ಈ ರಸ್ತೆಯಲ್ಲಿ ಸಂಚರಿಸುವರು ಕೈಯಲ್ಲಿ ಜೀವ ಹಿಡಿದು ಪ್ರಯಾಣಿಸುವರು!

ಈ ರಸ್ತೆಯಲ್ಲಿ ಸಂಚರಿಸುವರು ಕೈಯಲ್ಲಿ ಜೀವ ಹಿಡಿದು ಪ್ರಯಾಣಿಸುವರು!

ಬೆಂಗಳೂರು, ಜೂ. 19: ಕೆ.ಆರ್.ಪುರ: ಕೆ.ಚನ್ನಸಂದ್ರದಿಂದ ಹೊರಮಾವು ಹೊರವರ್ತುಲ ರಸ್ತೆ ಮೂಲಕ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ದೊಡ್ಡ ದೊಡ್ಡ ಹೊಂಡಗಳಿದ್ದರಿಂದ ಇಡಿ ರಸ್ತೆ ಹದಗೆಟ್ಟಿದೆ. ಗುಂಡಿಗಳಿಗೆ ಬೀಳುವ ವಾಹನ ಸವಾರರು ಜೀವ ರಕ್ಷಣೆಗೆ ಪರಿತಪಿಸುತ್ತಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೊಸದಾಗಿ ಸೇರ್ಪಡೆಯಾದ 110 ಹಳ್ಳಿಗಳಿಗೆ ಕಾವೇರಿ ನೀರು ಒದಗಿಸುವ ಯೋಜನೆಗೆ ಕಳೆದ ಒಂದೂವರೆ ವರ್ಷದ ಹಿಂದೆ ಕಾಮಗಾರಿ ಆರಂಭಿಸಿದೆ. ಕೆ.ಆರ್.ಪುರ ಕೆಲವು ಹಳ್ಳಿಗಳು ಈ ಯೋಜನೆಯ ಲಾಭ ಪಡೆಯಲಿವೆ. ಅದರಂತೆ ಕೆ.ಚನ್ನಸಂದ್ರದಿಂದ ಹೊರಮಾವು ವರ್ತುಲ ರಸ್ತೆಯವರೆಗೆ ರಸ್ತೆಯನ್ನು ಅಗೆಯಲಾಗಿತ್ತು. ಕಾಮಗಾರಿ ಮುಗಿದಿದ್ದರೂ ರಸ್ತೆಯನ್ನು ಮರುನಿರ್ಮಾಣ ಮಾಡದೆ ಇರುವುದರಿಂದ ಪ್ರತಿ ಬಾರಿ ಮಳೆ ಸುರಿದಾಗಲೆಲ್ಲಾ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗುತ್ತದೆ. ದ್ವಿಚಕ್ರ ವಾಹನ ಸವಾರರು ಗುಂಡಿಗಳಿಗೆ ಬಿದ್ದು ಗಾಯಗೊಳ್ಳುವುದು ಸಮಾನ್ಯವಾಗಿದೆ.

ಈ ರಸ್ತೆ ಹೊಸಕೋಟೆ, ಕಾಡಾ ಅಗ್ರಹಾರ, ರಾಂಪೂರ ಕಡೆಯಿಂದ ಕೆ.ಚನ್ನಸಂದ್ರದಿಂದ ಹೊರಮಾವು ವರ್ತುಲ ರಸ್ತೆಯ ಮೂಲಕ ನಗರಕ್ಕೆ ಪ್ರವೇಶ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ವಾಹನಗಳ ಸಂಖ್ಯೆ ಹೆಚ್ಚಿದೆ. ಹೆಚ್ಚಾಗಿ ಲಘು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಪ್ರತಿನಿತ್ಯ 15 ಸಾವಿರಕ್ಕೂ ಹೆಚ್ಚು ವಾಹನಗಳು ಈ ಪ್ರಮುಖ ರಸ್ತೆಯಲ್ಲಿ ಸಂಚರಿಸುತ್ತವೆ. ಸುಮಾರು 3 ಕಿ.ಮಿ. ರಸ್ತೆಯಲ್ಲಿ ಸುಮಾರು ಗುಂಡಿಗಳು ಹಾಗೂ ಬೃಹದಾಕಾರದ ಹೊಂಡಗಳು ಉಲ್ಬಣಗೊಂಡಿವೆ. ಬೆಳಿಗ್ಗೆ ಮತ್ತು ಸಾಯಂಕಾಲದ ವೇಳೆಯಲ್ಲಿ ಸಾಕಷ್ಟು ಜನರು ಉದ್ಯೋಗ ಪ್ರಯಾಣದ ನಿಮಿತ್ತ ಸಂಚರಿಸುತ್ತಾರೆ. ಅಪಾಯದ ನಡುವೆ ಸಂಚಾರ ಕಷ್ಟವಾಗಿದೆ ಎನ್ನುತ್ತಾರೆ ವಾಹನ ಸವಾರರು.

ಆಗಾಗ ಅಪಘಾತಗಳು ಸಂಭವಿಸುತ್ತಿವೆ. ರಸ್ತೆಯಲ್ಲಿ ಸಂಚರಿಸಲು ಕೈಯಲ್ಲಿ ಜೀವ ಹಿಡಿದು ಪ್ರಯಾಣಿಸುವ ಪರಿಸ್ಥಿತಿ ಇದೆ. ಮಕ್ಕಳನ್ನು ಶಾಲೆಗೆ ಕಳುಹಿಸುವ ಸಂದರ್ಭದಲ್ಲಿ ಮಕ್ಕಳು ಸೇರಿ ಹೊಂಡಕ್ಕೆ ಬಿದ್ದಿದ್ದೆ. ಹೊಂಡಕ್ಕೆ ಬಿದ್ದ ವೇಳೆ ಸಾರ್ವಜನಿಕರು ಆಸ್ಪತ್ರೆಗೆ ದಾಖಲು ಮಾಡಿದ್ದರು. ಹೊಂಡಗಳು ಬಿದ್ದ ರಸ್ತೆಯಲ್ಲಿ ನಗರಕ್ಕೆ ತೆರಳಲು ಹರಸಾಹಸ ಪಡಬೇಕಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಕಲ್ಕೆರೆ ಗ್ರಾಮದ ನಿವಾಸಿ ಮಹೇಶ್ ದೂರಿದರು.

ಫ್ರೆಶ್ ನ್ಯೂಸ್

Latest Posts

Featured Videos