ಕಾರ್ಮಿಕರನ್ನು ಅವಮಾನಿಸುತ್ತಿರುವ ಕೇಂದ್ರ ಸರ್ಕಾರ

 ಕಾರ್ಮಿಕರನ್ನು ಅವಮಾನಿಸುತ್ತಿರುವ ಕೇಂದ್ರ ಸರ್ಕಾರ

ಮಂಗಳೂರು,ಜ.08: ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುವ ಮೂಲಕ ಕಾರ್ಮಿಕರನ್ನು ಅವಮಾನಿಸುತ್ತಿದೆ. ಹಾಗಾಗಿ ಮುಷ್ಕರ ನಡೆಸುವುದು ಅನಿವಾರ್ಯವಾಯಿತು ಎಂದು ಸಿಐಟಿಯು ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಹೇಳಿದರು.

ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆಯ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ಬುಧವಾರ ರಾಷ್ಟ್ರ ವ್ಯಾಪಿ ಸಾರ್ವತ್ರಿಕ ಮುಷ್ಕರದ ಅಂಗವಾಗಿ ಮಂಗಳೂರು ಪುರಭವನದ ಆವರಣದಲ್ಲಿ ಏರ್ಪಡಿಸಿದ್ದ ಪ್ರತಿಭಟನಾ ಪ್ರದರ್ಶನದಲ್ಲಿ ಅವರು ಮಾತನಾಡಿದರು.

`ಅಚ್ಛೇ ದಿನ್’ ಬರುತ್ತದೆ, `ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂದೆಲ್ಲಾ ಬಣ್ಣದ ಮಾತುಗಳಿಂದ ಜನರನ್ನು ಮರುಳು ಮಾಡಿ ಅವರ ಮತಗಳನ್ನು ಪಡೆದು ಅಧಿಕಾರಕ್ಕೆ ಬಂದ ಕೇಂದ್ರ ಸರಕಾರ ಬಳಿಕ ತನ್ನ ಮಾತು ತಪ್ಪಿ ಜನರಿಗೆ ಮಂಕು ಬೂದಿ ಎರಚಿದೆ. ಕೇವಲ ಕಾರ್ಪೊರೇಟ್ ಸಂಸ್ಥೆಗಳ ಪರವಾಗಿ ನಿಂತು ಕಾರ್ಮಿಕರನ್ನು ಕಡೆಗಣಿಸಿದೆ. ತಪ್ಪು ಆರ್ಥಿಕ ನೀತಿಗಳಿಂದಾಗಿ ಅನೇಕ ಕೈಗಾರಿಕೆಗಳು ಮುಚ್ಚಲ್ಪಟ್ಟು ಲಕ್ಷಾಂತರ ಕಾರ್ಮಿಕರು ಬೀದಿ ಪಾಲಾಗಿದ್ದಾರೆ. ನಿರುದ್ಯೋಗ ಸಮಸ್ಯೆ ದೇಶ ವ್ಯಾಪಿ ಗಂಭೀರವಾಗಿದೆ ಎಂದು ಆರೋಪಿಸಿದ ಅವರು ದುಡಿಯುವ ವರ್ಗವನ್ನು ಕಡೆಗಣಿಸಿದರೆ ದೇಶದ ಆರ್ಥಿಕತೆ ಮತ್ತಷ್ಟು ಕುಸಿಯಲಿದೆ ಎಂದರು.

ಇಂಟಕ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿತ್ತರಂಜನ್ ಶೆಟ್ಟಿ, ಎಐಸಿಸಿಟಿಯು ಮುಖಂಡ ಭರತ್, ಬ್ಯಾಂಕ್ ನೌಕರರ ಪರವಾಗಿ ವಿನ್ಸೆಂಟ್, ಬ್ಯಾಂಕ್ ಅಧಿಕಾರಿಗಳ ಪರವಾಗಿ ರಾಘವ, ಎಲ್‌ಐಸಿ ಪರವಾಗಿ ರಾಘವೇಂದ್ರ ರಾವ್ ಅವರು ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ಇಂಟಕ್, ಎಐಟಿಯುಸಿ, ಸಿಐಟಿಯು, ಎಚ್‌ಎಂಎಸ್, ಎಐಬಿಇಎ, ಎಐಬಿಒಎ, ಬಿಇಎಫ್‌ಐ, ವಿಮೆ, ಅಂಚೆ, ಆರ್‌ಎಂಎಸ್, ರೈಲ್ವೇ, ಬಿಎಸ್‌ಎನ್‌ಎಲ್ ಮತ್ತು ಸರಕಾರಿ ನೌಕರರನ್ನು ಒಳಗೊಂಡ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆ ಈ ಸಾಂಕೇತಿಕ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು.

ಫ್ರೆಶ್ ನ್ಯೂಸ್

Latest Posts

Featured Videos