ನೆರೆ ಸಂತ್ರಸ್ತರ ನೆರವಿಗೆ ನಿಂತ ಮಂಗಳಮುಖಿಯರು

ನೆರೆ ಸಂತ್ರಸ್ತರ ನೆರವಿಗೆ ನಿಂತ ಮಂಗಳಮುಖಿಯರು

ದಾವಣಗೆರೆ, ಆ.17: ಮಂಗಳಮುಖಿಯರೆಂದರೆ ಸಮಾಜ ತಾತ್ಸಾರ ತೋರುವುದೇ ಹೆಚ್ಚು. ಆದರೆ ಅದೇ ಮಂಗಳಮುಖಿಯರು ಈಗ ಸಮಾಜಕ್ಕೆ ನೆರವಾಗಲು ಮುಂದಾಗಿದ್ದಾರೆ. ನೆರೆ ಸಂತ್ರಸ್ತರಿಗೆಂದು ದೇಣಿಗೆ ಸಂಗ್ರಹಿಸುತ್ತಿದ್ದು, ಉತ್ತರ ಕರ್ನಾಟಕದ ಪ್ರವಾಹದಲ್ಲಿ ನಲುಗಿರುವವರ ಸಹಾಯಕ್ಕೆ ನಿಂತಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ಪ್ರವಾಹಕ್ಕೆ ಜನರು ತತ್ತರಿಸಿದ್ದು ಮನೆ, ಹೊಲ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ನೆರೆ ನಿಂತರೂ ಅವರ ಜೀವನದ ನೋವು ನಿಂತಿಲ್ಲ. ಸಾಂಕ್ರಾಮಿಕ ರೋಗಗಳ ಭೀತಿ, ಮನೆ ಬಿದ್ದಿರುವುದು, ಮನೆಯಲ್ಲಿ ಕೆಸರು ತುಂಬಿಕೊಂಡು ವಾಸಿಸಲು ಸಾಧ್ಯವಾಗದ ಸ್ಥಿತಿಯಿದೆ. ಈಗಾಗಲೇ ಸಾರ್ವಜನಿಕರು ನೆರೆ ಸಂತ್ರಸ್ತರ ಸಹಾಯಕ್ಕೆ ಧಾವಿಸಿದ್ದು, ಸಾಕಷ್ಟು ಸಹಾಯವನ್ನು ಮಾಡಿದ್ದಾರೆ.
ಇದೀಗ ಮಂಗಳಮುಖಿಯರೂ ನೆರೆ ಸಂತ್ರಸ್ತರಿಗೆ ನೆರವಾಗಲು ಧಾವಿಸಿದ್ದಾರೆ. ಇಂದು ದಾವಣಗೆರೆಯ ಮಹಾನಗರ ಪಾಲಿಕೆ ಮುಂಭಾಗ 20ಕ್ಕೂ ಹೆಚ್ಚು ಮಂಗಳಮುಖಿಯರು ದೇಣಿಗೆ ಡಬ್ಬಿಗಳನ್ನು ಹಿಡಿದು ನೆರೆ ಸಂತ್ರಸ್ತರಿಗೆ ನೆರವು ನೀಡುವಂತೆ ಮನವಿ ಮಾಡಿಕೊಂಡರು.
ಇಷ್ಟು ದಿನ ಕೇವಲ ಅವರ ಹೊಟ್ಟೆ ತುಂಬಿಸಿಕೊಳ್ಳಲು ಸರ್ಕಲ್ ಗಳಲ್ಲಿ ನಿಂತು ಪ್ರಯಾಣಿಕರ ಬಳಿ ಹಣ ವಸೂಲಿ ಮಾಡುತ್ತಿದ್ದ ಮಂಗಳಮುಖಿಯರು, ಉತ್ತರ ಕರ್ನಾಟಕ ಜನರ ಕಷ್ಟವನ್ನು ನೋಡಲಾಗದೇ ದೇಣಿಗೆ ಸಂಗ್ರಹಿಸುತ್ತಿದ್ದಾರೆ. ಎರಡು ದಿನ ದೇಣಿಗೆ ಸಂಗ್ರಹಿಸಲಿದ್ದು, ಸಂಗ್ರಹಿಸಿದ ಹಣದಲ್ಲಿ ನಿರಾಶ್ರಿತರಿಗೆ ಉಪಯುಕ್ತವಾಗುವ ವಸ್ತುಗಳನ್ನು ಖರೀದಿ ಮಾಡಿ ನೇರವಾಗಿ ಹೋಗಿ ಸಂತ್ರಸ್ತರಿಗೆ ವಿತರಿಸಲಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos