ಕುಷ್ಠರೋಗದ ವಿರುದ್ಧ ಕೊನೆಯ ಯುದ್ಧ

ಕುಷ್ಠರೋಗದ ವಿರುದ್ಧ ಕೊನೆಯ ಯುದ್ಧ

ಕೃಷ್ಣರಾಜಪುರ, . 30: ಕುಷ್ಟರೋಗ ನಿರ್ಮೂಲನೆಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಬೆಂ.ನ.ಜಿಲ್ಲಾ ಕುಷ್ಠ ರೋಗ ನಿರ್ಮೂಲನ ಅಧಿಕಾರಿ ಡಾ.ನದೀಂ ಅಹಮ್ಮದ್ ಮನವಿ ಮಾಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಕುಷ್ಠರೋಗದ ವಿರುದ್ಧ ಕೊನೆಯ ಯುದ್ಧ ಎಂಬ ಕಾರ್ಯಕ್ರಮವನ್ನು ಕೆ.ಆರ್.ಪುರ ಬಸವಪುರ ವಾರ್ಡ್ ಬಿ.ವಿ.ಎನ್.ಹೆಚ್.ಎಸ್ ಶಾಲಾ ಮಕ್ಕಳ ಸಹಯೋಗದೊಂದಿಗೆ ಗಾಂಧಿಜೀ ಅವರ ಹುತಾತ್ಮ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಸ್ಪರ್ಶ್ ಕುಷ್ಟ ಅರಿವು ಆಂಧೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.

ದೇಹದ ಯಾವುದೇ ಭಾಗದಲ್ಲಿ ತಿಳಿಬಿಳಿ ಅಥವಾ ತಾಮ್ರ ಬಣ್ಣದ ಮಚ್ಚೆಗಳು ಕಂಡುಬಂದರೆ ಮತ್ತು ನರಗಳು ದಪ್ಪವಾಗಿ ಗಂಟುಗಳಂತಹ ಲಕ್ಷಣಗಳು ಕಂಡು ಬಂದರೆ ಕೂಡಲೇ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡುವಂತೆ ಸಲಹೆ ನೀಡಿದರು. ಕುಷ್ಠ ರೋಗವೂ ಸಾಂಕ್ರಾಮಿಕ ರೋಗವಾಗಿದ್ದು, ನರಗಳು ಮತ್ತು ಚರ್ಮದ ಮೇಲೆ ಪರಿಣಾಮ ಬೀರುವ ಮೂಲಕ ಅಂಗವಿಕಲತೆ ಉಂಟಾಗುತ್ತದೆ ಎಂದು ತಿಳಿಸಿದರು. ಭಾರತವನ್ನು ಕುಷ್ಠ ರೋಗ ಮುಕ್ತ ದೇಶವನ್ನಾಗಿ ಮಾಡಲು ಎಲ್ಲರಿಗೂ ಪ್ರತಿಜ್ಞಾವಿದಿ ಬೋಧಿಸಿದರು.

ನಂತರ ಮಾತನಾಡಿದ ಬೆಂ.ಪೂರ್ವ. ತಾಲೂಕು ವೈದ್ಯಾಧಿಕಾರಿ ಡಾ.ಚಂದ್ರಶೇಖರ್, ಕುಷ್ಠ ಮುಕ್ತ ಭಾರತ ನನ್ನ ಸ್ವಪ್ನ ಎಂಬ ಧ್ಯೇಯ ದೊಂದಿಗೆ ಕುಷ್ಠ ರೋಗ ಅರಿವು ಆಂಧೋಲನ ಕಾರ್ಯಕ್ರಮವು ಜನವರಿ 30 ರಿಂದ ಫೆಬ್ರವರಿ 13ನೇ ತಾರೀಖು ವರೆಗೆ‌ ಜರುಗಲಿದ್ದು, ವಾರ್ಡ್ನ ವ್ಯಾಪ್ತಿಯ ಎಲ್ಲಾ ಭಾಗಗಳಿಗೂ ಆರೋಗ್ಯ ಇಲಾಖೆ ಸಿಬ್ಬಂದಿ ತೆರಳಿ ಕುಷ್ಟರೋಗದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕುಷ್ಠ ರೋಗ ಕುರಿತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಸಬ್ ಲೆಫ್ಟಿನೆಂಟ್ ಚಂದ್ರಕಾಂತ್, ದೈಹಿಕ ಶಿಕ್ಷಣ ರಂಗಯ್ಯ, ಆರೋಗ್ಯ ನಿರೀಕ್ಷಕ ಗುರುರಾಜ್, ಆರೋಗ್ಯ ಶಿಕ್ಷಣ ಅಧಿಕಾರಿ ವಿಂದ್ಯ, ಹಿರಿಯ ಆರೋಗ್ಯ ನಿರೀಕ್ಷಕ ರಾಜು, ನರಸಿಂಹ ಮೂರ್ತಿ, ಕಿರಿಯ ಪುರುಷ ಆರೋಗ್ಯ ಸಹಾಯಕ ಹೆಚ್.ಮಹೇಶ್, ಮಹಿಳಾ ಸಹಾಯಕಿ ಈಶ್ವರಿ, ಮಂಜುಳ ಸೇರಿದಂತೆ ಇತರರು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos