ಬೆಂಗಳೂರು: ಇಂದು ಕರ್ನಾಟದಲ್ಲಿ ಮೊದಲ ಹಂತದ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಬೆಂಗಳೂರಿನಲ್ಲಿ ನಟ ಉಪೇಂದ್ರ ಅವರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.
ಒಂದು ದಿನ ರಜೆ ಇದೆ ಅಂತ ಎಂಜಾಯ್ ಮಾಡೋದಲ್ಲ. ಈ ಒಂದು ದಿನ ನೀವು ಈ ಸಮಯವನ್ನು ಮೀಸಲಿಡಲೇಬೇಕು. ಇನ್ನು ಮುಂದಿನ 5 ವರ್ಷಗಳ ಕಾಲ ನೀವು ನೆಮ್ಮದಿಯಾಗಿ ಇರಬೇಕು ಎಂದರೆ ಇಂದು ನೀವು ವಿಚಾರಗಳಿಗೆ ಮತ ಹಾಕಲೇಬೇಕು’ ಎಂದು ಉಪೇಂದ್ರ ಹೇಳಿದ್ದಾರೆ.
‘ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಸ್ವಾತಂತ್ರ್ಯ ಇದೆ. ಕೆಲವರಿಗೆ ಈ ವ್ಯವಸ್ಥೆಯೇ ಸರಿ ಇಲ್ಲ ಎನಿಸಬಹುದು. ಅದನ್ನೂ ನಾವು ಒಪ್ಪಿಕೊಳ್ಳಬೇಕು. ಅದಕ್ಕೇ ಪ್ರಜಾಪ್ರಭುತ್ವ ಅನ್ನೋದು. ಪ್ರಭುಗೆ ಹೋಗಿ ನೀನು ಹಿಂಗೇ ಮಾಡು, ಹಂಗೇ ಮಾಡು ಅಂದರೆ ಅದು ಪ್ರಜಾಪ್ರಭುತ್ವ ಅಲ್ಲ, ಸರ್ವಾಧಿಕಾರ ಆಗುತ್ತದೆ. ನೀವು ಖಂಡಿತಾ ಮತ ಹಾಕಲೇಬೇಕು ಅಂತ ಹೇಳೋಕೆ ಆಗಲ್ಲ. ಮತ ಹಾಕಿದರೆ ತುಂಬ ಒಳ್ಳೆಯದು. ಯಾಕೆಂದರೆ, ನೀವು ರಾಜರ ರೀತಿ ಫೀಲ್ ಮಾಡುವ ದಿನ ಇದು. ಈ ಒಂದು ದಿನ ನಿರ್ಲಕ್ಷ್ಯ ಬೇಡ’ ಎಂದು ಉಪೇಂದ್ರ ಹೇಳಿದ್ದಾರೆ.
‘ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಾವು ಪ್ರಭುಗಳು ಅಂತ ಅನಿಸುವುದೇ ಈ ಒಂದು ದಿನ. ಬಹಳ ಮುಖ್ಯವಾದ ದಿನ ಇಂದು. ತುಂಬ ಜನ ಯುವಕರು ಬರುತ್ತಿದ್ದಾರೆ. ಎಲ್ಲರಿಗೂ ಭರವಸೆ ಬಂದಿದೆ. ಮತದಾನದ ಮಹತ್ವ ಎಲ್ಲರಿಗೂ ಗೊತ್ತಾಗುತ್ತಿದೆ. ಯುವಕ-ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸಿ’ ಎಂದಿದ್ದಾರೆ ಉಪೇಂದ್ರ ಅವರ ಓಟಿಂಗ್ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.