ಅಮಿತ್ ಶಾ- ರಾಜಕೀಯ ಶಕ್ತಿ ಕೇಂದ್ರವಾಗಲಿದೆ ಹುಬ್ಬಳ್ಳಿ

ಅಮಿತ್ ಶಾ- ರಾಜಕೀಯ ಶಕ್ತಿ ಕೇಂದ್ರವಾಗಲಿದೆ ಹುಬ್ಬಳ್ಳಿ

ಹುಬ್ಬಳ್ಳಿ, ಜ. 16: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತಾ ಅವರ ಜ. 18 ಹುಬ್ಬಳ್ಳಿ ಭೇಟಿ ಬಹು ಮಹತ್ವ ಪಡೆದುಕೊಂಡಿದ್ದು, ಒಂದು ಕಡೆ ಪೌರತ್ವ ಕಾಯ್ದೆಯ ತಿದ್ದುಪಡಿ ಕುರಿತಂತೆ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ವಿಸ್ತರಣೆ ವಿಳಂಬ ನೂತನ ಬಿಜೆಪಿ ಶಾಸಕರಲ್ಲಿ ಅಸಮಾಧಾನ ಮೂಡಿಸಿದ್ದು, ಈಗಾಗಲೇ ಬಿಜೆಪಿ ನೂತನ ಶಾಸಕರು ಬಿ.ಎಸ್ ಯಡಿಯೂರಪ್ಪರನ್ನು ಭೇಟಿ ಮಾಡಿ ಅಸಮಾಧಾನ ತೋಡಿಕೊಂಡಿದ್ದಾರೆ. ಫೆಬ್ರವರಿ 17ನೇ ತಾರೀಕಿನಂದು ವಿಧಾನಸಭಾ ಜಂಟಿ ಅಧಿವೇಶನ ನಡೆಯಲಿದೆ. ಇದಕ್ಕೂ ಮುನ್ನವೇ ಸಂಪುಟ ವಿಸ್ತರಣೆ ಆಗಬೇಕೆಂದು ಸಿಎಂ ಬಿ.ಎಸ್ ಯಡಿಯೂರಪ್ಪಗೆ ಬಿಜೆಪಿ ನೂತನ ಶಾಸಕರು ಒತ್ತಡ ಹಾಕಿದ್ದಾರೆ. ಈ ಮಧ್ಯೆ ಜನವರಿ 18 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಆಗಮಿಸುವ ಪ್ರಯುಕ್ತ  ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿರುವ ಸಚಿವ ಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ಸಿಗುತ್ತೋ? ಇಲ್ಲವೋ ಎಂಬ ಪ್ರಶ್ನೆ ಶುರುವಾಗಿದೆ. ಅಮಿತ್ ಶಾ ಸಚಿವ ಸಂಪುಟ ವಿಸ್ತರಣೆ ಸೇರಿದಂತೆ ಪೌರತ್ವ ತಿದ್ದುಪಡಿ ಕಾಯ್ದೆ ವಿವಾದ ಮತ್ತು ಪಕ್ಷ ಸಂಘಟನೆ ಬಗ್ಗೆ ರಾಜ್ಯ ನಾಯಕರೊಂದಿಗೆ ಚರ್ಚಿಸಲು ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಮೊದಲು ಬೆಂಗಳೂರಿನಂಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸಂಜೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಪ್ರಮುಖ ರಾಜ್ಯ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. ನಂತರ ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿರುವ ಪೌರತ್ವ ಕಾಯ್ದೆ ಕುರಿತಾದ ಜನಜಾಗೃತಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಹುಬ್ಬಳ್ಳಿಯ ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಬಹಿರಂಗ ಸಮಾವೇಶದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವರು. ಆದರೆ ಜ.18 ರಂದು ಸಂಜೆ ಬೆಂಗಳೂರು ಅಥವಾ ಹುಬ್ಬಳ್ಳಿಯ ಖಾಸಗಿ ಹೋಟೆಲ್‌ವೊಂದರಲ್ಲಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ರಾಜ್ಯ ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಪ್ರಮುಖವಾಗಿ ಸಿಎಂ ಯಡಿಯೂರಪ್ಪ ಜತೆ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ.

ಈಗಾಗಲೇ ಸಿಎಂ ಬಿ.ಎಸ್ ಯಡಿಯೂರಪ್ಪ, ನಾನು ದೆಹಲಿಗೆ ಹೋಗುತ್ತಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾರ ಭೇಟಿಗೆ ಅವಕಾಶ ಸಿಕ್ಕಿರಲಿಲ್ಲ. ಹೇಗಿದ್ದರೂ ಜ.18ರಂದು ಕೇಂದ್ರ ಗೃಹ ಸಚಿವರು ರಾಜ್ಯಕ್ಕೆ ಆಗಮಿಸಲಿದ್ದಾರೆ. ಅವರು ಬಂದಾಗಲೇ ಭೇಟಿ ಮಾಡಿ ಚರ್ಚಿಸಿ ಸಂಪುಟ ವಿಸ್ತರಣೆ ಕುರಿತು ತೀರ್ಮಾನ ಮಾಡುತ್ತೇನೆ ಎಂದು ಹೇಳಿದ್ದಾರೆ.

ಒಂದು ಮೂಲಗಳ ಪ್ರಕಾರ, ಯಡಿಯೂರಪ್ಪ ಜ. 18ರ ಬಳಿಕವೇ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆಗಳು ಹೆಚ್ಚಿವೆ. ಕಳೆದ ವರ್ಷ ನಡೆದಿದ್ದ ಉಪಚುನಾವಣೆಯಲ್ಲಿ ಗೆದ್ದು ಅರ್ಹಗೊಂಡ 11 ಶಾಸಕರ ಪೈಕಿ 7 ಮಂದಿಗೆ ಮಾತ್ರ ಮಂತ್ರಿ ಸ್ಥಾನ ನೀಡಲು ಬಿಎಸ್‌ವೈ ಯೋಜಿಸಿದ್ದರೆನ್ನಲಾಗಿದೆ. ಇದು ತಿಳಿದ ರಮೇಶ್ ಜಾರಕಿಹೊಳಿ ಸತತ ಒತ್ತಡಗಳನ್ನು ಹಾಕಿದ ಪರಿಣಾಮ, ಸಂಪುಟದಲ್ಲಿ ಅರ್ಹರ ಸಂಖ್ಯೆಯನ್ನು ೯ಕ್ಕೆ ಏರಿಸಲು ನಿರ್ಧರಿಸಿದ್ದಾರೆ. ಆದರೂ ಕೂಡ ರಮೇಶ್ ಜಾರಕಿಹೊಳಿ ಪಟ್ಟು ಸಡಿಲಿಸಿಲ್ಲ.

ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಸಚಿವ ಸಂಪುಟ ವಿಸ್ತರಣೆಯಾಗಬೇಕು ಅಥವಾ ಪುನರ್ ರಚನೆಯಾಗಬೇಕು ಎಂಬುದನ್ನು ಕುರಿತು ನಮ್ಮ ರಾಷ್ಟ್ರೀಯ ಅಧ್ಯಕ್ಷರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪನವರು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.  ಜ. 18 ರಂದು ಬೆಂಗಳೂರು ಅಥವಾ ಹುಬ್ಬಳ್ಳಿಯಲ್ಲಿ ಪ್ರಮುಖರ ಸಭೆ ನಡೆಸಲಿದ್ದು ಸಭೆಯ ನಂತರ ಬೆಳವಣಿಗೆ ತಿಳಿಯುತ್ತವೆ.

 

ಫ್ರೆಶ್ ನ್ಯೂಸ್

Latest Posts

Featured Videos