ಸಕ್ಕರೆ ಉತ್ಪಾದನೆಯಲ್ಲಿ ಕೊರತೆ; ಬೆಲೆ ಏರಿಕೆ ಸಾಧ್ಯತೆ

ಸಕ್ಕರೆ ಉತ್ಪಾದನೆಯಲ್ಲಿ ಕೊರತೆ; ಬೆಲೆ ಏರಿಕೆ ಸಾಧ್ಯತೆ

ಬೆಂಗಳೂರು: ಈ ಬಾರಿಯ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಕಬ್ಬು ಬೆಳೆಯಲ್ಲಿ ಇಳಿಕೆ ಕಾಣುತ್ತದೆ, ಅಲ್ಲದೇ ಪಸಲು ಬರುವ ನಿರೀಕ್ಷೆ ಕಡಿಮೆಯಾಗಿದೆ. ಸಕ್ಕರೆ ಉತ್ಪಾದನೆ ಕಡಿಮೆ ಮತ್ತು ಬೆಲೆ ಏರಿಕೆಯಾಗುವ ಎಲ್ಲಾ ಸಾಧ್ಯತೆಗಳು ಕಂಡುಬರುತ್ತಿವೆ. ಈ ಸಮಸ್ಯೆ ಕೇವಲ ರಾಜ್ಯಕ್ಕೆ ಸೀಮಿತವಾಗಿರದೇ ದೇಶದ ಇತರ ರಾಜ್ಯಗಳಿಗೂ ಅನ್ವಯವಾಗುತ್ತದೆ ಎನ್ನುವುದು ಆತಂಕದ ವಿಷಯವಾಗಿದೆ.
ದೆಹಲಿಯಲ್ಲಿ ಗುರುವಾರ ನಡೆದ ಕಬ್ಬು ಮತ್ತು ಸಕ್ಕರೆ ಆಯುಕ್ತರ ಅಖಿಲ ಭಾರತ ಸಭೆಯಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಬರಗಾಲದ ಪರಿಸ್ಥಿತಿ ಮತ್ತು ನೀರಿನ ಬಿಕ್ಕಟ್ಟಿನ ಕುರಿತು ಚರ್ಚಿಸಲಾಯಿತು. ನೈಋತ್ಯ ಮುಂಗಾರು ಮಳೆಯ ಕೊರತೆಯಿಂದಾಗಿ ಕಬ್ಬು ಬೆಳೆಯುವ ಪ್ರದೇಶದ ಪ್ರಮಾಣ ಕಡಿಮೆಯಾಗಿದೆ, ಇದರಿಂದ ಕಬ್ಬಿನ ಗುಣಮಟ್ಟ ಮತ್ತು ಸಕ್ಕರೆ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ.
ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ನಂತರ ಕರ್ನಾಟಕವು ಭಾರತದಲ್ಲಿ ಮೂರನೇ ಅತಿದೊಡ್ಡ ಸಕ್ಕರೆ ಉತ್ಪಾದನ ರಾಜ್ಯವಾಗಿದೆ. ಭಾರತದ ಸಕ್ಕರೆ ಬೇಡಿಕೆಯ ಸುಮಾರು ಶೇ.10 ರಷ್ಟು ಕರ್ನಾಟಕ ಪೂರೈಸುತ್ತದೆ. ಮುಂದಿನ ದಿನಗಳಲ್ಲಿ ಸಕ್ಕರೆ ಉತ್ಪಾದನೆಯಲ್ಲಿ ಕೊರತೆ ಉಂಟಾಗಲಿದೆ ಮತ್ತು ಇದು ಸಕ್ಕರೆ ಬೆಲೆಯಲ್ಲಿ ಏರಿಕೆಗೆ ಕಾರಣವಾಗಬಹುದು ಎಂದು ಕರ್ನಾಟಕದ ಅಧಿಕಾರಿಗಳಿಂದ ತಿಳಿದು ಬಂದಿದೆ.
ಜುಲೈನಲ್ಲಿ ಬೆಳೆಗಳನ್ನು ಹಾಕಿದ ರೈತರು ಯಾವುದೇ ಬೆಳವಣಿಗೆಯನ್ನು ಕಾಣುತ್ತಿಲ್ಲ, ಕೆಲವರು ಅದನ್ನು ಕ್ರಷಿಂಗ್ ಘಟಕಗಳಿಗೆ ಸರಬರಾಜು ಮಾಡುವ ಬದಲು ಉತ್ಪನ್ನವಾಗಿ ಮಾರಾಟ ಮಾಡುತ್ತಿದ್ದಾರೆ, ಇದು ಸಕ್ಕರೆ ಮಾರುಕಟ್ಟೆಯ ಮೇಲೂ ಪರಿಣಾಮ ಬೀರುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos