ಯುವಕರು ಸೈನ್ಯಕ್ಕೆ ಸೇರುವ ಹೇಳಿಕೆ: ಚಾರಿತ್ರ್ಯವಧೆ, ಸಿಎಂ ಆಕ್ರೋಶ

ಯುವಕರು ಸೈನ್ಯಕ್ಕೆ ಸೇರುವ ಹೇಳಿಕೆ: ಚಾರಿತ್ರ್ಯವಧೆ, ಸಿಎಂ ಆಕ್ರೋಶ

ಬೆಂಗಳೂರು, ಏ. 12, ನ್ಯೂಸ್ ಎಕ್ಸ್ ಪ್ರೆಸ್: ಊಟಕ್ಕೆ ಗತಿಯಿಲ್ಲದ ಯುವಕರು ಸೇನೆಗೆ ಸೇರುತ್ತಾರೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದು, ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ. ಬಿಜೆಪಿ ಸರಣಿ ಟ್ವೀಟ್ ಮೂಲಕ ಸಿಎಂ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಸೇನೆಗೆ ಸೇರುವವರು ಬಡ ಕುಟುಂಬದ ಯುವಕರೇ ಹೊರತು, ಶ್ರೀಮಂತರ ಮನೆಯ ಮಕ್ಕಳಲ್ಲ ಎನ್ನುವ ನೀವು ನಿಮ್ಮ ಮಗನಿಗೆ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಕೊಡಿಸುವಲ್ಲಿ ತೋರಿದ ಉತ್ಸಾಹವನ್ನು ಸೇನೆಗೆ ಸೇರಿಸಲು ಯಾಕೆ ತೋರಿಸಲಿಲ್ಲ ಎಂದು ಪ್ರಶ್ನಿಸಿದೆ. ಊಟಕ್ಕೆ ಗತಿ ಇಲ್ಲದ ಯುವಕರು ಸೇನೆಗೆ ಸೇರುತ್ತಾರೆ ಎಂದು ಹೇಳುವುದು ಸರಿಯಲ್ಲ. ಸೈನಿಕರ ಬಗ್ಗೆ ಕೀಳಾಗಿ ಮಾತನಾಡಬಾರದು ಎಂದು ಬಿಜೆಪಿ ಹೇಳಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿಎಂ, ನನ್ನ ಹೇಳಿಕೆಯನ್ನು ತಿರುಚಲಾಗಿದೆ. ಭಾಷಣದ ವಿಡಿಯೋ ಎಡಿಟ್ ಮಾಡಿ, ತಮಗೆ ಬೇಕಾದಂತೆ ಜೋಡಿಸಿ ತಮ್ಮ ಚಾರಿತ್ರ್ಯವಧೆಗೆ ಬಿಜೆಪಿ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಹಳೆಯ ಕುತಂತ್ರವನ್ನು ಮುಂದುವರೆಸಿದ್ದು, ನನ್ನ ಹೇಳಿಕೆಯನ್ನು ತಿರುಚಿದೆ. ಎಡಿಟ್ ಮಾಡಿದ ವಿಡಿಯೋ ಅಪ್ಲೋಡ್ ಮಾಡಿ ಚಾರಿತ್ರ್ಯವಧೆಗೆ ಪ್ರಯತ್ನಿಸಿದೆ ಎಂದು ಆರೋಪಿಸಿದ್ದಾರೆ. ಸೇನೆಗೆ ಸೇರುವ ಎಲ್ಲರೂ ಶ್ರೀಮಂತರಾಗಿರುವುದಿಲ್ಲ. ಎರಡು ಹೊತ್ತಿನ ಊಟಕ್ಕೂ ಪರದಾಡುವ ಅನೇಕ ಯುವಕರಿದ್ದಾರೆ. ಅಂತಹ ಅಮಾಯಕರ ಜೀವದೊಂದಿಗೆ ಪ್ರಧಾನಿ ಮೋದಿ ಚೆಲ್ಲಾಟವಾಡುತ್ತಿದ್ದಾರೆ. ಮತಕ್ಕಾಗಿ ಸೈನಿಕರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದೆ. ಊಟಕ್ಕೆ ಗತಿ ಇಲ್ಲದ ಯುವಕರು ಸೇನೆಗೆ ಸೇರುತ್ತಾರೆ ಎಂದು ನಾನು ಹೇಳಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos