ಕನ್ನಡ ಧ್ವಜವನ್ನು ಹಾರಿಸಿಯೇ ಇಲ್ಲ; ಸಿ.ಟಿ. ರವಿ

ಕನ್ನಡ ಧ್ವಜವನ್ನು ಹಾರಿಸಿಯೇ ಇಲ್ಲ; ಸಿ.ಟಿ. ರವಿ

ಬೆಂಗಳೂರು, ನ. 1: ರಾಜ್ಯದೆಲ್ಲೆಡೆ ಇಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಆದರೆ, ಸರ್ಕಾರಿ ಕಾರ್ಯಕ್ರಮಗಳಲ್ಲಿ ಕನ್ನಡ ಬಾವುಟವನ್ನು ಹಾರಿಸದೆ ಇರುವುದು ಇದೀಗ ರಾಜ್ಯದಾದ್ಯಂತ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿದೆ.

ಈ ನಡುವೆ ಕನ್ನಡ ರಾಜ್ಯೋತ್ಸವದ ದಿನದಂದು ಕನ್ನಡ ಬಾವುಟ ಹಾರಿಸಿದ್ದನ್ನು ನಾನು ನೋಡಿಯೇ ಇಲ್ಲ ಎಂದು ಹೇಳುವ ಮೂಲಕ ಸಚಿವ ಸಿ.ಟಿ. ರವಿ ಹೊಸದೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ.

ಕನ್ನಡ ರಾಜ್ಯೋತ್ಸವ ನಿಮಿತ್ತ ಚಿಕ್ಕಮಗಳೂರು ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ರಾಜ್ಯೋತ್ಸವವನ್ನು ಆಚರಿಸಿದರು.

ಕನ್ನಡ ಧ್ವಜ ಹಾರಿಸದ ಸಚಿವರ ವಿರುದ್ಧ ಸಾಮಾನ್ಯವಾಗಿ ಜನಾಕ್ರೋಶ ರೂಪುಗೊಂಡು ಈಗಾಗಲೇ ಹಲವರು ಸಚಿವರ ವಿರುದ್ಧ ಟೀಕಾಪ್ರಹಾರ ನಡೆಸುತ್ತಿದ್ದಾರೆ. ಆದರೆ, ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಸಿ.ಟಿ. ರವಿ,ಕಳೆದ ವರ್ಷವೂ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕನ್ನಡ ಬಾವುಟವನ್ನು ಹಾರಿಸಿರಲಿಲ್ಲ. ಹೀಗಾಗಿ ಈ ವರ್ಷವೂ ಹಾರಿಸಿಲ್ಲ. ನಾನು ನೋಡಿದ ಹಾಗೆ ಯಾವ ವರ್ಷವೂ ರಾಜ್ಯೋತ್ಸವ ಸಮಾರಂಭದಲ್ಲಿ ಕನ್ನಡ ಧ್ವಜ ಹಾರಿಸಿರುವ ಉದಾಹರಣೆಯೇ ಇಲ್ಲ.

ಇತಿಹಾಸದಲ್ಲೇ ಎಲ್ಲೂ ಕನ್ನಡ ಧ್ವಜ ಹಾರಿಸಿದ ಉಲ್ಲೇಖಗಳಿಲ್ಲ ಎಂದು ಹೇಳುವ ಮೂಲಕ ಕನ್ನಡ ಧ್ವಜವನ್ನು ಹಾರಿಸದ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಸಿ.ಟಿ. ರವಿ ಅವರ ಈ ಹೇಳಿಕೆ ಇದೀಗ ಸಾಂಸ್ಕೃತಿಕ ಹಾಗೂ ರಾಜಕೀಯ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ, ಶಿವಮೊಗ್ಗದಲ್ಲೂ ಕನ್ನಡ ಧ್ವಜ ಹಾರಿಸದ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಕನ್ನಡ ಪರ ಹೋರಾಟಗಾರರು ಸಮಾರಂಭದಲ್ಲೇ ಘೋಷಣೆ ಕೂಗಿದ ಪ್ರಸಂಗ ನಡೆದಿದೆ.

 

 

ಫ್ರೆಶ್ ನ್ಯೂಸ್

Latest Posts

Featured Videos