ಮಧ್ಯಂತರ ಚುನಾವಣೆಗೆ ಸಜ್ಜಾಗಿ

ಮಧ್ಯಂತರ ಚುನಾವಣೆಗೆ ಸಜ್ಜಾಗಿ

ಬೆಂಗಳೂರು, ಸೆ. 9: ಹಿಂಬಾಗಿಲ ಮೂಲಕ ಅಧಿಕಾರ ಹಿಡಿದು ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ತೊಡಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರಕ್ಕೆ ಭವಿಷ್ಯವಿಲ್ಲ. ಹೀಗಾಗಿ ಮಧ್ಯಂತರ ಚನಾವಣೆಗೆ ತಯಾರಾಗಿ ಎಂದು ಹಿಂದುಳಿದ ವರ್ಗಗಳ ಕಾರ್ಯಕರ್ತರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ನಗರದ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಹಿಂದುಳಿದ ವರ್ಗಗಳ ಕಾರ್ಯಕಾರಿಣಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹದಿನೇಳು ಶಾಸಕರಿಗೆ ಹಣದ ಅಧಿಕಾರದ ಆಸೆ ತೋರಿಸಿ ಅಧಿಕಾರ ಹಿಡಿದಿರುವ ಬಿಜೆಪಿಗೆ ಭವಿಷ್ಯವಿಲ್ಲ. ಮುಂದಿನ ಕಾಂಗ್ರೆಸ್ ಪಕ್ಷ ಭವಿಷ್ಯ ಕಂಡುಕೊಳ್ಳಲು ಬೀದಿಗಿಳಿದು ಹೋರಾಟ ಮಾಡುವ ಕಾಲ ಸನ್ನಿಹಿತವಾಗಿದೆ. ಪ್ರತಿಯೊಬ್ಬ ಕಾರ್ಯಕರ್ತರು ಹೋರಾಟಕ್ಕೆ ಸನ್ನದ್ಧರಾಗಬೇಕು ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮಾತ್ರ ಸಾಮಾಜಿಕ ನ್ಯಾಯ ಉಳಿಯಲು ಸಾಧ್ಯ. ಅಸಾಂವಿಧಾನಿಕವಾಗಿ ರಚನೆಗೊಂಡಿರುವ ಬಿಜೆಪಿ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಲು ಕಾರ್ಯಕರ್ತರು ಸಜ್ಜಾಗಬೇಕು ಎಂದರು.

ಹಿಂದುಳಿದ ವರ್ಗಗಳ ಪರ ಇರುವ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಅನುಷ್ಠಾನಗೊಳಿಸಿದ ಹಲವಾರು ಯೋಜನೆಗಳನ್ನು ತನಿಖೆ ಮಾಡಿಸುವುದಾಗಿ ಹೇಳುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ನನ್ನ ಅವಧಿಯಲ್ಲಿ ಜಾರಿಯಾದ ಯಾವುದೇ ಅಭಿವೃದ್ಧಿ ಯೋಜನೆಗಳ ತನಿಖೆಗೆ ಸಿದ್ಧ ಎಂದು ಸ್ಪಷ್ಟಪಡಿಸಿದರು.

ಸಂವಿಧಾನಾತ್ಮಕ ಹಾಗೂ ಕಾನೂನುಬದ್ಧವಾಗಿ ಅನುಷ್ಠಾನಗೊಳಿಸಿರುವ ಕೃಷಿ ಭಾಗ್ಯ ಯೋಜನೆ ರೈತಪರವಾದ ಯೋಜನೆಯಾಗಿದೆ. ರಾಜ್ಯಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರು ನೆರೆಯಿಂದಾಗಿ ಲಕ್ಷಾಂತರ ಜನ ಬೀದಿಗೆ ಬಿದ್ದಿದ್ದರೂ ಕನಿಷ್ಠ ಅನುದಾನ ಬಿಡುಗಡೆ ಮಾಡುವ ಸೌಜನ್ಯ ತೋರಲಿಲ್ಲ. ಪ್ರಧಾನಿಯವರ ಕ್ರಮ ಸಮರ್ಥನೀಯವಲ್ಲ ಎಂದು ಹರಿಹಾಯ್ದರು.

ದೇಶದ ಇತಿಹಾಸದಲ್ಲೆ ಜಿಡಿಪಿ ಕನಿಷ್ಠ ಮಟ್ಟಕ್ಕೆ ಇಳಿದಿರುವುದು ಇದೇ ಮೊದಲು. ಅದಕ್ಕೆ ತಪ್ಪು ಆರ್ಥಿಕ ನೀತಿ, ನೋಟು ಅಮಾನ್ಯೀಕರಣ, ಅವೈಜ್ಞಾನಿಕ ಜಿಎಸ್‌ಟಿ ಜಾರಿಯೇ ಕಾರಣ ಎಂದು ಹೇಳಿದರು.

ಆರ್ಥಿಕ ಕುಸಿತವನ್ನು ತಡೆಯಲಾಗದ ಮೋದಿ ಸರ್ಕಾರ ಇಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ನೆನಪಿಸಿಕೊಳ್ಳುತ್ತಿದೆ ಎಂದು ವ್ಯಂಗ್ಯವಾಡಿದರು.

