ವಿಜಯ ಬ್ಯಾಂಕ್ ವಿಲೀನ; ಎ.1 ಕರಾವಳಿಗರ ಪಾಲಿಗೆ ಬ್ಲಾಕ್ ಡೇ ಎಂದ ಡಿವೈಎಫ್ಐ

ವಿಜಯ ಬ್ಯಾಂಕ್ ವಿಲೀನ; ಎ.1 ಕರಾವಳಿಗರ ಪಾಲಿಗೆ ಬ್ಲಾಕ್ ಡೇ ಎಂದ ಡಿವೈಎಫ್ಐ

ಮಂಗಳೂರು, ಮಾ.30, ನ್ಯೂಸ್ ಎಕ್ಸ್ ಪ್ರೆಸ್: ಕರಾವಳಿ ಮೂಲದ ವಿಜಯಬ್ಯಾಂಕ್ ನ್ನು ಗುಜರಾತ್ ನ ಬ್ಯಾಂಕ್ ಗಳೊಂದಿಗೆ ಕೇಂದ್ರ ಸರಕಾರ ಎಪ್ರಿಲ್ 1 ರಂದು ವಿಲೀನಗೊಳಿಸುತ್ತಿದ್ದು, ಎಪ್ರಿಲ್ 1 ಕರಾವಳಿಗರ ಪಾಲಿಗೆ ಬ್ಲ್ಯಾಕ್ ಡೇ ಎಂದು ಡಿವೈಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.

ಕರಾವಳಿಯ ಜನತೆಯ ಒಕ್ಕೊರಲ ಪ್ರತಿಭಟನೆ, ಆಗ್ರಹದ ಹೊರತಾಗಿಯೂ ಕೇಂದ್ರ ಸರಕಾರ ಎಪ್ರಿಲ್ 1 ರಿಂದ ವಿಜಯಾ ಬ್ಯಾಂಕ್ ಅಸ್ಥಿತ್ವವನ್ನು ಅಧಿಕೃತವಾಗಿ ರದ್ದುಗೊಳಿಸಿ, ಬ್ಯಾಂಕ್ ಅಫ್ ಬರೋಡಾದ ಭಾಗವಾಗಿ ಘೋಷಿಸಿರುವುದು ಅತ್ಯಂತ ಖಂಡನೀಯ. ಆ ಮೂಲಕ ಕೇಂದ್ರದ ಮೋದಿ ಸರಕಾರ ತುಳುನಾಡಿನ ಜನರ ಭಾವನೆ, ಬೇಡಿಕೆಯನ್ನು ಪೂರ್ಣವಾಗಿ ಕಡೆಗಣಿಸಿದೆ. ಈ ಆಘಾತಕಾರಿ ಬೆಳವಣಿಗೆಗೆ ವಿಲೀನ ತಡೆಯಲು ಯತ್ನಿಸದ ಕರಾವಳಿ ಭಾಗದ ಬಿಜೆಪಿ ಸಂಸದರು, ಶಾಸಕರ ವೈಫಲ್ಯವೇ ನೇರ ಕಾರಣ ಎಂದು ಡಿವೈಎಫ್ಐ ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

ಲಾಭದಲ್ಲಿ ನಡೆಯುತ್ತಿದ್ದ ವಿಜಯಾ ಬ್ಯಾಂಕ್ನ್ನು ಗುಜರಾತ್ ಮೂಲದ ಬ್ಯಾಂಕ್ ಗಳೊಂದಿಗೆ ವಿಲೀನ ಮಾಡುವ ನಿರ್ಧಾರವನ್ನು ಕೇಂದ್ರದ ನರೇಂದ್ರ ಮೋದಿ ಸರಕಾರ ಪ್ರಕಟಿಸಿದಾಗ ಇಡೀ ಕರಾವಳಿ ಈ ಜನವಿರೋಧಿ ತೀರ್ಮಾನವನ್ನು ವಿರೋಧಿಸಿ ಪ್ರತಿಭಟನೆ ದಾಖಲಿಸಿತ್ತು.

ವಿಲೀನ ತೀರ್ಮಾನ ಹಿಂಪಡೆದು ಕರಾವಳಿಯ ಹೆಮ್ಮೆಯಾದ ವಿಜಯಾ ಬ್ಯಾಂಕ್ ಉಳಿಸುವಂತೆ ಸ್ಥಳೀಯ ಸಂಸದರು, ಶಾಸಕರನ್ನು ಆಗ್ರಹಿಸಿತ್ತು. ಆ ಸಂದರ್ಭ ವಿಲೀನ ತೀರ್ಮಾನ ಬದಲಾಗುವ ಭರವಸೆ ಜನತೆಯಲ್ಲಿ ಮೂಡಿತ್ತು. ಅದಕ್ಕೆ ಪೂರಕವಾಗಿ ಸಂಸದರಾದ ನಳಿನ್ ಕುಮಾರ್ ಕಟೀಲ್, ಸದಾನಂದ ಗೌಡ ವಿಜಯಾ ಬ್ಯಾಂಕ್ ಉಳಿಸಲು ಯತ್ನಿಸುವುದಾಗಿ ಭರವಸೆ ನೀಡಿದ್ದರು. ಆದರೆ ಎಲ್ಲಾ ನಿರೀಕ್ಷೆಗಳನ್ನು ಮೀರಿ ಎಪ್ರಿಲ್ ಒಂದರಿಂದ ವಿಜಯಾ ಬ್ಯಾಂಕ್ ತನ್ನ ಅಸ್ಥಿತ್ವ ಕಳೆದುಕೊಳ್ಳುತ್ತಿದೆ. ಎಪ್ರಿಲ್ ಒಂದು ಸುಂದರ ರಾಮ ಶೆಟ್ಟರ ಕನಸು ಕಮರಿದ ಕರಾಳ ದಿನವಾಗಿ ಇತಿಹಾಸದಲ್ಲಿ ದಾಖಲಾಗಲಿದೆ.

ಕರಾವಳಿಯ ಜನತೆಯೂ ಎಪ್ರಿಲ್ 1 ನ್ನು ಬ್ಲ್ಯಾಕ್ ಡೇ ಆಗಿ ಆಚರಿಸಿ ಕೇಂದ್ರದ ಮೋದಿ ಸರಕಾರ, ಸ್ಥಳೀಯ ಬಿಜೆಪಿ ಸಂಸದರಾದ ನಳಿನ್ ಕುಮಾರ್ ಕಟೀಲ್ , ಶೋಭಾ ಕರಂದ್ಲಾಜೆಯವರಿಗೆ ನಾಗರಿಕರ ಪ್ರಬಲ ಪ್ರತಿಭಟನೆ ದಾಖಲಿಸಬೇಕು ಎಂದು ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos