ವಿದ್ಯುತ್ ಸ್ಥಾವರಕ್ಕೆ ನೀರು ನುಗ್ಗುವ ಸಾಧ್ಯತೆ

  • In State
  • December 15, 2020
  • 166 Views
ವಿದ್ಯುತ್ ಸ್ಥಾವರಕ್ಕೆ ನೀರು ನುಗ್ಗುವ ಸಾಧ್ಯತೆ

ಗುಂಡ್ಲುಪೇಟೆ: ತಾಲ್ಲೂಕಿನ ಬೇಗೂರು ಸಮೀಪದ ೨೨೦ ಕಿಲೋವ್ಯಾಟ್ ವಿದ್ಯುತ್ ಸ್ಥಾವರಕ್ಕೆ ನೀರು ನುಗ್ಗುವ ಆತಂಕ ಎದುರಾಗುತ್ತಿದ್ದರೂ ಕಂಡು ಕಾಣದಂತೆ ಅಧಿಕಾರಿಗಳು ಇರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ.
ಕಳೆದ ೨೦ ದಿನಗಳಿಂದ ಹೋಬಳಿಯ ಕೆರೆಗಳಿಗೆ ನೀರು ತುಂಬಿಸುತ್ತಿರುವುದು ರೈತರ ಸಂತಸಕ್ಕೆ ಕಾರಣವಾಗಿದ್ದರೆ, ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಗಾಂಧಿ ಗ್ರಾಮದಿಂದ ನಂಜನಗೂಡು ಹಾಗೂ ಗುಂಡ್ಲುಪೇಟೆ ತಾಲೂಕಿನ ೧೨ ಕೆರೆಗಳಿಗೆ ನೀರು ತುಂಬಿಸುವ ಏತನೀರಾವರಿ ಯೋಜನೆಗೆ ನ ೨೬ರಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಚಾಲನೆ ನೀಡಿದ್ದರು.
ಕಮರಹಳ್ಳಿ ಕೆರೆಯ ಪಂಪ್ ಹೌಸ್‌ನಿಂದ ರಾಘವಾಪುರ, ಹಳ್ಳದಮಾದಹಳ್ಳಿ, ಗರಗನಹಳ್ಳಿ, ಅಗತಗೌಡನಹಳ್ಳಿ, ಮಾಡ್ರಹಳ್ಳಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಹಾಗೂ ಬೇಗೂರು ಸೋಮಹಳ್ಳಿ ರಸ್ತೆಯಲ್ಲಿ ನಿರ್ಮಾಣವಾಗಿರುವ ೨೨೦ ಕಿಲೋ ವ್ಯಾಟ್ ವಿದ್ಯುತ್ ಸ್ಥಾವರವನ್ನು ಸಚಿವರು ಲೋಕಾರ್ಪಣೆ ಮಾಡಿದ್ದರು.
ಕೆರೆಗಳಿಗೆ ಹರಿಸಲು ಕಮರಹಳ್ಳಿ ಕೆರೆಯಲ್ಲಿ ಹೆಚ್ಚಿನ ನೀರು ಸಂಗ್ರಹಿಸಲಾಗುತ್ತಿದ್ದು ಇದರ ಹಿನ್ನೀರು ಬೇಗೂರು ಸೋಮಹಳ್ಳಿ ರಸ್ತೆಯವರೆಗೂ ಆವರಿಸುತ್ತಿದೆ. ಅಲ್ಲದೆ ಸಮೀಪದಲ್ಲಿ ನಿರ್ಮಿಸಿರುವ ೨೨೦ ಕಿಲೋವ್ಯಾಟ್ ವಿದ್ಯುತ್ ಸ್ಥಾವರಕ್ಕೆ ನುಗ್ಗುವ ಅಪಾಯ ಎದುರಾಗಿದೆ.
ಕಳೆದ ಬಾರಿಯೂ ಈ ರಸ್ತೆಯ ಮೇಲೆ ನೀರು ತುಂಬಿಕೊಂಡು ಹಳೆಯ ಸೇತುವೆ ಕುಸಿಯುವ ಹಂತಕ್ಕೆ ತಲುಪಿದ್ದರಿಂದ ರಸ್ತೆಯನ್ನು ಬಂದ್ ಮಾಡಲಾಗಿತ್ತು. ಅಲ್ಲದೆ ಕಳೆದ ವರ್ಷ ವಿದ್ಯುತ್ ಸ್ಥಾವರ ನಿರ್ಮಾಣ ಪ್ರದೇಶಕ್ಕೆ ನುಗ್ಗಿದ್ದರಿಂದ ಕಾಮಗಾರಿ ನಿಲ್ಲಿಸಲಾಗಿತ್ತು. ಕೆರೆಯ ತಗ್ಗು ಪ್ರದೇಶದಲ್ಲಿ ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತವಾಗಿ ಸ್ಥಾವರ ಸ್ಥಳಾಂತರಕ್ಕೆ ಒತ್ತಾಯಿಸಿ ರೈತ ಸಂಘಟನೆಗಳು ಪ್ರತಿಭಟನೆಯನ್ನು ಮಾಡಿದ್ದವು.

 

ಫ್ರೆಶ್ ನ್ಯೂಸ್

Latest Posts

Featured Videos