ಸಾಕ್ಷಿ, ಮಾಹಿತಿ ಆಧರಿಸಿ ಐಟಿ ದಾಳಿ: ಅರುಣ್ ಜೇಟ್ಲಿ

ಸಾಕ್ಷಿ, ಮಾಹಿತಿ ಆಧರಿಸಿ ಐಟಿ ದಾಳಿ: ಅರುಣ್ ಜೇಟ್ಲಿ

ನವದೆಹಲಿ, ಏ. 17, ನ್ಯೂಸ್ ಎಕ್ಸ್ ಪ್ರೆಸ್:: ಐಎಂಎಫ್​- ವಿಶ್ವ ಬ್ಯಾಂಕ್​ ಸಭೆಯಲ್ಲಿ ಪಾಲ್ಗೊಳ್ಳಲು ಅಮೆರಿಕಕ್ಕೆ ತೆರಳಿರುವ ಜೇಟ್ಲಿ, ‘ಭ್ರಷ್ಟಾಚಾರ ವಿರುದ್ಧ ಕಾನೂನುಬದ್ಧ ಕ್ರಮ ಸೇಡಲ್ಲ’ ಎಂಬ ಶೀರ್ಷಿಕೆಯಡಿ ಸುದೀರ್ಘ ಬರಹವನ್ನು ತಮ್ಮ ಫೇಸ್​ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಮತದಾನದ ಹೊಸ್ತಿಲಲ್ಲಿ ಐಟಿ ದಾಳಿಗಳನ್ನು ಖಂಡಿಸಿ ಬಿಜೆಪಿ ವಿರುದ್ಧ ಹರಿಹಾಯುತ್ತಿರುವ ಪ್ರತಿ ಪಕ್ಷಗಳ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ ಅವರು, ‘ಆದಾಯ ತೆರಿಗೆ ಇಲಾಖೆ ವಸ್ತು ನಿಷ್ಠವಾಗಿ ತನ್ನ ಕಾರ್ಯನಿರ್ವಹಿಸುತ್ತಿದೆ ಹಾಗೂ ಸ್ಪಷ್ಟವಾದ ಸಾಕ್ಷ್ಯಾಧಾರಗಳ ಮೇಲೆ ಶೋಧ ಕಾರ್ಯಾಚರಣೆ ನಡೆಸುತ್ತಿದೆ’ ಎಂದು ಐಟಿ ವೈಖರಿಯನ್ನು ಸಮರ್ಥಿಸಿಕೊಂಡರು. ಇತ್ತೀಚೆಗೆ ಮಧ್ಯಪ್ರದೇಶದ ಸಿಎಂ ಕಮಲ್​ನಾಥ್​ ಆಪ್ತರು, ಕರ್ನಾಟಕ ಸಿಎಂ ಎಚ್​ಡಿ ಕುಮಾರಸ್ವಾಮಿ ಆಪ್ತರು ಹಾಗೂ ತಮಿಳುನಾಡಿನ ಡಿಎಂಕೆ ನಾಯಕರುಗಳ ಸಂಬಂಧಿಕರ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದರು. ಲೋಕಸಭಾ ಚುನಾವಣೆಯಲ್ಲಿ ಹವಾಲ ಹಣ ಬಳಕೆ ಹಾಗೂ ತೆರಿಗೆ ವಂಚನೆಗೆ ಸಂಬಂಧಿಸಿದಂತೆ ದಾಳಿ ನಡೆಸಿರುವುದಾಗಿ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದರು. ಆದರೂ ರಾಜಕೀಯ ಪಕ್ಷಗಳು, ಕೇಂದ್ರ ಉದ್ದೇಶ ಪೂರ್ವಕವಾಗಿ ಬಿಜೆಪಿಯೇತರ ರಾಜ್ಯ ಸರ್ಕಾರಗಳನ್ನು ಗುರಿಯಾಗಿಸಿಕೊಂಡು ದಾಳಿಗೆ ಪ್ರಚೋದನೆ ನೀಡುತ್ತಿದೆ ಎಂದು ದೂರಿದರು. ಹಣಕಾಸು ಮತ್ತು ಕಂದಾಯ ಸಚಿವಾಲಯಗಳ ಅಧೀನದಲ್ಲಿರುವ ತನಿಖಾ ಸಂಸ್ಥೆಗಳು ಚುನಾವಣೆ ವೇಳೆ ‘ತಟಸ್ಥ ಧೋರಣೆ’ ಹಾಗೂ ‘ತಾರತಮ್ಯವಲ್ಲದ’ ಕ್ರಮ ತೆಗೆದುಕೊಂಡರೆ ಒಳ್ಳೆಯದು ಎಂದು ಚುನಾವಣಾ ಆಯೋಗವು ಸಲಹೆ ನೀಡಿ ಆದಾಯ ತೆರಿಗೆ ಇಲಾಖೆ ಕಾರ್ಯದರ್ಶಿ ಎ.ಬಿ. ಪಾಂಡೆ ಅವರಿಗೆ ಪತ್ರ ಬರೆದಿತ್ತು. ಭ್ರಷ್ಟಾಚಾರದ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡರು ರಾಜಕೀಯ ಪಕ್ಷಗಳು ಇದೇ ರೀತಿ ಪ್ರತಿಕ್ರಿಯಿಸುವುದು ನಿಯಮಿತ ಪರಿಪಾಠವಾಗಿದೆ. ಸೇಡಿನಂತಹ ಆಪಾದನೆಗೆ ಭ್ರಷ್ಟಾಚಾರದಲ್ಲಿ ಕಾನೂನು ಬದ್ಧವಾದ ರಕ್ಷಣೆ ಇಲ್ಲ. ದೊಡ್ಡ ಪ್ರಮಾಣದ ಭ್ರಷ್ಟಾಚಾರ ಎಸಗುವವರು ತಮ್ಮ ಕಾರ್ಯದ ಅರ್ಹತೆಗಳ ಮೇಲೆ ನಿರ್ಣಯಿಸಬೇಕಾಗುತ್ತದೆ ಎಂದು ಹೇಳಿದರು. ಬಿಜೆಪಿಯೇತರ ರಾಜ್ಯ ಸರ್ಕಾರಗಳೇ ಏಕೆ ಗುರಿಯಾಗುತ್ತಿವೆ ಎಂಬ ಆಪಾದನೆಗೆ, ‘ಆದಾಯ ತೆರಿಗೆ ಇಲಾಖೆ ವಸ್ತುನಿಷ್ಠವಾಗಿ ತನ್ನ ಕಾರ್ಯನಿರ್ವಹಿಸುತ್ತಿದೆ ಹಾಗೂ ಅದು ಸ್ಪಷ್ಟವಾದ ಸಾಕ್ಷ್ಯಾಧಾರಗಳ ಮೇಲೆ ಶೋಧ ಕಾರ್ಯಾಚರಣೆ ನಡೆಸುತ್ತಿದೆ’ ಎಂದು ಉತ್ತರಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos