ವಸತಿ ಸಮುಚ್ಚಯ ನಿರ್ಮಾಣಕ್ಕೆ ಸರ್ಕಾರ ದಿಟ್ಟ ಹೆಜ್ಜೆ

ವಸತಿ ಸಮುಚ್ಚಯ ನಿರ್ಮಾಣಕ್ಕೆ ಸರ್ಕಾರ ದಿಟ್ಟ ಹೆಜ್ಜೆ

ದೇವನಹಳ್ಳಿ, ಅ. 24 : ಸಮಾಜ ಕಲ್ಯಾಣ ಇಲಾಖೆಯ ಕಿತ್ತೂರು ರಾಣಿ ಚೆನಮ್ಮ ವಸತಿಶಾಲೆ ಸಮುಚ್ಚಯ ನಿರ್ಮಿಸಲು ತಾಲೂಕಿನ ನಲ್ಲೂರು ಗ್ರಾಮ ಪಂಚಾಯಿತಿಯ ಬಾಲೇಪುರ ಗ್ರಾಮದ ಖಾತೆ ನಂ ೩೨೦ ರಲ್ಲಿ ೮ ಎಕರೆ ಭೂಮಿಯನ್ನು ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಿದ್ದಾರೆ.
ತಾಲೂಕಿನ ಚನ್ನರಾಯಪಟ್ಟಣ ಹೋಬಳಿ ನಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಲೇಪುರ ಗ್ರಾಮದ ಭೂಮಿಯನ್ನು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಚನ್ನಬಸಪ್ಪ ಅವರಿಗೆ ಹಸ್ತಾಂತರಿಸಿ, ಜಿಲ್ಲಾ ಪಂಚಾಯಿತಿ ಸದಸ್ಯ ಲಕ್ಷ್ಮೀ ನಾರಾಯಣಪ್ಪ ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿನ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ, ವಸತಿ ಸಮುಚ್ಚಯಗಳನ್ನು ನಿರ್ಮಾಣ ಮಾಡಲಿಕ್ಕೆ ದಿಟ್ಟ ಹೆಜ್ಜೆ ಇಟ್ಟಿದ್ದು, ರಾಜ್ಯದ ವಿವಿಧ ಕಡೆಗಳಲ್ಲಿ ಕಟ್ಟಡಗಳು ನಿರ್ಮಾಣಗೊಂಡು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.
ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲ :
ಸ್ಥಳೀಯ ಮಕ್ಕಳೂ ಸೇರಿದಂತೆ ಜಿಲ್ಲೆಯ ಹಲವು ಕಡೆಗಳಿಂದ ಬರುವ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸ್ಥಳೀಯವಾಗಿ ಭೂಮಿ ಒದಗಿಸುವ ಕೆಲಸ ಮಾಡಲಾಗಿದೆ ಎಂದರು.
ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಚನ್ನಬಸಪ್ಪ ಮಾತನಾಡಿ, 18 ಕೋಟಿ ವೆಚ್ಚದಲ್ಲಿ ಸರ್ಕಾರದ ನಿಯಮದಂತೆ ಈ ವಸತಿ ಶಾಲೆಗಳಲ್ಲಿ ಮೂಲ ಸೌಕರ್ಯಕ್ಕಾಗಿ ಒಟ್ಟು 12 ಕೊಠಡಿಗಳು ನಿರ್ಮಾಣವಾಗಲಿದೆ.
ಸದುಪಯೋಗಪಡಿಸಿಕೊಳ್ಳಿ :
ಇದರಲ್ಲಿ ಶಾಲಾ ಕೊಠಡಿಗಳು 6, ವಿಜ್ಞಾನ ಪ್ರಯೋಗಾಲಯಕ್ಕೆ 1 ಕೊಠಡಿ, ಗಣಕಯಂತ್ರ ಕೊಠಡಿ 1, ಗ್ರಂಥಾಲಯ 1, ಸಿಬ್ಬಂದಿ ಕೊಠಡಿ 1, ಪ್ರಾಚಾರ್ಯರ ಕೊಠಡಿ 1, ಯೋಗ ಕೊಠಡಿ 1, ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ವಸತಿ ಸೌಕರ್ಯಕ್ಕಾಗಿ 16 ಕೊಠಡಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ 8 ಕೊಠಡಿ, ಅಡುಗೆ ಮತ್ತು ಭೋಜನಕ್ಕೆ ಒಂದು ಕೊಠಡಿ, 16 ಸ್ನಾನಗೃಹ, 20 ಶೌಚಾಲಯ ಕೊಠಡಿಗಳು ಇರಲಿವೆ. ಜೊತೆಗೆ ಆಟದ ಮೈದಾನವಿರಲಿದೆ ಇಂತಹ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ನಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಾವಿತ್ರಮ್ಮ, ಉಪಾಧ್ಯಕ್ಷ ನವೀನ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭಾಗ್ಯಮ್ಮ, ಮುಖಂಡರಾದ  ಲಕ್ಷ್ಮಣ ಗೌಡ, ಲಲಿತೇಶ್, ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos