ತುಮಕೂರನ್ನು ಬಿಟ್ಟುಕೊಡಲು ಜೆಡಿಎಸ್’ಗೆ ಕಾಂಗ್ರೆಸ್ ಆಗ್ರಹ

ತುಮಕೂರನ್ನು ಬಿಟ್ಟುಕೊಡಲು ಜೆಡಿಎಸ್’ಗೆ ಕಾಂಗ್ರೆಸ್ ಆಗ್ರಹ

ಬೆಂಗಳೂರು, ಮಾ.15, ನ್ಯೂಸ್ ಎಕ್ಸ್ ಪ್ರೆಸ್: ಹಾಲಿ ಸಂಸದರಿರುವ ತುಮಕೂರು ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್‍ಗೆ ಬಿಟ್ಟುಕೊಡುವಂತೆ ಜೆಡಿಎಸ್ ವರಿಷ್ಠರಿಗೆ ಮನವಿ ಮಾಡುತ್ತಿರುವುದಾಗಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಮುದ್ದಹನುಮೇಗೌಡರೊಂದಿಗೆ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲಿ ಸಂಸದರಿರುವ 10 ಕ್ಷೇತ್ರಗಳನ್ನು ಕಾಂಗ್ರೆಸ್‍ಗೆ ಬಿಟ್ಟುಕೊಡುವಂತೆ ಕೇಳಲಾಗಿದ್ದು, ಅದನ್ನು ಹೈಕಮಾಂಡ್‍ಗೂ ಸ್ಪಷ್ಟವಾಗಿ ಹೇಳಿದ್ದೆವು.

ಹೈಕಮಾಂಡ್ ಸಹ ಎಲ್ಲರ ಅಭಿಪ್ರಾಯ ಪಡೆದುಕೊಂಡಿತ್ತು. ನಂತರ ದೇವೇಗೌಡರ ನಡುವೆ ಮಾತುಕತೆ ನಡೆದಿದೆ. ತುಮಕೂರು ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಡಲಾಗಿದೆ. ಆ ರೀತಿ ಏಕೆ ಆಯಿತು ಗೊತ್ತಿಲ್ಲ. ನಾವು ಈಗ ಮತ್ತೆ ಜೆಡಿಎಸ್ ಮುಖಂಡರನ್ನು ಭೇಟಿ ಮಾಡಿ ತುಮಕೂರು ಕ್ಷೇತ್ರವನ್ನು ಬಿಟ್ಟುಕೊಡುವಂತೆ ಕೇಳುತ್ತಿದ್ದೇವೆ. ಈಗಾಗಲೇ ದೇವೇಗೌಡರನ್ನು ಭೇಟಿ ಮಾಡಿದ್ದೇವೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡುತ್ತೇವೆ ಎಂದು ತಿಳಿಸಿದರು.

ನಾವು ಹೈಕಮಾಂಡ್ ತೀರ್ಮಾನವನ್ನು ಗೌರವಿಸುತ್ತೇವೆ. ಆದರೆ ತುಮಕೂರಿನಲ್ಲಿ ಮುದ್ದಹನುಮೇಗೌಡರು ಸಂಸದರಾಗಿ ಒಳ್ಳೆ ಕೆಲಸ ಮಾಡಿದ್ದರು. ಜನರ ವಿಶ್ವಾಸ ಗಳಿಸಿದ್ದಾರೆ. ನಮಗೆ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಮತ್ತೆ ತುಮಕೂರು ಕ್ಷೇತ್ರವನ್ನು ಕಾಂಗ್ರೆಸ್‍ಗೆ ಬಿಟ್ಟುಕೊಡುವಂತೆ ಒತ್ತಾಯಿಸುತ್ತಿರುವುದಾಗಿ ಹೇಳಿದರು.

ಪ್ರಚಾರದ ವೇಳೆ ತಟಸ್ಥರಾಗಿರುತ್ತಾರೆ ಎಂಬುದು ಸರಿಯಲ್ಲ. ಹೈಕಮಾಂಡ್ ನಿರ್ಧಾರವನ್ನು ಗೌರವಿಸುತ್ತೇವೆ. ಕೊನೆ ಕ್ಷಣದವರೆಗೂ ಮನವೊಲಿಸುವ ಪ್ರಯತ್ನ ಮುಂದುವರೆಸುತ್ತೇವೆ ಎಂದು ತಿಳಿಸಿದರು.

ಬರಗೂರು ರಾಮಚಂದ್ರಪ್ಪ ಅವರ ಭೇಟಿ ವೇಳೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ತಾವು ಬರೆದ ರಾಜಕುಮಾರ ಜೀವನ ಚರಿತ್ರೆ ಪುಸ್ತಕ ನೀಡಿದರು. ಸಂಸದ ಮುದ್ದಹನುಮೇಗೌಡ ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos