ದೇವೀರಮ್ಮನ ವಿಶೇಷತೆ ಏನು?

ದೇವೀರಮ್ಮನ  ವಿಶೇಷತೆ ಏನು?

 ಚಿಕ್ಕಮಗಳೂರು, ಅ. 25 :  ಭಾರತದಲ್ಲಿರುವಂತಹ ಪ್ರತಿಯೊಂದು ಐತಿಹಾಸಿಕ ದೇವಾಲಯಗಳಿಗೂ ತನ್ನದೇ ಆದ ಪೌರಾಣಿಕ ಇತಿಹಾಸವಿದೆ. ಬಿಂಡಿಗ ದೇವೀರಮ್ಮ ದೇವಾಲಯ ಕಾಫಿ ನಾಡು  ಚಿಕ್ಕಮಗಳೂರು ಜಿಲ್ಲೆಯಲ್ಲಿದೆ. ಇಲ್ಲಿನ ವಿಶೇಷತೆ ಎಂದರೆ  ದೇವಾಲಯದ ಬಾಗಿಲು ತೆರುವುದು ವರ್ಷಕ್ಕೊಮ್ಮೆ ಮಾತ್ರ. ಅದೂ ಕೂಡಾ ದೀಪಾವಳಿಯಂದು ಮಾತ್ರ. ಮಲೆನಾಡಿನ ತಪ್ಪಲಿನಲ್ಲಿರುವ ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಸಮೀಪದ ಬಿಂಡಿಗ ಗ್ರಾಮದಲ್ಲಿರುವ ಚಂದ್ರದ್ರೋಣ ಪರ್ವತ ಶ್ರೇಣಿಗೆ ಹೊಂದಿಕೊಂಡಿರುವ 3 ಸಾವಿರ ಅಡಿ ಎತ್ತರದ ಬೆಟ್ಟವೇ  ದೇವೀರಮ್ಮ ಬೆಟ್ಟ.   ದೇವಿಯನ್ನು ಬಿಂಡಿಗ ದೇವೀರಮ್ಮ ಎಂತಲೂ ಕರೆಯುತ್ತಾರೆ. ದೂರದೂರಿನಿಂದ, ಹೊರ ರಾಜ್ಯಗಳಿಂದಲೂ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಆದರೆ ದೇವಿರಮ್ಮ ಬೆಟ್ಟಕ್ಕೆ ಪ್ರವೇಶವಿರುವುದು ಮಾತ್ರ ನರಕ ಚತುರ್ದಶಿಯಂದು. ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ವಿವಿಧೆಡೆಗಳಿಂದ ಜನರು ಆಗಮಿಸಿ ದೇವೀರಮ್ಮನ ದರ್ಶನ ಪಡೆಯುತ್ತಾರೆ.

ಪೌರಾಣಿಕ ಹಿನ್ನಲೆ : ಪೌರಾಣಿಕ ಹಿನ್ನಲೆಯ ಪ್ರಕಾರ ದುರ್ಗಾ ದೇವಿಯು ಮಹಿಷೂರು ಅಂದರೆ ಈಗಿನ ಮೈಸೂರಿನಲ್ಲಿ ಅಸುರನಾದ ಮಹಿಷಾಸುರನನ್ನು ಕೊಲ್ಲುತ್ತಾಳೆ. ಮಹಿಷಾಸುರನನ್ನು ಕೊಂದರೂ ಚಾಮುಂಡೇಶ್ವರಿಯ ಕೋಪ ತಣ್ಣಗಾಗಿರುವುದಿಲ್ಲ, ತನ್ನ ಕೋಪಕ್ಕೆ ಭಕ್ತರು ಸಿಲುಕಿಕೊಳ್ಳದಿರಲಿ ಎನ್ನುವ ಕಾರಣಕ್ಕೆ ಚಂದ್ರದ್ರೋಣ ಪರ್ವತದ ತಪ್ಪಲಿಗೆ ಬರುತ್ತಾಳೆ. ಈ ಪರ್ವತದಲ್ಲಿ ರುದ್ರಮುನಿ, ಸೀತಯ್ಯ, ಮುಳ್ಳಯ್ಯ, ದತ್ತಾತ್ರೇಯ, ಗಾಳಲ್ಲಿ ಅಜ್ಜಯ್ಯ ಈ ಐದು ಜನ ತಪಸ್ವಿಗಳು ನೆಲೆಸಿದ್ದರಂತೆ ಅವರಲ್ಲಿ ದೇವಿಯು ತನಗೆ ನೆಲೆಸಲು ಸ್ಥಳ ನೀಡುವಂತೆ ಕೋರುತ್ತಾಳೆ. ತಾವು ಐದು ಜನ ಪುರುಷರಾಗಿದ್ದರಿಂದ ತಮ್ಮಿಂದ ಅಣತಿ ದೂರದಲ್ಲಿ ನೆಲೆಸುವಂತೆ ಈ ಬೆಟ್ಟವನ್ನು ತೋರಿಸುತ್ತಾರೆ. ಅಂತೆಯೇ ದೇವಿರಮ್ಮ ಆ ಬೆಟ್ಟದಲ್ಲಿ ಹೋಗಿ ನೆಲೆಸುತ್ತಾಳೆ. ಅಂದಿನಿಂದ ಈ ಬೆಟ್ಟವು ದೇವೀರಮ್ಮ ಬೆಟ್ಟವೆಂದೇ ಹೆಸರು ಪಡೆಯಿತು.

ಫ್ರೆಶ್ ನ್ಯೂಸ್

Latest Posts

Featured Videos