ಬೊಮ್ಮನಹಳ್ಳಿ: ಬೊಮ್ಮನಹಳ್ಳಿಯ ರೂಪೇನ ಅಗ್ರಹಾರದ ಶ್ರೀಲಕ್ಷ್ಮೀ ವೆಂಕಟೇಶ್ವರಸ್ವಾಮಿಯ ಬ್ರಹ್ಮರಥೋತ್ಸವ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಮಳೆಯ ನಡುವೆಯೆ ವಿಜೃಂಭಣೆಯಿಂದ ಜರುಗಿತು.
ದೇವರಿಗೆ ವಿಶೇಷ ಪೂಜೆ ಹಾಗೂ ಮಹಾ ಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದ ನಂತರ ಶಾಸಕ ಸತೀಶ್ ರೆಡ್ಡಿ ರಥೋತ್ಸವಕ್ಕೆ ಚಾಲನೆ ನೀಡಿದರು. ರಥೋತ್ಸವ ಆರಂಭವಾಗುತ್ತಿದ್ದಂತೆ ಭಕ್ತರು ಹೂವು ದವನ ಬಾಳೆಹಣ್ಣು ರಥಕ್ಕೆ ಅರ್ಪಿಸುವ ಮೂಲಕ ತಮ್ಮಗಳ ಹರಕೆಯನ್ನು ಸಲ್ಲಿಸಿ ಕಣ್ತುಂಬಿಕೊಂಡರು.
ಹಳ್ಳಿಕಾರ್ ರಾಸುಗಳ ಸಹಾಯದಿಂದ 100 ಅಡಿಗಳ ಎತ್ತರದ ರಥವನ್ನು ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಎಳೆದು ಸಂಭ್ರಮಿಸಿದರು. ಮಳೆಯನ್ನು ಲೆಕ್ಕಿಸದೇ ದೇಸಿ ತಮಟೆ ಏಟಿಗೆ ಯುವ ಭಕ್ತ ಸಮೂಹ ಕುಣಿದು ಕುಪ್ಪಳಿಸಿದರು.
ನಂದಿಧ್ವಜ ಕುಣಿತ, ಕೀಲುಕುದುರೆ, ಡೊಳ್ಳುಕುಣಿತ, ಬಾಣಬಿರುಸು, ಪಟ್ಟದ ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳ ಪ್ರದರ್ಶನ ನೋಡುಗರ ಕಣ್ಮನ ಸೆಳೆದವು.ದಾರಿಯುದ್ದಕ್ಕೂ ಎರಡು ಬದಿಯಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರಿಗೆ ಕುಡಿಯುವ ನೀರು ,ಮಜ್ಜಿಗೆ ,ಪಾನಕ ಹಾಗೂ ಕೋಸಂಬರಿ ವಿತರಿಸಲಾಯಿತು.
ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ನರೇಂದ್ರ ಬಾಬು ಮಾತನಾಡಿ ಪ್ರತಿವರ್ಷವೂ ರಥೋತ್ಸವ ವೇಳೆಯಲ್ಲಿ ಮಳೆ ಬೀಳುವುದು ವಾಡಿಕೆ.ಬೆಂಗಳೂರಿನ ಸುತ್ತಮುತ್ತಲಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ರಥೋತ್ಸವದಲ್ಲಿ ಪಾಲ್ಗೊಂಡು ಹರಕೆ ತೀರಿಸಿಕೊಳ್ಳುತ್ತಾರೆ.ಎಲ್ಲಾ ಭಕ್ತಾದಿಗಳಿಗೆ ತೊಂದರೆಯಾಗದಂತೆ ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.