ರಾಜ್ಯಾದ್ಯಂತ ಕನ್ನಡ ಹಬ್ಬ; ಸಿಎಂ ಧ್ವಜಾರೋಹಣ

ರಾಜ್ಯಾದ್ಯಂತ ಕನ್ನಡ ಹಬ್ಬ; ಸಿಎಂ ಧ್ವಜಾರೋಹಣ

ಬೆಂಗಳೂರು , ನ. 1: ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆಮಾಡಿದೆ. ಕನ್ನಡ ರಾಜ್ಯೋತ್ಸವದ ಅಂಗವಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಧ್ವಜಾರೋಹಣ ನಡೆಸಿದರು. ನಗರದ ಕಂಠೀರವ ಮೈದಾನದಲ್ಲಿ ಮೊದಲು ರಾಷ್ಟ್ರಧ್ವಜಾರೋಹಣದ ಬಳಿಕ ಕನ್ನಡ ಧ್ವಜಾರೋಹಣ ನೆರವೇರಿಸಿದರು.

ಬಳಿಕ ಶಾಲಾ ಮಕ್ಕಳಿಂದ ಗೌರವ ವಂದನೆಯನ್ನು ಸಿಎಂ ಬಿಎಸ್‌ವೈ ಸ್ಪೀಕರಿಸಿದರು. ಇದೇ ಸಂಧರ್ಭದಲ್ಲಿ ವಿವಿಧ ಶಾಲಾ ಮಕ್ಕಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಧ್ವಜಾರೋಹಣದ ಬಳಿಕ ಮಾತನಾಡಿದ ಸಿಎಂ ಬಿಎಸ್‌ವೈ ಕನ್ನಡ ಭಾಷೆಗೆ ಎರಡುಸಾವಿರ ವರ್ಷಗಳ ಇತಿಹಾಸವಿದೆ. ಜಗತ್ತಿನಲ್ಲಿ ಅತ್ಯುತ್ತಮ ಸಾಹಿತ್ಯ ಸಂಪತ್ತನ್ನು ಹೊಂದಿರುವ ಭಾಷೆಗಳಲ್ಲಿ ಕನ್ನಡವೂ ಒಂದು ಎಂದರು.

ಆದಿ ಕವಿ ಪಂಪನಿಂದ ಹಿಡಿದು ಕುವೆಂಪುವರೆಗೆ, ಹರಿಹರರಿಂದ ಹಿಡಿದು ಬಸವಣ್ಣನವರೆಗೆ ಪ್ರಾಚೀನ ಮಧ್ಯಯುಗ, ಆಧುನಿಕ, ನವೋದಯ, ನವ್ಯ, ಬಂಡಾಯ, ದಲಿತ ಸಾಹಿತ್ಯ ಪರಂಪರೆಯಲ್ಲಿ ಕನ್ನಡ ಭಾಷೆ ಉತ್ಕೃಷ್ಟವಾಗಿ ಹೊರಹೊಮ್ಮಿದೆ ಎಂದರು.

ಇದೇ ಸಂದರ್ಭದಲ್ಲಿ ಕನ್ನಡ ಅಭಿಮಾನ ಕೇವಲ ಆಚರಣೆಗೆ ಸೀಮಿತವಾಗದೆ ನಮ್ಮ ಜೀವನ ಶೈಲಿಯಾಗಬೇಕು ಎಂದ ಅವರು, ಕರ್ನಾಟಕದಲ್ಲಿ ಕನ್ನಡಕ್ಕೆ ಅಗ್ರಸ್ಥಾನ ಈ ಕುರಿತಾಗಿ ಯಾವುದೇ ರಾಜಿಗೆ ಅವಕಾಶವಿಲ್ಲ. ರಾಜ್ಯದಲ್ಲಿ ಕನ್ನಡವೇ ಆಡಳಿತ ಭಾಷೆ. ಕನ್ನಡದ ಬೆಳವಣಿಗೆಗೆ ಸರ್ಕಾರ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲು ಬದ್ಧವಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿ ಕನ್ನಡದ ಅನುಷ್ಠಾನ ಆಗಬೇಕು. ವಾಣಿಜ್ಯ, ವಹಿವಾಟು ಕ್ಷೇತ್ರದಲ್ಲೂ ಕನ್ನಡ ಬೆಳವಣಿಗೆ ಹೊಂದಬೇಕು ಎಂದು ಹೇಳಿದರು.

ಕನ್ನಡಿಗರು ತಮ್ಮ ಮನೆಗಳಲ್ಲಿ ಕನ್ನಡ ವಾತಾವರಣವನ್ನು ಮೂಡಿಸಬೇಕು. ರಾಜ್ಯದಲ್ಲಿ ನೆಲೆಸಿರುವ ಎಲ್ಲ ಜನರು ಕೂಡ ಕನ್ನಡ ಕಲಿಯಬೇಕು. ಹೊರಗಡೆಯಿಂದ ಇಲ್ಲಿಗೆ ಬಂದು ನೆಲೆಸಿರುವವರು ಸಹ ಇಲ್ಲಿನ ಜನರೊಂದಿಗೆ ಬೆರೆತು ಕನ್ನಡ ಕಲಿಯಬೇಕು. ಇವರಿಗೆ ಕನ್ನಡ ಕಲಿಸುವ ಕೆಲಸವೂ ಆಗಬೇಕಿದೆ. ಎಲ್ಲೆಡೆ ಕನ್ನಡ ವಾತಾವರಣ ಮೂಡುವ ಅಗತ್ಯ ಇದೆ ಎಂದು ಸಿಎಂ ಯಡಿಯೂರಪ್ಪ ತಮ್ಮ ಭಾಷಣದಲ್ಲಿ ಪ್ರತಿಪಾದಿಸಿದರು.

 

 

ಫ್ರೆಶ್ ನ್ಯೂಸ್

Latest Posts

Featured Videos