ಜನಾನುರಾಗಿ ಅರಸು ಛಾಯಾಚಿತ್ರ ಪ್ರದರ್ಶನ-ಪುಸ್ತಿಕೆ ಬಿಡುಗಡೆ

ಜನಾನುರಾಗಿ ಅರಸು ಛಾಯಾಚಿತ್ರ ಪ್ರದರ್ಶನ-ಪುಸ್ತಿಕೆ ಬಿಡುಗಡೆ

ಬೆಂಗಳೂರು, ಆ. 9 : ಜನಾನುರಾಗಿ ಅರಸು ಎಂದೇ ಗುರುತಿಸಲ್ಪಡುವ ಜಯಚಮರಾಜೊಡೆಯರ್ ಅವರ ಅತ್ಯಂತ ಅಪರೂಪದ ಚಿತ್ರಗಳ ಪ್ರದರ್ಶನವನ್ನು ವಾರ್ತಾ ಮತ್ತು ಸಾರ್ವಜನಿಕ  ಸಂಪರ್ಕ ಇಲಾಖೆ ಲಾಲ್‍ಬಾಗ್‍ನಲ್ಲಿ ಆಯೋಜಿಸಿದ್ದು ಮೈಸೂರು ರಾಜಮನೆತನದ ಶ್ರೀಮತಿ ಪ್ರಮೋದಾ ದೇವಿ ಒಡೆಯರ್ ಉದ್ಘಾಟಿಸಿದರು.

ಲಾಲ್‍ಬಾಗ್‍ನಲ್ಲಿ ನಡೆಯುತ್ತಿರುವ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನದ ಆವರಣದಲ್ಲಿ ಆಯೋಜಿಸಿರುವ ಈ ಚಿತ್ರಪ್ರದರ್ಶನದೊಂದಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಿಸಿರುವ “ಜನಾನುರಾಗಿ ಅರಸು” ಕಾಫಿ ಟೇಬಲ್ ಪುಸ್ತಕವನ್ನೂ ಬಿಡುಗಡೆ ಮಾಡಲಾಯಿತು. ಸಂಸದ ತೇಜಸ್ವಿ ಸೂರ್ಯ ಹಾಜರಿದ್ದರು.

ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಪ್ರಮೋದಾ ದೇವಿ ಅವರು ಇದೊಂದು ಸಂಗ್ರಹ ಯೋಗ್ಯ ಸಂಚಿಕೆ ಆಗಿದ್ದು ಪುಸ್ತಕದಲ್ಲಿ ಸಾಕಷ್ಟು ಅಪರೂಪದ ಚಿತ್ರಗಳಿವೆ ಎಂದರು.  ಜಯಚಾಮರಾಜ ಒಡೆಯರ್ ಅವರನ್ನು ಇಂದಿನ ಪೀಳೆಗೆಗೆ ಪರಿಚಯಿಸುವ ವಾರ್ತಾ ಇಲಾಖೆ ಪ್ರಯತ್ನಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಜಯಚಾಮರಾಜ ಒಡೆಯರ್ ಜನಸಾಮಾನ್ಯರ ಅರಸು ಎಂದು ಬಿಂಬಿಸುವ ಈ ಪುಸ್ತಿಕೆಯಲ್ಲಿರುವ ಮಾಹಿತಿ ಅಪರೂಪದ ಚಿತ್ರಗಳ ಪ್ರದರ್ಶನವನ್ನು ಅತ್ಯಂತ ಆಸಕ್ತಿಯಿಂದ ವೀಕ್ಷಿಸಿದ ಪ್ರಮೋದಾ ದೇವಿ ಅವರು ರಾಜಮಾತೆ ವಾಣಿ ವಿಲಾಸ ಅಮ್ಮಣ್ಣಿ ಅವರೊಂದಿಗೆ ಯುವರಾಜ ಜಯಚಾಮರಾಜ ಒಡೆಯರ್, ಮಹಾರಾಜರಾಗಿ ಪಟ್ಟವೇರಿದ ಸಂದರ್ಭ, ಸಹೋದರ ಸಹೋದರಿಯರೊಂದಿಗೆ ಜಯಚಾಮರಾಜ ಒಡೆಯರ್,ಮಹಾರಾಣಿ ಸತ್ಯಸತ್ಯಪ್ರೇಮ ಕುಮಾರಿಯವರೊಂದಿಗೆ ವಿವಾಹ, ದಸರಾ ಸಂದರ್ಭದಲ್ಲಿ ಯುವರಾಜರು, ಬಳಿಕ ರಾಜ್ಯಪಾಲರಾಗಿ ಜಯಚಾಮರಾಜ ಒಡೆಯರ್ ಅವರ ನೂರಕ್ಕೂ ಹೆಚ್ಚು ಚಿತ್ರಗಳನ್ನು ಅತ್ಯಂತ ಕುತೂಹಲಭರಿತರಾಗಿ ವೀಕ್ಷಿಸಿದರು. ವಿಧಾನಸಭೆ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರಾಗಿ ಜಯಚಾಮರಾಜೊಡೆಯರ್ ಅವರ ಚಿತ್ರಗಳು, ವಿಧಾನಸೌಧ ನಿರ್ಮಾಣಕ್ಕೂ ಮುನ್ನ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ನಡೆದ ಜಂಟಿ ಅಧಿವೇಶನಕ್ಕೆ ಆಗಮಿಸುತ್ತಿರುವುದು, ಜಂಟಿ ಅಧಿವೇಶನ ಉದ್ದೇಶಿಸಿ ಪುರಭವನದಲ್ಲಿ ಮಾತನಾಡುತ್ತಿರುವುದು, ಪ್ರಧಾನಿ ಜವಾಹರಲಾಲ್‍ನೆಹರೂ ಅವರನ್ನು ಎಚ್‍ಎಎಲ್ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸುತ್ತಿರುವುದು, ಸೋವಿಯತ್ ಅಧ್ಯಕ್ಷ ನಿಖಿತಾ ಕ್ರುಶ್ಚೇವ್, ವಿಯೆಟ್ನಾಂ ಅಧ್ಯಕ್ಷ ಹೋಚಿಮಿನ್ ಅವರೊಂದಿಗೆ, ಕರ್ನಾಟಕದ ಐತಿಹಾಸಿಕ ಏಕೀಕರಣ ಸಮಾರಂಭ, ಕೆಂಗಲ್,  ಸೇರಿದಂತೆ ರಾಜ್ಯಪಾಲರಾಗಿ ಗಣ್ಯರೊಂದಿಗೆ ಇರುವ ಚಿತ್ರಗಳನ್ನು ನೋಡಿ ಅಪರೂಪದ ಚಿತ್ರಗಳ ಸಂಗ್ರಹದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ತೋಟಗಾರಿಕಾ ಇಲಾಖೆ ನಿರ್ದೇಶಕ ಡಾ.ಎಂ.ವಿ.ವೆಂಕಟೇಶ್, ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ನಿರ್ದೇಶಕರು ಮತ್ತು ಮುಖ್ಯಮಂತ್ರಿಯವರ ಮಾಧ್ಯಮಕಾರ್ಯದರ್ಶಿ ಎನ್.ಭೃಂಗೀಶ್, ಜಂಟಿ ನಿರ್ದೇಶಕ ಬಸವರಾಜ ಕಂಬಿ ಮತ್ತಿತರರು ಹಾಜರಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos