ತುಮಕೂರು ವಿವಿ: ಅಧ್ಯಯನ ಪೀಠಗಳು ನಿಷ್ಕ್ರಿಯ

ತುಮಕೂರು ವಿವಿ: ಅಧ್ಯಯನ ಪೀಠಗಳು ನಿಷ್ಕ್ರಿಯ

ತುಮಕೂರು, ಫೆ. 20: ಶೈಕ್ಷಣಿಕ ಮುಂದಾಲೋಚನೆಯಿಲ್ಲದೆ ತುಮಕೂರು ವಿಶ್ವವಿದ್ಯಾಲಯದಲ್ಲಿ ಸ್ಥಾಪಿತವಾಗಿರುವ 13 ವಿವಿಧ ಅಧ್ಯಯನ ಪೀಠಗಳು ನಿಷ್ಕ್ರಿಯವಾಗಿವೆ ಎಂಬ ಸಾರ್ವತ್ರಿಕ ಟೀಕೆಯ ನಡುವೆಯೇ ಮತ್ತೊಂದು ವಿವಾದವನ್ನು ವಿವಿ ಮೈಮೇಲೆ ಎಳೆದುಕೊಳ್ಳಲು ಮುಂದಾಗಿದೆ.

ಸಿಂಡಿಕೇಟ್ ಹಾಗೂ ಅಕಾಡೆಮಿಕ್ ಕೌನ್ಸಿಲ್‌ನಲ್ಲಿ ಒಳಿತು, ಕೆಡುಕು ಚರ್ಚೆ ನಡೆಸದೇ ಪರಮಶಿವಯ್ಯ ಅಧ್ಯಯನ ಪೀಠವನ್ನು ವಿವಿ ಆವರಣದಿಂದ ಹೊರಗೆ ಸ್ಥಾಪಿಸಲು ವಿವಿ ಮುಂದಾಗಿದ್ದು, ಜಾಗ ನೀಡುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆದಿರುವುದು ಅನುಮಾನ ಮೂಡಿಸಿದೆ.

ವಿವಿ ಕ್ಯಾಂಪಸ್‌ನ 69 ಎಕರೆ ತುಮಕೂರು ಭಾಗದಲ್ಲಿದೆ, ಇಲ್ಲಿಯೇ ಸಾಕಷ್ಟು ಕಟ್ಟಡ ನಿರ್ಮಿಸಲು ಅವಕಾಶವಿದೆ, ಬಿದರೆಕಟ್ಟೆಯಲ್ಲಿ 240 ಎಕರೆ ಆದರೂ, ರಾಜಕೀಯ ಕಾರಣಕ್ಕೆ ವಿವಿಯಿಂದ ಅಧ್ಯಯನ ಪೀಠವನ್ನು ಹೊರಗೆ ಕೊಂಡೊಯ್ಯಲಾಗುತ್ತಿದೆ ಎಂಬ ವದಂತಿ ವಿವಿ ಆವರಣದಲ್ಲಿ ಪ್ರತಿಧ್ವನಿಸುತ್ತಿದೆ.

ಘಟಿಕೋತ್ಸವದಲ್ಲಿ ಭೂಮಿ ಹಸ್ತಾಂತರ: ತುಮಕೂರು ಹೊರವಲಯದ ಗಂಗಸಂದ್ರದಲ್ಲಿ 20ಗುಂಟೆ ಜಮೀನು ಮಂಜೂರು ಮಾಡಲು ಜಿಲ್ಲಾಧಿಕಾರಿ ವಿಶೇಷ ಆಸಕ್ತಿ ವಹಿಸಿದ್ದಾರೆ ಎನ್ನಲಾಗಿದ್ದು, ಫೆ.25ರಂದು ನಡೆಯಲಿರುವ ವಿವಿ ಘಟಿಕೋತ್ಸವದಲ್ಲಿ ಭೂಮಿ ಹಸ್ತಾಂತರ ಕಾರ್ಯ ನಡೆಯಲಿದೆ ಎನ್ನಲಾಗಿದೆ. ಸಿಂಡಿಕೇಟ್ ಸದಸ್ಯರ ಅನನುಭವದಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಮಾರಕವಾದ ನಿರ್ಧಾರಗಳು ವಿವಿ ತೆಗೆದುಕೊಳ್ಳುತ್ತಿದೆ ಎಂಬ ದೂರಿದೆ.

ನಿರ್ದೇಶಕರ ಆಯ್ಕೆಗೆ ಮಾನ್ಯತೆ ಇಲ್ಲ: ಸಾಂವಿಧಾನಿಕವಾಗಿ ಸ್ವಾಯತ್ತ ಸಂಸ್ಥೆಯಾಗಿರುವ ವಿಶ್ವವಿದ್ಯಾಲಯದಲ್ಲಿ ಸ್ಥಾಪನೆಯಾಗುವ ಅಧ್ಯಯನ ಪೀಠದ ನಡಾವಳಿಗಳು ಸಿಂಡಿಕೇಟ್ ಹಾಗೂ ಅಕಾಡಮಿಕ್ ಕೌನ್ಸಿಲ್ ಸಭೆಯಲ್ಲಿ ಚರ್ಚಿಸಿ ರೂಪಿಸಬೇಕಿದೆ. ಇಂತನ ನಿಯಮಗಳಿಗೆ ಸರ್ಕಾರದ ಒಪ್ಪಿಗೆ ಕಡ್ಡಾಯವಾಗಿ ಬೇಕಿದ್ದು ವಿವಿಯಲ್ಲಿ ಕುಮಾರವ್ಯಾಸ ಅಧ್ಯಯನ ಪೀಠದ ಹೊರತಾಗಿ ಮತ್ಯಾವುದೇ ಪೀಠಕ್ಕೂ ಇದು ಅನುಮೋದನೆಯಾಗಿಲ್ಲ. ಇಂತಹ ಸಮಯಲ್ಲಿ ಸರ್ಕಾರದ ಕೆಇಎಸ್ ಅಧಿಕಾರಿ ಜೈಪ್ರಕಾಶ್ ಅವರನ್ನು ತರಾತುರಿಯಲ್ಲಿ ಪರಮಶಿವಯ್ಯ ಅಧ್ಯಯನ ಪೀಠದ ನಿರ್ದೇಶಕರನ್ನಾಗಿ ಸಿಂಡಿಕೇಟ್ ಏಕಪಕ್ಷೀಯವಾಗಿ ಆಯ್ಕೆ ಮಾಡಿರುವುದು ವಿವಿ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ವಿವಿ ಪ್ರಾಧ್ಯಾಪಕರೊಬ್ಬರು ಅಭಿಪ್ರಾಯಪಟ್ಟರು.

 

ಫ್ರೆಶ್ ನ್ಯೂಸ್

Latest Posts

Featured Videos