ಪೂರ್ವಜರು ಸ್ಥಾಪಿಸಿರುವ ಜಲಮೂಲಗಳನ್ನು ಸಂರಕ್ಷಿಸಿಕೊಳ್ಳಬೇಕು

ಪೂರ್ವಜರು ಸ್ಥಾಪಿಸಿರುವ ಜಲಮೂಲಗಳನ್ನು ಸಂರಕ್ಷಿಸಿಕೊಳ್ಳಬೇಕು

ದೇವನಹಳ್ಳಿ, ಸೆ. 17: ಪೂರ್ವಜರು ಸ್ಥಾಪಿಸಿರುವ ಜಲಮೂಲಗಳನ್ನು ಸಂರಕ್ಷಿಸಿಕೊಳ್ಳಬೇಕು. ಹೆಚ್ಚುತ್ತಿರುವ ಜನಸಂಖ್ಯೆಯಿಂದ ಪ್ರಾಕೃತಿಕ ಸಂಪನ್ಮೂಲದ ಮೇಲೆ ಒತ್ತಡವಿದೆ. ