ಕಾಫಿನಾಡಲ್ಲಿ ಅಳುತ್ತಿದ್ದ ಸರ್ಕಾರಿ ಶಾಲೆಯ ಆಳ್ವಿಕೆ ಕಥೆ…

ಕಾಫಿನಾಡಲ್ಲಿ ಅಳುತ್ತಿದ್ದ ಸರ್ಕಾರಿ ಶಾಲೆಯ ಆಳ್ವಿಕೆ ಕಥೆ…

ನನ್ನ ಹೆಸರು ಸರ್ಕಾರಿ ಶಾಲೆ. ನನ್ನೂರು ಹಳ್ಳಿ. ಖಾಸಗಿ ಶಾಲೆಗಳ ಅಬ್ಬರ ಹಾಗೂ ಆಡಳಿತ ವ್ಯವಸ್ಥೆ ನನ್ನನ್ನ ಹಾಳೂರ ಹದ್ದಿನಂತಾಗಿಸಿತ್ತು. ಪ್ರೈವೇಟ್ ಸ್ಕೂಲ್ ಮಕ್ಕಳು ಅಂದ-ಚೆಂದದ ಉಡುಗೆ ತೊಟ್ಟು ಹೋಗ್ತಿದ್ರೆ, ನನ್ನ ಕಂದಮ್ಮಗಳು ಹರಿದ ಚೆಡ್ಡಿ, ಗುಂಡಿ ಇಲ್ಲದ ಶರ್ಟ್ ಹಾಕೊಂಡ್ ಬರಿಗಾಲಲ್ಲಿ ಬರ್ತಿದ್ರು. ನನ್ನ ಕರುಳು ಹಿಂಡುತ್ತಿತ್ತು. ಆದ್ರೀಗ, ಎಲ್ಲರಿಗೂ ತೊಡೆ ತೊಟ್ಟಿರೋ ನಾನೇ ಬೇರೆ, ನನ್ನ ಸ್ಟೈಲೇ ಬೇರೆ. ನನ್ನ ಹೆಸ್ರನ್ನ ಸಂಖ್ಯೆಯಾಗಿ (29170619601) ಬದಲಿಸಿಕೊಂಡು ಓಡೋಕೆ ನಿಂತಿದ್ದೇನೆ. ನನ್ನ ಬಳಿ ಬರೋ ನನ್ನ ಕಂದಗಳನ್ನ ರಾಜಧಾನಿ ಮುಟ್ಟಿಸ್ಬೇಕು ಅನ್ನೋದು ನನ್ನ ಹಠ-ಛಲ….. ಇದು ಕಾಫಿನಾಡಲ್ಲಿ ಅಳುತ್ತಿದ್ದ ಸರ್ಕಾರಿ ಶಾಲೆಯ ಆಳ್ವಿಕೆ ಕಥೆ….

ಹೌದು… ಡೈಸ್ ನಂಬರ್ ಹಾಕೊಂಡ್ ಯಲಗುಡಿಗೆ ಟು ಬೆಂಗಳೂರಿಗೆ ಹೊರಟಿರೋ ಈ ಟ್ರೈನು ಕೇಂದ್ರ ಸರ್ಕಾರದ್ದಲ್ಲ. ರಾಜ್ಯದ್ದು. ಹಳ್ಳ ಹಿಡಿದಿದ್ದ ಸರ್ಕಾರಿ ಶಾಲೆಗೆ ಮಕ್ಕಳನ್ನ ಸೆಳೆಯಲು ಸ್ಥಳಿಯರು ಹಾಗೂ ಶಿಕ್ಷಕರೇ ಕೊಟ್ಟಿರೋ ರೈಲಿನ ರೂಪ. ಒಂದ್ ಕಾಲದಲ್ಲಿ ಚಿಕ್ಕಮಗಳೂರಿನ ಈ ಶಾಲೆಯ ಆವರಣ ಕಂಡು ಶಾಲೆಯೇ ಕಣ್ಣೀರಿಡ್ತಿತ್ತು. ಆದ್ರೀಗ, ದಾರಿಹೊಕ್ಕರಿಗೆ ಕಣ್ಣೋಡೆಯುತ್ತಿದೆ. ಶಾಲಾ ಆವರಣಕ್ಕೆ ಕಾಲಿಡ್ತಿದ್ದಂತೆ ಕಂಪಿನ ಸುವಾಸನೆ ಬೀರುತ್ತಾ, ಚಿಲಿಪಿಲಿ ನಿನಾದದೊಂದಿಗೆ ಶಿಕ್ಷಕರು-ಮಕ್ಕಳನ್ನ ಸೆಳೆಯೋ ಸುಂದರ ಹೂದೋಟವಿದೆ. ಪ್ರಾರ್ಥನೆ ಮುಗಿಸಿ ವಿದ್ಯಾರ್ಥಿಗಳು ಸರದಿ ಸಾಲಲ್ಲಿ ಶಾಲೆಯೊಳಗೆ ಹೋಗೋದ್ನ ನೋಡಿದ್ರೆ ಟ್ರೈನ್ ಹತ್ತುತ್ತಿರುವಂತೆಯೆ ಭಾಸವಾಗುತ್ತೆ. ಪರಿಶಿಷ್ಟರೇ ಹೆಚ್ಚಾಗಿ ವಾಸಿಸುವ ಯಲಗುಡಿಗೆ ಗ್ರಾಮದ ಈ ಸರ್ಕಾರಿ ಶಾಲೆಗೆ ಸಿಕ್ಕಿರೋ ಆಧುನಿಕತೆಯ ಟಚ್‍ನಿಂದು ಹೈಟೆಕ್ ಶಾಲೆಯಾಗಿದ್ದು, ಮಕ್ಕಳನ್ನ ಸೆಳೆಯುತ್ತಿದೆ. ಕಾರ್ಟೂನ್ ರೈಲಿನಂತ ಶಾಲೆಯಲ್ಲಿ ಹೆಂಚುಗಳು ಕೂಡ ಬಣ್ಣ ಬಳಿದುಕೊಂಡು ಕಂಗೊಳಿಸುತ್ತಿವೆ. ಅಂದು ಕಣ್ಣೀರಿಡ್ತಿದ್ದ ಸರ್ಕಾರಿ ಶಾಲೆಯ ಕಣ್ಣಲ್ಲೀಗ ಆನಂದಬಾಷ್ಪ. ಪುಟ್ಟ-ಪುಟ್ಟ ಮಕ್ಕಳ ಕಣ್ಣಲ್ಲಿ ಖುಷಿಯೋ ಖುಷಿ………

ಈ ರೈಲೆಂಬ ಶಾಲೆಯಲ್ಲಿ ನಾಲ್ಕು ಬೋಗಿಗಳಿವೆ. ಕಾಫಿನಾಡ ಎಕ್ಸ್‍ಪ್ರೆಸ್ ಅನ್ನೋದು ಈ ಸರ್ಕಾರಿ ಶಾಲೆಯ ಟ್ಯಾಗ್ ಲೈನ್. ಈ ರೈಲಿನ ಸಂಖ್ಯೆ 29170619601. ಇಲ್ಲಿನ ಮಕ್ಕಳು ರಾಜಧಾನಿ ತಲುಪಬೇಕೆಂಬ ಆಸೆ-ಹಂಬಲದಿಂದ ಈ ಟ್ರೈನ್‍ಗೆ ಯಲಗುಡಿಗೆ ಟು ಬೆಂಗಳೂರು ಎಂದು ಬರೆಯಲಾಗಿದೆ. ರೈಲಲ್ಲಿ ಪ್ರಯಾಣಿಸುವಾಗ ಕಿಟಕಿಯಿಂದ ಹೊರಗೆ ಕಾಣುವ ಪ್ರಕೃತಿಯಂತೆ ಶಾಲೆಯ ಸುತ್ತಲೂ ಸುಂದರ ಪರಿಸರ ನಿರ್ಮಿಸಿದ್ದಾರೆ. ಶಾಲೆಯ ಸುತ್ತಲು ಅಂತಹ ಪರಿಸರ, ಪ್ರಾಣಿ-ಪಕ್ಷಿಯ ಚಿತ್ರ ಬಿಡಿಸಲಾಗಿದೆ. ವಿಷಯಾವಾರು ಶಿಕ್ಷಣವನ್ನ ಚಿತ್ರಸಹಿತ ಕೊಠಡಿಯಲ್ಲಿ ಇರಿಸಲಾಗಿದೆ. ನಲಿಕಲಿ ರೂಂನಲ್ಲಿ ವಾಲ್‍ಸ್ಲೇಟಗಳನ್ನ ಸ್ಲೇಟಿನ ರೂಪದಲ್ಲಿ ಬರೆಸಿದ್ದಾರೆ. ಸಮವಸ್ತ್ರ ಧರಿಸಿದ ಮಕ್ಕಳು ಟೇಬಲ್ ಮೇಲೆ ಕೂತ ಕಲಿಯುತ್ತಾರೆ. ನಲಿಯುತ್ತಾರೆ. ಸ್ಮಾರ್ಟ್‍ಕ್ಲಾಸ್ ಇದ್ದು, ಸಂಗೀತಕ್ಕೆ ಮಕ್ಕಳೂ ದನಿಯಾಗ್ತಾರೆ. ಇಲ್ಲಿ ಸ್ಕೆತಾಸ್ಕೋಪ್ ಕಿವಿಗೆ ಹಾಕ್ಕೋಳ್ಳೋ ಮಕ್ಕಳು ಮನುಷ್ಯನ ಎದೆಬಡಿತ ಆಲಿಸಿ, ಹೃದಯ ಮನುಷ್ಯನ ಎಡಭಾಗದಲ್ಲಿದ್ದು ಸದಾ ಸದ್ದು ಮಾಡುತ್ತದೆ ಎಂಬುದನ್ನ ಶಿಕ್ಷಕರು ಮಕ್ಕಳಿಗೆ ಮನವರಿಕೆ ಮಾಡ್ತಾರೆ.

ಒಟ್ಟಾರೆ, ಸರ್ಕಾರ ಮಕ್ಕಳಿಲ್ಲದ ಶಾಲೆಯನ್ನ ಮುಚ್ಚುತ್ತೆ ಅಥವ ಪಕ್ಕದೂರಿನ ಶಾಲೆ ಜೊತೆ ವಿಲೀನ ಮಾಡ್ತೀವಿ ಅಂತಾರೆ. ಕನ್ನಡ ಪರ ಸಂಘಟನೆಗಳು ಓ….. ಸರ್ಕಾರಿ ಶಾಲೆ ಮುಚ್ಬಾರ್ದು, ಉಳಿಸ್ಬೇಕು ಕನ್ನಡ-ಕನ್ನಡ ಅಂತಾ ಬೊಬ್ಬೆ ಹೊಡೀತಾರೆ. ಆದ್ರೆ, ಒಂದು ಸರ್ಕಾರಿ ಶಾಲೆಯನ್ನ ಉಳಿಸೋದಕ್ಕೆ ಏನ್ ಮಾಡ್ಬೇಕು ಅನ್ನೋದ್ನ ಯಾರೂ ಅರ್ಥ ಮಾಡ್ಕೊಂಡಿಲ್ಲ. ಅರ್ಥೈಸಿಕೊಂಡು ಸಾಥ್ ನೀಡುದ್ರೆ, ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳು ಹೈಟೆಕ್ ಆಗ್ತಾವೆ, ಕನ್ನಡವೂ ಉಳಿಯುತ್ತೆ. ಖಾಸಗಿ ಶಾಲೆಗೆ ಕಟ್ಟೋ ಹಣವೂ ಉಳಿಯುತ್ತೆ. ಮಕ್ಕಳು ಬುದ್ಧಿವಂತರಾಗ್ತಾರೆ.

ಫ್ರೆಶ್ ನ್ಯೂಸ್

Latest Posts

Featured Videos