ಬಾಯಿಲ್ಲಿ ನೀರು ಉಣಿಸುವ ಖಾದ್ಯಕ್ಕೆ ಸ್ವಾಗತ

ಬಾಯಿಲ್ಲಿ ನೀರು ಉಣಿಸುವ ಖಾದ್ಯಕ್ಕೆ ಸ್ವಾಗತ

ಕಲಬುರಗಿ, ಫೆ. 05: 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧಿಕೃತ ಚಾಲನೆ ದೊರೆತಿದ್ದು, ನುಡಿಜಾತ್ರೆಯಲ್ಲಿ ಕಲಬುರಗಿ ಜಿಲ್ಲೆಯ ವಿಶೇಷ ಭೋಜನದ ಮೂಲಕ ಸಾಹಿತ್ಯಾಸಕ್ತರಿಗೆ ಔತಣ ನೀಡಲು ಸಕಲ ಸಿದ್ಧತೆಗಳನ್ನು ನಡೆಸಲಾಗುತ್ತಿದೆ.

ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಸಮ್ಮೇಳನಕ್ಕೆ ಆಗಮಿಸುವ ಸಾಹಿತಿಗಳು, ಸಾಹಿತ್ಯಾಭಿಮಾನಿಗಳು ಮತ್ತು ಗಣ್ಯರಿಗೆ ರುಚಿ-ಶುಚಿಕರ ಊಟ ಉಣಬಡಿಸಲು ಆಹಾರ ಸಮಿತಿ ನಿರ್ಧರಿಸಿದ್ದು, ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಜತೆಗೆ ಕರಾವಳಿ ಕರ್ನಾಟಕವನ್ನೂ ಗಮನದಲ್ಲಿ ಇಟ್ಟುಕೊಂಡು ಅಡುಗೆ ವ್ಯವಸ್ಥೆ ಮಾಡಲಾಗಿದೆ.

ಸಮ್ಮೇಳನದ ಮೂರು ದಿನ ಸೇರಿ ಸುಮಾರು 4 ಲಕ್ಷ ಜನ ಭಾಗವಹಿಸಬಹುದು ಎಂಬ ನಿರೀಕ್ಷೆಯೊಂದಿಗೆ ಅಡುಗೆ ಸಿದ್ಧತೆ ನಡೆದಿದೆ. ಊಟಕ್ಕಾಗಿ 200 ಕೌಂಟರ್ ಮಾಡಲಾಗುತ್ತಿದ್ದು, 1300 ಸ್ವಯಂ ಸೇವಕರು ತಯಾರಿಯಲ್ಲಿ ತೊಡಗಿದ್ದಾರೆ. ಪ್ರತಿ ಕೌಂಟರ್​ಗೆ ಒಬ್ಬ ಬಿ ಗ್ರೂಪ್ ಅಧಿಕಾರಿ, ಇಬ್ಬರು ಸಿ ಗ್ರೂಪ್ ನೌಕರರನ್ನು ನೇಮಿಸಲಾಗಿದೆ. 50 ಕೌಂಟರ್​ಗೆ ಒಬ್ಬ ಅಧಿಕಾರಿ ಮೇಲುಸ್ತುವಾರಿ ವಹಿಸುವರು. ಸರ್ಕಾರಿ ಪದವಿ ಮಹಾ ವಿದ್ಯಾಲಯದ ವಿದ್ಯಾರ್ಥಿಗಳನ್ನು ಸ್ವಯಂ ಸೇವಕರಾಗಿ ನೇಮಿಸಿ ಅವರ ಕರ್ತವ್ಯದ ಬಗ್ಗೆ ಮಾಹಿತಿ ನೀಡಲಾಗಿದೆ. ಮಾಧ್ಯಮಗಳು, ಅಂಗವಿಕಲರು, ವಿಐಪಿ, ಮಹಿಳೆಯರು, 21800 ನೋಂದಾಯಿತ ಸದಸ್ಯರಿಗೆ ಪ್ರತ್ಯೇಕ ಕೌಂಟರ್​ಗಳಿರಲಿವೆ. ಊಟದ ವೇಳೆ ಗೊಂದಲ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

ಬೈರು ಕೆಟರಿಂಗ್: ರುಚಿಕರ ಅಡುಗೆಯಲ್ಲಿ ಹೆಸರು ಮಾಡಿರುವ ಧಾರವಾಡದ ಬೈರು ಕೆಟರಿಂಗ್ ಗುತ್ತಿಗೆ ಪಡೆದಿದ್ದಾರೆ. 2500ಕ್ಕೂ ಹೆಚ್ಚು ಬಾಣಸಿಗರ ತಂಡ ಮೆನು ಪ್ರಕಾರ ಅಡುಗೆ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿದ್ದು, ಶೇಂಗಾ ಹೋಳಿಗೆ, ಮೈಸೂರು ಪಾಕ್, ಶೇಂಗಾ ಉಂಡಿ ಸೇರಿ ಬಹುತೇಕ ಐಟಂಗಳು ರೆಡಿಯಾಗಿವೆ. ಖಡಕ್ ರೊಟ್ಟಿ ಲೋಡ್ ಬಂದಿಳಿದಿದೆ.

ಏನೇನು ವಿಶೇಷ ಉಪಾಹಾರಕ್ಕೆ ಮೊದಲ ದಿನ ಉಪ್ಪಿಟ್ಟು, ಶಿರಾ, ಎರಡನೇ ದಿನ ಚುರಮುರಿ ಸುಸಲಾ, ಮಿರ್ಚಿ ಭಜಿ, ಮೈಸೂರು ಪಾಕ್, ಮೂರನೇ ದಿನ ಜವಿಗೋಧಿ ಉಪ್ಪಿಟ್ಟು, ಶೇಂಗಾ ಚೆಟ್ನಿ, ಮೈಸೂರು ಬಜ್ಜಿ, ಬೇಸನ್ ಉಂಡಿ ನೀಡಲಾಗುತ್ತಿದ್ದು, ಊಟಕ್ಕಾಗಿ ಸಜ್ಜೆ ರೊಟ್ಟಿ, ಜೋಳದ ರೊಟ್ಟಿ, ಚಪಾತಿ, ಬದನೆಕಾಯಿ ಎಡಿಗಾಯಿ, ಮಟಕಿ ಕಾಳು, ಶೇಂಗಾ ಹಿಂಡಿ, ಅನ್ನ, ಸಾಂಬಾರ್, ಉಪ್ಪಿನಕಾಯಿ, ಮಜ್ಜಿಗೆ, ಮೋತಿಚೂರ್ ಪುಂಡಿ ಪಲ್ಯ, ಡೊಣ್ಣಗಾಯಿ ಪಲ್ಯ, ಘಟಬ್ಯಾಳಿ, ಮಿಕ್ಸ್ ತರಕಾರಿ ಪಲ್ಯ, ಗೋಧಿ ಹುಗ್ಗಿಯನ್ನು ಬಡಿಸಲಾಗುತ್ತದೆ. ಇನ್ನು ರಾತ್ರಿ ಊಟಕ್ಕೆ ವಾಂಗಿಬಾತ್, ಬಿಸಿಬೇಳೆ ಭಾತ್, ಅನ್ನ, ರಸಂ, ಉಪ್ಪಿನಕಾಯಿ, ಶಾವಿಗೆ ಪಾಯಸ. ಮೊಸರನ್ನ, ಹೆಸರು ಬೇಳೆ ಪಾಯಸ. ಪಕೋಡಾ, ಚಟ್ನಿ ಪುಡಿ, ಜಿಲೇಬಿ ಇತ್ಯಾದಿ ಖಾದ್ಯಗಳನ್ನು ನೀಡಲಾಗುತ್ತದೆ.

ಆಹಾರ ಸಮಿತಿಗೆ ಉಪ ಸಮಿತಿಗಳನ್ನು ರಚಿಸಲಾಗಿದೆ. ವಿಶೇಷವಾಗಿ ಆಹಾರ ಕೌಂಟರ್​ಗಳಿಗೆ 5 ಉಪ ಸಮಿತಿ ರಚಿಸಲಾಗಿದೆ. ಗಣ್ಯರು, ಮಾಧ್ಯಮದವರ ಕೌಂಟರ್​ಗೆ ಮೇಲುಸ್ತುವಾರಿ ಸಮಿತಿ, ಸಾಮಾನ್ಯ ವ್ಯಕ್ತಿಗಳ ಕೌಂಟರ್, ಸ್ವಾಗತಕಾರರ ಮತ್ತು ಸಹಾಯವಾಣಿ, ಕುಡಿಯುವ ನೀರು ಹಾಗೂ ನೀರಿನ ಲೆಕ್ಕ ಇಡುವ ವ್ಯವಸ್ಥೆಗೆ ಮೇಲುಸ್ತುವಾರಿ ಸಮಿತಿ ರಚಿಸಲಾಗಿದೆ.

ಆಹಾರಕ್ಕೆ ಸಂಬಂಧಿಸಿದಂತೆ ಬಹುತೇಕ ಸಿದ್ಧತೆ ಮಾಡಿಕೊಳ್ಳಲಾಗಿದೆ. ಯಾವುದೇ ಹಂತದಲ್ಲೂ ಗೊಂದಲ ಉಂಟಾಗದಂತೆ ನೋಡಿಕೊಳ್ಳಲು ಉಪ ಸಮಿತಿ ರಚಿಸಲಾಗಿದೆ. ಮುಂಬೈ ಕರ್ನಾಟಕ, ಕರಾವಳಿ ಕರ್ನಾಟಕದ ಜನರನ್ನೂ ಗಮನದಲ್ಲಿ ಇಟ್ಟುಕೊಂಡು ಅಡುಗೆ ವ್ಯವಸ್ಥೆ ಮಾಡಲಾಗುತ್ತಿದೆ.

ಕಲ್ಮೇಶ ಮಂಡ್ಯಾಳ

 

ಫ್ರೆಶ್ ನ್ಯೂಸ್

Latest Posts

Featured Videos