ಕಳೆದ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಇವಿಎಂ ದುರುಪಯೋಗ ಮಾಡಿಕೊಳ್ಳಲಾಗಿದೆ ಎಂಬ ಅನುಮಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಮುಂದಿನ ಯಾವುದೇ ಚುನಾವಣೆ ಬಂದರೂ ಬ್ಯಾಲೆಟ್ ಬಳಕೆ ಮಾಡಿ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದರು.

ಸ್ವಾಯತ್ತ ಸಂಸ್ಥೆಗಳಾದ ಕೇಂದ್ರ ಚುನಾವಣಾ ಆಯೋಗ, ಇಡಿ, ಸಿಬಿಐ, ಆದಾಯ ತೆರಿಗೆ ಇಲಾಖೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಮೋದಿ, ವಿಪಕ್ಷಗಳನ್ನು ಸರ್ವನಾಶ ಮಾಡಲೊರಟಿದ್ದಾರೆ ಎಂದು ಕಿಡಿ ಕಾರಿದರು.

ಬಿಜೆಪಿಗೆ ಕಾಂಗ್ರೆಸ್ ಮಾತ್ರ ಪರ್ಯಾಯ ಪಕ್ಷವಾಗಿದ್ದು, ದೇಶದ ಪ್ರಜಾಪ್ರಭುತ್ವದ ಉಳಿವಿಗಾಗಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಪ್ರತಿಪಾದಿಸಿದರು.

ಡಿ.ಕೆ.ಶಿವಕುಮಾರ್ ನಮ್ಮ ಪಕ್ಷದ ಕಟ್ಟಾಳು. ಬಿಜೆಪಿಗೆ ಹೋಗಲಿಲ್ಲ ಎಂಬ ಕಾರಣಕ್ಕೆ ಇಡಿ ಅಧಿಕಾರಿಗಳ ತನಿಖೆಗೆ ಸ್ಪಂದಿಸಿದರೂ ಇಡಿ ಇಲಾಖೆಯನ್ನು ದುರುಪಯೋಗ ಮಾಡಿಕೊಂಡು ಪ್ರತಿಪಕ್ಷ ನಾಯಕರನ್ನು ಹತ್ತಿಕ್ಕೂವ ತಂತ್ರಗಾರಿಕೆ ನಡೆಸುತ್ತಿದೆ. ಈ ತಂತ್ರ ಹೆಚ್ಚು ದಿನ ನಡೆಯಲಾರದು ಎಂದರು.

ಬಿಜೆಪಿಯ ಅನಾಚಾರಗಳನ್ನು ಕಾಂಗ್ರೆಸ್ ಪಕ್ಷವು ಬೀದಿಗಿಳಿದು ಹೋರಾಟ ಮಾಡುವ ಮೂಲಕ ಜನರಿಗೆ ಮುಟ್ಟಿಸಬೇಕಿದೆ. ಸಾಮಾನ್ಯ ಪರಿಜ್ಞಾನ ಇಲ್ಲದವರನ್ನೂ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ಬಿಜೆಪಿ ಪಕ್ಷಕ್ಕೆ ಸೇರಿದರೆ ಯಾವ ತನಿಖೆಯನ್ನೂ ಮಾಡದೆ ಎಲ್ಲ ಅಧಿಕಾರ ನೀಡುವುದಾಗಿ ಬಿಜೆಪಿ ಪಕ್ಷದವರು ಆಮಿಷವೊಡ್ಡಿದ್ದರು. ಆದರೆ, ಅವರು ಬಿಜೆಪಿ ಸೇರಲಿಲ್ಲ ಎಂಬ ಒಂದೇ ಕಾರಣಕ್ಕೆ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿ ಬ್ಲ್ಯಾಕ್‌ ಮೇಲ್ ರಾಜಕಾರಣ ಮಾಡಲಾಗುತ್ತಿದೆ ಎಂದು ಟೀಕಿಸಿದರು.

ಸಿದ್ದರಾಮಯ್ಯ ಸರ್ಕಾರ ಅನುಷ್ಠಾನಗೊಳಿಸಿದ್ದ ಅನ್ನ ಭಾಗ್ಯ, ಕ್ಷೀರ ಭಾಗ್ಯ, ಇಂದಿರಾ ಕ್ಯಾಂಟೀನ್, ಸೇರಿದಂತೆ ಹಲವು ಯೋಜನೆಗಳನ್ನು ತಡೆಹಿಡಿಯಲು ಹೊರಟಿರುವ ಬಿಜೆಪಿ ಸರ್ಕಾರಕ್ಕೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ. ಇಂತಹ ಭ್ರಷ್ಟ ಸರ್ಕಾರದ ವಿರುದ್ಧ ಸಂಘಟನಾತ್ಮಕ ಹೋರಾಟ ಮಾಡಲು ಕಾರ್ಯಕರ್ತರು ಮುಂದಾಗಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆಯನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಹಿಸಿದ್ದರು. ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಎಂ.ಡಿ.ಲಕ್ಷ್ಮಿನಾರಾಯಣ ಉಪಸ್ಥಿತರಿದ್ದರು. ಮುಂದಿನ ಕಾಂಗ್ರೆಸ್ ಪಕ್ಷದ ಹೋರಾಟಗಳ ರೂಪುರೇಷೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

 

 

ಫ್ರೆಶ್ ನ್ಯೂಸ್

Latest Posts

Featured Videos