ಖಾಸಗೀಕರಣ ವಿರೋಧಿಸಿ ನೌಕರರ ಪ್ರತಿಭಟನೆ

ಖಾಸಗೀಕರಣ ವಿರೋಧಿಸಿ ನೌಕರರ ಪ್ರತಿಭಟನೆ

ತುಮಕೂರು: ವಿದ್ಯುತ್ ಸರಬರಾಜು ಕಂಪನಿಗಳನ್ನು ಖಾಸಗೀಕರಣ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ, ಈಗಾಗಲೇ ಸರ್ಕಾರ ತಯಾರಿಸಿರುವ ದಾಸ್ತಾವೇಜುಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಸೋಮವಾರ ಬೆಸ್ಕಾಂ ನೌಕರರು,ಬೆಸ್ಕಾಂ ವೃತ್ತ ಕಚೇರಿ ಎದುರು ಕಪ್ಪು ಪಟ್ಟಿ ಧರಿಸಿ, ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.

ನಗರದ ಶಿವಕುಮಾರಸ್ವಾಮೀಜಿ ವೃತ್ತದಲ್ಲಿರುವ ಬೆಸ್ಕಾಂ ವೃತ್ತ ಕಚೇರಿ ಎದುರು ಸೋಮವಾರ ಬೆಳಗ್ಗೆ ೧೧ ಗಂಟೆಗೆ ತೊಳಿಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ ನೌಕರರು ಸರಕಾರ ಕೂಡಲೇ ಖಾಸಗೀಕರಣ ಪ್ರಕ್ರಿಯೆಯಿಂದ ಹಿಂದೆ ಸರಿಯುವಂತೆ ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಬೆಸ್ಕಾಂ ವೃತ್ತ ಕಚೇರಿಯ ಅಧೀಕ್ಷಕ ಇಂಜಿನಿಯರ್ ಗೋವಿಂದಪ್ಪ ಮಾತನಾಡಿ,ಕರ್ನಾಟಕ ರಾಜ್ಯದಲ್ಲಿರುವ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ,ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ, ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿಗಳನ್ನು ಖಾಸಗೀಕರಣಗೊಳಿಸಲು ಹೊರಟಿರುವುದು ಸರಿಯಲ್ಲ ರೈತರು, ಕಾರ್ಮಿಕರು ಹೋರಾಟ ನಡೆಸುತ್ತಿದ್ದಾರೆ.
ಈ ಮೂರು ಕಂಪನಿಗಳು, ಅದರಲ್ಲಿಯೂ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ, ಇಡೀ ರಾಜ್ಯದಲ್ಲಿಯೇ ಅತ್ಯುನ್ನತ ಸೇವೆಗೆ ಹೆಸರಾಗಿದೆ. ವಿದ್ಯುತ್ ಸರಬರಾಜು, ಕರ ವಸೂಲಿಯಲ್ಲಿಯೂ ಮುಂಚೂಣಿಯಲ್ಲಿದೆ. ಅಲ್ಲದೆ ಸರ್ಕಾರದ ಎಸ್ಸಿಪಿ, ಟಿ.ಎಸ್‌ಪಿ, ಕುಟೀರ ಜೋತಿ,ಭಾಗ್ಯ ಜೋತಿ,ರೈತರ ಪಂಪಸೆಟ್,ಇನ್ನಿತರ ಯೋಜನೆಗಳ ಮೂಲಕ ವಿದ್ಯುತ್ ಸಂಪರ್ಕ ಪಡೆದವರಿಗೂ ಉತ್ತಮ ಸೇವೆ ಒದಗಿಸಲಾಗುತ್ತಿದೆ.ಹೀಗಿದ್ದೂ ಸರಕಾರ ವಿದ್ಯುತ್ ಸರಬರಾಜು ಕಂಪನಿಗಳನ್ನು ಖಾಸಗೀಕರಣ ಮಾಡಲು ಹೊರಟಿರುವುದರ ಹಿಂದಿರುವ ಹುನ್ನಾರವೇನು ಎಂದು ಪ್ರಶ್ನಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos