ಕೊರೋನಾ ಗೆಲ್ಲಲು ಮಾನಸಿಕ ಸ್ಥೈರ್ಯ ಮುಖ್ಯ

  • In State
  • July 21, 2020
  • 179 Views
ಕೊರೋನಾ ಗೆಲ್ಲಲು ಮಾನಸಿಕ ಸ್ಥೈರ್ಯ ಮುಖ್ಯ

ಬೆಂಗಳೂರು: ಕೊರೋನಾವನ್ನು ಗೆಲ್ಲಲು ಪ್ರತಿಯೊಬ್ಬರಿಗೆ ಆತ್ಮವಿಶ್ವಾಸ ಅಗತ್ಯವಾಗಿ ಬೇಕಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಹಾಗೂ ಕೋವಿಡ್ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ನುಡಿದರು.

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿನ ಕೋವಿಡ್ ಸೆಂಟರ್‍ನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೋವಿಡ್ ಮಹಾಮಾರಿಯನ್ನು ಎದುರಿಸಬೇಕಾದರೆ ಚಿಕಿತ್ಸೆಗಿಂತ ಮಾನಸಿಕವಾಗಿ ಸ್ಥೈರ್ಯ ಇರಬೇಕು ಎಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದರು.

ಬೊಮ್ಮನಹಳ್ಳಿ ವಲಯದಲ್ಲಿ ಕೋವಿಡ್ ನಿಯಂತ್ರಿಸಲು ಪ್ರತಿಯೊಂದು ಕ್ಷೇತ್ರಕ್ಕೆ 20 ಆಂಬುಲೆನ್ಸ್ ಹಾಗೂ 20 ಟಿಟಿ ವಾಹನಗಳನ್ನು ನೀಡಲಾಗಿದೆ. ಈ ಎಲ್ಲಾ ಆರೋಗ್ಯ ಸೇವೆಗಳನ್ನು ನೀಡಲು ಸರ್ಕಾರಿ ಅಧಿಕಾರಿಗಳ ಜೊತೆಗೆ ಸ್ವಯಂ ಸೇವಕರು, ಜನಪ್ರತಿನಿಧಿಗಳು ಸೇವೆ ಸಲ್ಲಿಸಿದ್ದಾರೆ ಎಂದು ಸಚಿವರು ತಿಳಿಸಿದರು.

ತುರ್ತು ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ರೋಗಿಗಳಿಗೆ ತಕ್ಷಣ ಕೊರೋನಾ ಪರೀಕ್ಷೆಯನ್ನು ಮಾಡಲು ಈಗಾಗಲೇ ಬೊಮ್ಮನಹಳ್ಳಿ ವಲಯಕ್ಕೆ 1,500 ಆಕ್ಸಿಜನ್ ಕಿಟ್‍ಗಳನ್ನು ನೀಡಲಾಗಿತ್ತು. ಇನ್ನು ಕೆಲವೇ ದಿನಗಳಲ್ಲಿ ಬೆಂಗಳೂರು ನಗರಕ್ಕೆ 5 ಲಕ್ಷಕ್ಕೆ ಹೆಚ್ಚು ಆಕ್ಸಿಜನ್ ಕಿಟ್‍ಗಳನ್ನು ಸರ್ಕಾರ ಏರ್ಪಾಟು ಮಾಡಲಿದ್ದು, ಬೊಮ್ಮನಹಳ್ಳಿ ವಲಯಕ್ಕೂ ಸಹ ಅತಿ ಹೆಚ್ಚಿನ ಆಕ್ಸಿಜನ್ ಕಿಟ್‍ಗಳನ್ನು ನೀಡಲಾಗುತ್ತದೆ. ಗರ್ಭಿಣಿಯರು, ರೋಗಿಗಳು ಸೇರಿದಂತೆ ಇನ್ನಿತರ ತುರ್ತು ಸಮಯದಲ್ಲಿ ಪರೀಕ್ಷೆ ಮಾಡಲು ಸಾಕಷ್ಟು ಸೌಲಭ್ಯಗಳನ್ನು ನೀಡಲಾಗಿದೆ. ಸಾರ್ವಜನಿಕರು ಆತಂಕಪಡಬಾರದೆಂದು ತಿಳಿಸಿದರು.

50 ವರ್ಷಕ್ಕೂ ಮೇಲ್ಪಟ್ಟ ಉಪಾಧ್ಯಾಯರಿಗೆ ಯಾವುದೇ ರೀತಿ ವಿಶೇಷ ಕಾಯಿಲೆಗಳಿದ್ದರೆ ಮಾತ್ರ ಕೋವಿಡ್ ಕರ್ತವ್ಯದಿಂದ ವಿನಾಯಿತಿ ನೀಡಲಾಗುತ್ತದೆ. ಇಲ್ಲವಾದರೆ ಕಡ್ಡಾಯವಾಗಿ ಕೋವಿಡ್ ಕರ್ತವ್ಯಕ್ಕೆ ಹಾಜರಾಗಬೇಕು. ಸೂಕ್ತ ದಾಖಲಾತಿಗಳಿಲ್ಲದೇ ನೆಪ ಮಾತ್ರಕ್ಕೆ ಕರ್ತವ್ಯಕ್ಕೆ ಗೈರು ಹಾಜರಾದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಸ್ಥಳೀಯ ಶಾಸಕ ಎಂ. ಕೃಷ್ಣಪ್ಪ ಮಾತನಾಡಿ, ಈಗಾಗಲೇ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೊರೋನಾ ಮುಕ್ತಗೊಳಿಸಲು ಅಗತ್ಯ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಜಿಗಣಿ ವ್ಯಾಪ್ತಿಯಲ್ಲಿ ಖಾಸಗಿ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೋವಿಡ್ ಆಸ್ಪತ್ರೆಯಾಗಿ ಮಾರ್ಪಾಡು ಮಾಡಲಾಗಿದೆ. ಅಗತ್ಯಬಿದ್ದರೆ ಮತ್ತೊಂದು ಕೋವಿಡ್ ವಿಶೇಷ ಆಸ್ಪತ್ರೆಯನ್ನು ನಿರ್ಮಿಸಲು ಚಿಂತನೆ ನಡೆಸಲಾಗುತ್ತಿದೆ ಎಂದರು.

ವಾರ್ಡ್ ಮಟ್ಟದಲ್ಲಿ ಸ್ವಯಂ ಸೇವಕರು, ಅಧಿಕಾರಿಗಳು, ಪಾಲಿಕೆ ಸದಸ್ಯರುಗಳು ತಮ್ಮ ಪ್ರಾಣದ ಹಂಗು ತೊರೆದು ಕೊರೋನಾ ವಾರಿಯರ್ಸ್ ರೀತಿಯಲ್ಲಿ ಕೆಲಸ ನಿರ್ವಹಿಸಿದ್ದು ಸಂತೋಷ ತಂದಿದೆ ಎಂದರು.

ಸಾರ್ವಜನಿಕರು ಸಹ ತಮ್ಮ ಆರೋಗ್ಯದ ಹಿತದೃಷ್ಠಿಯಿಂದ ಸರ್ಕಾರದ ಆದೇಶವನ್ನು ಪಾಲಿಸಬೇಕು. ಅನಗತ್ಯವಾಗಿ ಓಡಾಡಬಾರದು. ಸಾಮಾಜಿಕ ಅಂತರವನ್ನು ಪಾಲಿಸಿ, ಮಾಸ್ಕ್ ಧರಿಸುವ ಮೂಲಕ ಕೊರೋನಾದಿಂದ ದೂರವಿರಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ದಕ್ಷಿಣ ಡಿಸಿಪಿ ರೋಹಿಣಿ ಖಟೋಚ್, ಬಿಬಿಎಂಪಿ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮಂತಪ್ಪ, ಪಾಲಿಕೆ ಸದಸ್ಯರಾದ ಲಲಿತಾ ಜಯರಾಮ್, ಜಂಟಿ ಆಯುಕ್ತರಾದ ರಾಮಕೃಷ್ಣ ಆರೋಗ್ಯಾಧಿಕಾರಿ ಡಾ. ಸುರೇಶ್, ಕಾರ್ಯಪಾಲಕ ಅಭಿಯಂತರಾರದ ಶಶಿಕುಮಾರ್ ಇನ್ನಿತರೆ ಅಧಿಕಾರಿಗಳು ಭಾಗವಹಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos