ಉತ್ತರಪ್ರದೇಶ ಸರ್ಕಾರ ವಜಾಗೊಳಿಸಿ

ಉತ್ತರಪ್ರದೇಶ ಸರ್ಕಾರ ವಜಾಗೊಳಿಸಿ

ತುಮಕೂರು: ಉತ್ತರ ಪ್ರದೇಶ ಸರ್ಕಾರವನ್ನು ವಜಾಗೊಳಿಸಿ, ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಹಾಗೂ ಸದರಿ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸುವಂತೆ ಬಹುಜನ ಸಮಾಜ ಪಾರ್ಟಿ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಕುರಿತು ಮಾತನಾಡಿದ ಬಿಎಸ್‌ಪಿ ಜಿಲ್ಲಾಧ್ಯಕ್ಷ ಮಹಮದ್ ಹಾಸೀಮ್ ಇಕ್ಬಾಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ದಲಿತರು, ದಲಿತ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳನ್ನು ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದೆ.
ಸಾಕ್ಷ ನಾಶ ಮಾಡುವ ಉದ್ದೇಶದಿಂದ ಮೃತರ ಕಟುಂಬಕ್ಕೆ ಮೃತದೇಹ ಹಸ್ತಾಂತರಿಸದೆ ರಾತ್ರೋರಾತ್ರಿ ಸುಟ್ಟು ಹಾಕಿರುವುದು ಸರಿಯಾದ ಕ್ರಮವಲ್ಲ. ಸರ್ಕಾರವೇ ಪರೋಕ್ಷವಾಗಿ ಆರೋಪಿಗಳ ಪರವಾಗಿ ನಿಂತಿರುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾಗಿಲ್ಲ.
ಕೇಂದ್ರ ಸರ್ಕಾರ ಕೂಡಲೇ ಯೋಗಿ ಆದಿತ್ಯನಾಥ್ ಸರ್ಕಾರವನ್ನು ವಜಾಗೊಳಿಸಿ, ರಾಷ್ಟ್ರಪತಿ ಆಡಳಿತ ಸ್ಥಾಪಿಸಬೇಕು ಹಾಗೂ ಮನಿಷಾ ವಾಲ್ಮೀಕಿ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿ, ತಪಿತಸ್ಥರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ಬಿಎಸ್‌ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಂಗಧಾಮಯ್ಯ ಮಾತನಾಡಿ, ಮುಖ್ಯಮಂತ್ರಿ ಆದಿತ್ಯನಾಥ ಸರ್ಕಾರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಹತೋಟಿಯಲ್ಲಿಡುವಲ್ಲಿ ವಿಫಲವಾಗಿದೆ. ಸಾಕ್ಷಗಳನ್ನು ನಾಶಪಡಿಸಿರುವ ಪೊಲೀಸರನ್ನು ಸೇವೆಯಿಂದ ವಜಾ ಮಾಡಿ, ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಉಸ್ತುವಾರಿಗಳಾದ ಸೂಲಯ್ಯ, ರುದ್ರಪ್ಪ, ವಕೀಲರಾದ ರಂಗರಾಜು, ಮುಖಂಡರಾದ ಶಿವಕುಮಾರ್ ಮತ್ತಿತರರು ಭಾಗವಹಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos