ಆಪರೇಷನ್ ಕಮಲದ ಆಡಿಯೋ ವೈರಲ್

ಆಪರೇಷನ್ ಕಮಲದ ಆಡಿಯೋ ವೈರಲ್

ವಿಜಯಪುರ, ಏ. 30, ನ್ಯೂಸ್ ಎಕ್ಸ್ ಪ್ರೆಸ್: ಇಬ್ಬರು ಶಾಸಕರ ನಡುವಿನ ಚರ್ಚೆಯ ಆಡಿಯೋ ವಿಜಯಪುರ ಜಿಲ್ಲೆಯಲ್ಲಿ ವೈರಲ್ ಆಗಿದೆ. ದೇವರಹಿಪ್ಪರಗಿ ಕ್ಷೇತ್ರದ ಬಿಜೆಪಿ ಶಾಸಕರು ಕಾಂಗ್ರೆಸ್ ಸೇರಲಿದ್ದಾರೆಯೇ? ಎಂಬ ಪ್ರಶ್ನೆ ಕುತೂಹಲ ಮೂಡಿಸಿದೆ. ದೇವರಹಿಪ್ಪರಗಿ ಕ್ಷೇತ್ರದ ಬಿಜೆಪಿ ಶಾಸಕ ಸೋಮನಗೌಡ ಪಾಟೀಲ್ ಮತ್ತು ನಾಗಠಾಣಾ ಕ್ಷೇತ್ರದ ಜೆಡಿಎಸ್ ಶಾಸಕ ದೇವಾನಂದ ಚೌವ್ಹಾಣ್ ನಡುವಿನ ಆಡಿಯೋ ವೈರಲ್ ಆಗಿದೆ. ಆಪರೇಷನ್ ಕಮಲಕ್ಕೆ ಪ್ರತಿಯಾಗಿ ಮೈತ್ರಿ ಕೂಟದ ನಾಯಕರು ಆಪರೇಷನ್‌ಗೆ ಕೈ ಹಾಕಿದ್ದಾರೆಯೇ? ಎಂಬ ಅನುಮಾನ ಹುಟ್ಟಿಕೊಂಡಿದೆ. ದೇವಾನಂದ ಚೌವ್ಹಾಣ್ ಅವರು ಆಡಿಯೋದಲ್ಲಿರುವ ಧ್ವನಿ ನನ್ನದೇ ಎಂದು ಒಪ್ಪಿಕೊಂಡಿದ್ದಾರೆ. ಆದರೆ, ‘ನಾವು ಮಾತನಾಡಿದ್ದು ಬಿಟ್ಟು ಹಲವು ಹೊಸ ಅಂಶಗಳನ್ನು ಸೇರಿಸಿ ಆಡಿಯೋವನ್ನು ತಿರುಚಲಾಗಿದೆ. ಈ ಬಗ್ಗೆ ಕಾನೂನು ಹೋರಾಟ ಮಾಡುತ್ತೇನೆ’ ಎಂದು ಹೇಳಿದ್ದಾರೆ. ದೇವರಹಿಪ್ಪರಗಿ ಕ್ಷೇತ್ರದ ಬಿಜೆಪಿ ಶಾಸಕ ಸೋಮನಗೌಡ ಪಾಟೀಲ್ ಅವರು, ಗೃಹ ಸಚಿವ ಎಂ.ಬಿ.ಪಾಟೀಲ್ ಕರೆದರೆ ಪಕ್ಷಕ್ಕೆ ಬರುವೆ ಎಂದು ಹೇಳಿರುವ ಮಾತುಗಳು ಆಡಿಯೋದಲ್ಲಿವೆ. ಅವರು ಕಾಂಗ್ರೆಸ್ ಸೇರಲಿದ್ದಾರೆಯೇ? ಎಂದು ಕಾದು ನೋಡಬೇಕು. ಆಡಿಯೋ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ದೇವಾನಂದ ಚೌವ್ಹಾಣ್, ‘ರಾಜಕೀಯವಾಗಿ ಕೆಟ್ಟ ಹೆಸರು ತರಲು ಆಡಿಯೋವನ್ನು ತಿರುಚಲಾಗಿದೆ. ನಾವು ಶಾಸಕರು ಮಾತನಾಡಿದ್ದು ನಿಜ. ಕಾನೂನು ಹೋರಾಟವನ್ನು ನಾನು ಮಾಡುತ್ತೇನೆ. ಆಡಿಯೋ ತಿರುಚಿದವರು ಯಾರು ಎಂದು ಆಗ ತಿಳಿಯುತ್ತದೆ’ ಎಂದು ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos