ಬೆಂಗಳೂರು: ಕಳೆದ ಮೂರು ನಾಲ್ಕು ತಿಂಗಳಿಗಳಿಂದ ರಾಜ್ಯದಲ್ಲಿ ಬಿಸಿಲಿನ ಬೇಗೆಗೆ ಬೆಂದಿದ್ದ ಜನರಿಗೆ ಕೊಂಚ ನಿಟ್ಟಿಸಿರು ಬಿಡುವಂತಾಗಿದೆ.
ಹೌದು, 3-4 ತಿಂಗಳುಗಳಿಂದ ವಿಪರೀತ ಬಿಸಿಲು ಇರುವುದರಿಂದ ರಾಜ್ಯದಲ್ಲಿ ಅದರಲ್ಲೂ ಕೂಡ ಬೆಂಗಳೂರಿನ ಜನತೆ ಕಂಗಾಲಾಗಿದ್ದರು. ಬಿಸಿಲಿನ ಬೇಗೆಗೆ ಬಂದಿದ್ದ ಬೆಂಗಳೂರು ಜನರಿಗೆ ಮಳೆರಾಯನ ಆಗಮನದಿಂದ ಬೆಂಗಳೂರಿನ ಮಂದಿ ಮೊಗದಲ್ಲಿ ಮಂದಹಾಸ ಹೊಮ್ಮಿದೆ.
ಯೆಸ್.. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಸಂಜೆ ಮಳೆಯಾಗಿದ್ದು ಇಂದು ಕೂಡ (ಶುಕ್ರವಾರ ಮೇ 3) ರಂದು ಮಧ್ಯಾಹ್ನದಿಂದಲೇ ಮಳೆರಾಯ ಬೆಂಗಳೂರು ಮಂದಿಯನ್ನು ತಂಪೆರದಿದ್ದಾನೆ.
ಇನ್ನು ಕೆಲವು ಕಡೆಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಇದೀಗ ಬಹುತೇಕ ಭಾಗಗಳಲ್ಲಿ ಮಳೆಯಾಗುತ್ತಿದೆ. ವಿಧಾನಸೌಧ ಸುತ್ತಮುತ್ತಲಿನ ಏರಿಯಾಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುತ್ತಿದೆ. ಕೆಆರ್ ಪುರಂ, ಮಹಾದೇವಪುರ, ಟಿನ್ ಫ್ಯಾಕ್ಟ್ರಿ, ಹೆಬ್ಬಾಳ, ಮೆಜೆಸ್ಟಿಕ್, ಕೆ.ಆರ್ ಸರ್ಕಲ್, ಕೆ.ಆರ್ ಮಾರ್ಕೆಟ್, ಟೌನ್ ಹಾಲ್, ರಿಚ್ಮಂಡ್ ಸರ್ಕಲ್, ಎಂಜಿ ರಸ್ತೆ, ಯಶವಂತಪುರ, ಗೋವರ್ಧನ, ಜಾಲಹಳ್ಳಿ ಕ್ರಾಸ್, ನಾಗರಬಾವಿ, ವಿಜಯನಗರ ಸುತ್ತಮುತ್ತ ಮಳೆಯಾಗುತ್ತಿದೆ.
ಮಳೆಯಿಂದಾಗಿ ವಾಹನ ಸವಾರರು ಪರದಾಟ ಅನುಭವಿಸಿದ್ದಾರೆ. ಆನೇಕಲ್ ನಲ್ಲಿ ಮೊದಲ ಮಳೆಯೇ ಭರ್ಜರಿಯಾಗಿ ಬರುತ್ತಿದ್ದು, ಬೇಸಿಗೆಯ ಬಿಸಿಲಿನಿಂದ ಕಂಗೆಟ್ಟಿದ್ದ ಜನರ ಮುಖದಲ್ಲಿ ಸಂತಸ ಮೂಡಿದೆ. ಅಲ್ಲದೇ ಮಳೆಯಿಂದಾಗಿ ರೈತರ ಮುಖದಲ್ಲಿಯೂ ಮಂದಹಾಸ ಮೂಡಿದೆ.