ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರ ಹೆಚ್ಚಳವಿಲ್ಲ; ಡಿ.ಸಿ.ತಮ್ಮಣ್ಣ

ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರ ಹೆಚ್ಚಳವಿಲ್ಲ; ಡಿ.ಸಿ.ತಮ್ಮಣ್ಣ

ಬೆಂಗಳೂರು, ಮಾ.5, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭೆ ಚುನಾವಣೆ ಮುಗಿಯುವವರೆಗೂ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರ ಹೆಚ್ಚಳವಿಲ್ಲ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾ.1ರಿಂದ ಡೀಸಲ್ ದರ ಪ್ರತೀ ಲೀಟರ್‍ಗೆ 3 ರೂ. ಹೆಚ್ಚಳವಾಗಿದೆ. ತಿಂಗಳಿಗೆ 15 ಕೋಟಿಯಂತೆ ವಾರ್ಷಿಕ 180 ಕೋಟಿ ರೂ. ಸಾರಿಗೆ ಸಂಸ್ಥೆಗಳಿಗೆ ಹೊರೆಯಾಗಲಿದೆ ಎಂದರು.

ಈ ವಿಚಾರವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಗಮನಕ್ಕೆ ತಂದು ಬಸ್ ದರ ಹೆಚ್ಚಳ ಮಾಡುವಂತೆ ಮನವಿ ಮಾಡಲಾಗಿತ್ತು. ಆದರೆ, ಸದ್ಯಕ್ಕೆ ಬಸ್ ಪ್ರಯಾಣ ದರ ಹೆಚ್ಚಳ ಮಾಡುವುದು ಬೇಡ ಎಂದು ಸೂಚನೆ ನೀಡಿದ್ದಾರೆ. ಈಗಾಗಲೇ ಶೇ.18ರಷ್ಟು ಬಸ್ ಪ್ರಯಾಣ ದರವನ್ನು ಹೆಚ್ಚಳ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು ಎಂದರು.

ಕಂಪ್ಯೂಟರ್, ರೆಕ್ಸಿನ್ ಸೇರಿದಂತೆ ವಿವಿಧ ಹಗರಣಗಳಲ್ಲಿ 30ಕ್ಕೂ ಹೆಚ್ಚು ಮಂದಿಯನ್ನು ಅಮಾನತು ಮಾಡಲಾಗಿದ್ದು, ಸಾರಿಗೆ ಇಲಾಖೆಯ 2-3 ಹಗರಣಗಳನ್ನು ಒಟ್ಟಿಗೆ ಸೇರಿಸಿ ಸೂಕ್ತ ತನಿಖೆಗೆ ನಿರ್ಧಾರ ಮಾಡಲಾಗಿದೆ ಎಂದು ಸಚಿವ ತಮ್ಮಣ್ಣ ಹೇಳಿದರು.

ಬಸ್‍ಗಳ ಬಿಡಿ ಭಾಗಗಳ ಖರೀದಿ, ಕವಚ ನಿರ್ಮಾಣ ವಿಷಯದಲ್ಲಿ ಈಗಾಗಲೇ ತನಿಖೆ ಆರಂಭಿಸಲಾಗಿದೆ. ಸಾರಿಗೆ ಸಂಸ್ಥೆಗೆ ಹೊರೆಯಾದ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್ ಬಸ್‍ಗಳನ್ನು ಗುತ್ತಿಗೆ ಆಧಾರದ ಮೇಲೆ ಪಡೆಯುವುದನ್ನು ಕೈ ಬಿಟ್ಟು ಖರೀದಿ ಮಾಡಲು ನಿರ್ಧರಿಸಲಾಗಿದೆ. 80 ಬಸ್‍ಗಳನ್ನು ಖರೀದಿಸಲು ಉದ್ದೇಶಿಸಿದ್ದು, ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೂ ಪತ್ರ ಬರೆಯಲಾಗಿದೆ ಎಂದರು.

ಬಸ್ ಖರೀದಿಗೆ ಸಂಬಂಧಿಸಿದಂತೆ ಜಾಗತಿಕ ಟೆಂಡರ್ ಕರೆದು ತರಬೇತಿ ಮತ್ತು ನಿರ್ವಹಣೆ ಹೊಣೆ ಅವರಿಗೆ ನೀಡುವ ಉದ್ದೇಶವಿದೆ ಎಂದು ಸಚಿವರು ಹೇಳಿದರು.ವಿವಿಧ ಸಾರಿಗೆ ಸಂಸ್ಥೆಗಳಲ್ಲಿನ ಸ್ಕ್ರಾ ್ಯಪ್ (ಗುಜರಿ) ಸಾಮಗ್ರಿಗಳನ್ನು ಪ್ರತಿ 6 ತಿಂಗಳಿಗೊಮ್ಮೆ ಹರಾಜು ಮಾಡಲು ಆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಅಧಿಕಾರ ನೀಡಲಾಗಿದೆ. ಸಾಧ್ಯವಾದಷ್ಟು ಆದಾಯ ಸೋರಿಕೆ ತಡೆಗಟ್ಟಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಬಿಎಂಟಿಸಿ ಮತ್ತು ಕೆಎಸ್‍ಆರ್‍ಟಿಸಿಗೆ ತಲಾ ಒಂದೂವರೆ ಸಾವಿರದಂತೆ ಒಟ್ಟು ಮೂರು ಸಾವಿರ ಬಸ್‍ಗಳನ್ನು ಖರೀದಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು. ನಗರದ ಒಳಗೆ ಬರುವಂತಹ ಕಾಂಟ್ರ್ಯಾಕ್ಟ್ ಕ್ಯಾರೆಜ್ ಖಾಸಗಿ ಬಸ್‍ಗಳನ್ನು ತಡೆಯಲು ಹಂತ ಹಂತವಾಗಿ ಕಾನೂನನ್ನು ಬಿಗಿಗೊಳಿಸಲಾಗುವುದು ಎಂದು ತಮ್ಮಣ್ಣ ತಿಳಿಸಿದರು.

ಪ್ರತಿ ಬಸ್‍ನ ಮಾಹಿತಿಯನ್ನು ಕಲೆ ಹಾಕಲಾಗುತ್ತದೆ. ಬಸ್ ಆರಂಭವಾದ ದಿನದಿಂದ 8 ಲಕ್ಷ ಕಿ.ಮೀ. ಕ್ರಮಿಸುವವರೆಗೂ ಅದಕ್ಕೆ ಬಳಸಿದಿ ಡೀಸಲ್,ಟೈರು, ಬಿಡು ಭಾಗಗಳ ಬಳಕೆ ಸೇರಿದಂತೆ ಪ್ರತಿಯೊಂದು ಮಾಹಿತಿಯನ್ನೂ ದಾಖಲಿಸಲಾಗುವುದು ಎಂದರು.

ನಿಯಮಗಳಿಗೆ ತಿದ್ದುಪಡಿ: ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಲೋಕಸಭೆ ಚುನಾವಣೆ ನಂತರ ನಿಯಮಾವಳಿಗಳಿಗೆ ತಿದ್ದುಪಡಿ ತರಲಾಗುವುದು. ಕೇಂದ್ರ ಮೋಟಾರು ವಾಹನ ಕಾಯ್ದೆ ಪ್ರಕಾರ ಆರ್‌ಟಿಒ ಹುದ್ದೆಗೆ ನೇಮಕವಾಗಲು ಒಂದು ವರ್ಷ ಗ್ಯಾರೆಜ್ ತರಬೇತಿ ಹೊಂದಿರಬೇಕು.

ನಿಯಮಾವಳಿಗಳಿಗೆ ತಿದ್ದುಪಡಿ ತಂದು ಆಯ್ಕೆಯಾದ ನಂತರ ಕೆಎಸ್‍ಆರ್‍ಟಿಸಿ ಮತ್ತು ಬಿಎಂಟಿಸಿ ಗ್ಯಾರೆಜ್‍ಗಳಲ್ಲಿ ಒಂದು ವರ್ಷ ತರಬೇತಿ ನೀಡಲಾಗುವುದು. ತೃಪ್ತಿಕರವಾಗದಿದ್ದರೆ ಮತ್ತೊಂದು ವರ್ಷ ಮುಂದುವರೆಸಲಾಗುವುದು. ಆ ಮೂಲಕ ಖಾಲಿ ಇರುವ ಆರ್‌ಟಿಒ ಹುದ್ದೆಗಳನ್ನು ಭರ್ತಿ ಮಾಡಲು ಯೋಜಿಸಲಾಗಿದೆ ಎಂದರು.

ರಾಜ್ಯದಲ್ಲಿ 760 ಆರ್‌ಟಿಒ ಹುದ್ದೆಗಳು ಮಂಜೂರಾಗಿದ್ದು, 250ಮಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. 180 ಹುದ್ದೆಗಳ ನೇಮಕಾತಿ ವಿಚಾರ ಸುಪ್ರೀಂಕೋರ್ಟ್‍ನಲ್ಲಿದೆ. ಇನ್ನು 150 ಆರ್‌ಟಿಒ ಹುದ್ದೆಗಳ ನೇಮಕಾತಿಗೆ ಕೆಪಿಎಸ್‍ಸಿ ಪಟ್ಟಿಯನ್ನೇ ಬಿಡುಗಡೆ ಮಾಡಿಲ್ಲ.

ಒಬ್ಬ ಆರ್‌ಟಿಒ ಮೂರ್ನಾಲ್ಕು ಕಡೆ ಕೆಲಸ ಮಾಡುವಂತಾಗಿದೆ ಎಂದು ಹೇಳಿದರು. ಚೆಕ್‍ಪೋಸ್ಟ್‍ಗಳಲ್ಲಿನ ಅವ್ಯವಹಾರ ನಿಯಂತ್ರಣಕ್ಕೆ ಸಿಸಿ ಟಿವಿ, ಪ್ರತ್ಯೇಕ ಪೆಟ್ರೋಲಿಂಗ್ ವ್ಯವಸ್ಥೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುವುದರು.

ಫ್ರೆಶ್ ನ್ಯೂಸ್

Latest Posts

Featured Videos