ಮುಂಬೈ: ಚಿಂತಕ ಆನಂದ್ ತೇಲ್ ತುಂಬ್ಡೆ ಬಂಧನ

ಮುಂಬೈ: ಚಿಂತಕ ಆನಂದ್ ತೇಲ್ ತುಂಬ್ಡೆ ಬಂಧನ

ಮುಂಬೈ: ಖ್ಯಾತ ಲೇಖಕ, ಸಾಮಾಜಿಕ ಹೋರಾಟಗಾರ, ಗೋವಾ ಇನ್ಸಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಪ್ರಾಧ್ಯಾಪಕ ಆನಂದ್‌ ತೇಲ್ತುಂಬ್ದೆ ಅವರನ್ನು ಪುಣೆ ಪೊಲೀಸರು ಬೆಳಗ್ಗಿನ ಜಾವ 3.30ಕ್ಕೆ ಮುಂಬೈ ವಿಮಾನ ನಿಲ್ದಾಣದಿಂದ ಬಂಧಿಸಿದ್ದಾರೆ.

2017ರ ಭೀಮಾ ಕೊರೆಗಾಂವ್‌ ಹಿಂಸಾಚಾರ ಪ್ರಕರಣದಲ್ಲಿ ತೇಲ್ತುಂಬೆ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು. ಈ ಎಫ್‌ಐಆರ್ ರದ್ದು ಕೋರಿ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಆದರೆ ಸುಪ್ರೀಂ ಕೋರ್ಟ್‌ ಎಫ್‌ಐಆರ್‌ ರದ್ದಿಗೆ ನಿರಾಕರಿಸಿ ಅವರಿಗೆ ಬಂಧನದಿಂದ ನಾಲ್ಕು ವಾರಗಳ ಮುಕ್ತಿ ನೀಡಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿತ್ತು.

ಇದರ ಬಳಿಕ ಅವರು ನಿರೀಕ್ಷಣಾ ಜಾಮೀನು ಕೋರಿ ಪುಣೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ ಪುಣೆ ನ್ಯಾಯಾಲಯ ಜಾಮೀನು ಅರ್ಜಿಯನ್ನು ಶುಕ್ರವಾರ ವಜಾಗೊಳಿಸಿತ್ತು. ನ್ಯಾಯಾಲಯ ಅರ್ಜಿ ವಜಾಗೊಳಿಸುತ್ತಿದ್ದಂತೆ ಚುರುಕಾದ ಪುಣೆ ಪೊಲೀಸರು ರಾತೋ ರಾತ್ರಿ ಅವರನ್ನು ಬಂಧಿಸಿದ್ದಾರೆ.

ಎಸಿಪಿ ಶಿವಾಜಿ ಪವಾರ್ ಈ ಬಂಧನ ದೃಢಪಡಿಸಿದ್ದು, ಅವರನ್ನು ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಆನಂದ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪುಣೆ ನ್ಯಾಯಾಲಯ ತಿರಸ್ಕರಿಸಿದ ಬೆನ್ನಲ್ಲೇ ಪೊಲೀಸರು ಅವರನ್ನು ಬಂಧಿಸಿದ್ದಾರೆ.

“ಆನಂದ್ ತೇಲ್ ತುಂಬ್ಡೆಯವರು ಅಪರಾಧ ಎಸಗುವಲ್ಲಿ ಶಾಮೀಲಾಗಿದ್ದಾರೆ ಎನ್ನುವುದನ್ನು ನಿರೂಪಿಸಲು ತನಿಖಾಧಿಕಾರಿಗಳು ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿದ್ದಾರೆ” ಎಂದು ಹೇಳಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಕಿಶೋರ್ ವಂದಾನೆ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿದ್ದರು.

ಮುಂಬೈ ವಿಮಾನ ನಿಲ್ದಾಣದಲ್ಲಿ ಆನಂದ್ ತೇಲ್ ತುಂಬ್ಡೆಯವರನ್ನು ವಶಕ್ಕೆ ಪಡೆದ ಪುಣೆ ಇನ್‌ಸ್ಪೆಕ್ಟರ್ ಇಂದೂಲ್‌ ಕುಮಾರ್, ಆನಂದ್ ಅವರ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತವಾದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗುತ್ತಿದೆ ಎಂದು ವಕೀಲ ಪ್ರದೀಪ್ ಮಂಧ್ಯಾನ್ ಅವರಿಗೆ ತಿಳಿಸಿದರು.

ಸುಪ್ರೀಂಕೋರ್ಟ್ ಜನವರಿ 14ರಂದು ಆನಂದ್ ರಿಗೆ ನಾಲ್ಕು ವಾರಗಳ ಕಾಲ ಬಂಧನದಿಂದ ರಕ್ಷಣೆ ನೀಡಿ, ವಿಚಾರಣಾ ನ್ಯಾಯಾಲಯದಲ್ಲಿ ಅದಕ್ಕೂ ಮೊದಲು ಜಾಮೀನು ಪಡೆಯುವಂತೆ ಸೂಚಿಸಿತ್ತು. ಈ ಸುರಕ್ಷೆ ಅವಧಿ ಫೆಬ್ರವರಿ 11ಕ್ಕೆ ಕೊನೆಗೊಳ್ಳುತ್ತದೆ.

ಇದೇ ಸಂಘರ್ಷಕ್ಕೆ ಸಂಬಂಧಿಸಿದಂತೆ ಮತ್ತು ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಿದ್ದಾರೆ ಎನ್ನುವ ಆರೋಪದ ಮೇಲೆ ಈ ಹಿಂದೆಯೇ ಅರುಣ್‌ ಫೆರೇರಾ, ವರುಣ್‌ ಗೊನ್ಸಾಲ್ವೆಸ್‌, ಸುಧಾ ಭಾರಧ್ವಾಜ್‌, ಪಿ. ವರವರ ರಾವ್, ಗೌತಮ್‌ ನವಲೇಖ ಸೇರಿದಂತೆ 9 ಜನರನ್ನು ಪೊಲೀಸರು ಬಂಧಿಸಿದ್ದರು.

ಮುಂದೆ ಅವರನ್ನು ಸುಪ್ರೀಂ ಕೋರ್ಟ್‌ ಗೃಹ ಬಂಧನಕ್ಕೆ ದೂಡಿತ್ತು. ಈ ಅವಧಿ ಮುಗಿದ ಬಳಿಕ ಒಂಬತ್ತೂ ಜನರು ಜೈಲು ಪಾಲಾಗಿದ್ದರು. ಈ ‘ನಗರ ನಕ್ಸಲ’ರ ಬಂಧನದ ವೇಳೆ ಆನಂದ್‌ ತೇಲ್ತುಂಬ್ಡೆ ಬಂಧಿತರಾಗದೆ ಆರೋಪ ಹೊತ್ತೇ ಹೊರಗೆ ಉಳಿದಿದ್ದರು. ಈಗ ಅವರನ್ನೂ ಪುಣೆ ಪೊಲೀಸರು ಬಂಧಿಸಿದ್ದಾರೆ.

ಅವರ ಬಂಧನವನ್ನು ಸಹಾಯಕ ಆಯುಕ್ತ ಶಿವಾಜಿ ಪವಾರ್‌ ಖಚಿತ ಪಡಿಸಿದ್ದು, ಪುಣೆ ವಿಶೇಷ ನ್ಯಾಯಾಲಯದ ಮುಂದೆ ಅವರನ್ನು ಹಾಜರುಪಡಿಸಲಾಗುವುದು ಎಂದು ಹೇಳಿದ್ದಾರೆ. ಪ್ರಕರಣದ ತನಿಖೆಗಾಗಿ ಅವರನ್ನು ಪೊಲೀಸ್‌ ಕಸ್ಟಡಿಗೆ ಪಡೆಯಲು ಕೋರಲಿದ್ದೇವೆ ಎಂದು ಪುಣೆ ಪೊಲೀಸರು ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos