ಮತ್ತಷ್ಟು ವಿಳಂಬವಾಗಲಿದೆ ಬೆಂಗಳೂರು-ಮಂಗಳೂರು ರೈಲು ಸಂಚಾರ

ಮಂಗಳೂರು, ಆ.17: ಬೆಂಗಳೂರು-ಮಂಗಳೂರು ರೈಲು ಮಾರ್ಗದಲ್ಲಿ ರೈಲುಗಳ ಸಂಚಾರ ಹತ್ತು ದಿನ ವಿಳಂಬವಾಗಲಿದೆ. ದುರಸ್ತಿ ಕೆಲಸ ನಡೆಯುತ್ತಿರುವುದರಿಂದ ರೈಲು ಪ್ರಯಾಣ ಆರಂಭಕ್ಕೆ ಇನ್ನೂ ಕೆಲವು ದಿನಗಳು ಹಿಡಿಯಲಿವೆ.
ಸುಬ್ರಹ್ಮಣ್ಯ, ಸಕಲೇಶಪುರ ಮತ್ತು ಹಾಸನ ಭಾಗದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದರಿಂದ ಮಂಗಳೂರು-ಬೆಂಗಳೂರು ರೈಲು ಹಳಿ ಮೇಲೆ ಆಗಸ್ಟ್ 8 ರಂದು ಗುಡ್ಡ ಕುಸಿದು ಬಿದ್ದಿತ್ತು. ವಿಪರೀತ ಮಳೆಯಿಂದಾಗಿ ಎಡಕುಮೇರಿ ರೈಲು ನಿಲ್ದಾಣದ ಸಮೀಪ ಎರಡು ಕಡೆ ಗುಡ್ಡ ಕುಸಿದು ಬೃಹತ್ ಪ್ರಮಾಣದ ಮಣ್ಣು ಹಳಿ ಮೇಲೆ ಬಿದ್ದಿದ್ದು, ರೈಲ್ವೆ ಹಳಿಗೆ ಹಾನಿಯಾಗಿತ್ತು.

ಹಳಿಯ ಕೆಳ ಅಂಚಿನಲ್ಲಿ ನೀರಿನ ರಭಸದಿಂದಾಗಿ ಮಣ್ಣು ಕುಸಿದು, ಹಳಿಗಳು ಆಳಕ್ಕೆ ಜಾರಿದ್ದವು. ಇದೀಗ ದುರಸ್ತಿ ಕೆಲಸ ಭರದಿಂದ ಸಾಗುತ್ತಿದೆ. ಹಳಿಗಳನ್ನು ಸಂಪೂರ್ಣ ಜೋಡಿಸುವ ಕೆಲಸ ನಡೆಯುತ್ತಿದೆ. ಮತ್ತೆ ಮತ್ತೆ ಮಳೆಯಾಗುತ್ತಿರುವುದರಿಂದ ಕ್ಷಿಪ್ರ ಕಾಮಗಾರಿಗೆ ಸಮಸ್ಯೆಗಳೂ ಎದುರಾಗಿವೆ.
ಮಂಗಳೂರು- ಬೆಂಗಳೂರು ರೈಲು ಹಳಿಗೆ ಸಿರಿಬಾಗಿಲು ಹಾಗೂ ಇತರ 4 ಕಡೆ ಮಣ್ಣು ಕುಸಿದ ಪರಿಣಾಮ ರೈಲು ಸಂಚಾರ ಸ್ಥಗಿತಗೊಂಡಿತ್ತು. ಹೀಗಾಗಿ ಕಾಮಗಾರಿ ಪೂರ್ಣಗೊಳ್ಳಲು ಹಲವು ದಿನ ಹಿಡಿಯಬಹುದೆಂದು ಮೂಲಗಳು ತಿಳಿಸಿವೆ. ಈ ಕಾರಣದಿಂದ ಮಂಗಳೂರು-ಬೆಂಗಳೂರು ರೈಲು ಪ್ರಯಾಣ ವಿಳಂಬವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos