಡಿಗಾ ನಾರಾಯಣ, ಲೇಖಕ ಡಾ ಗುರುರಾಜ್ ಎಸ್ ಅವರನ್ನು ಸನ್ಮಾನಿಸಲಾಯಿತು.

ಫ್ರೆಶ್ ನ್ಯೂಸ್

Latest Posts

Featured Videos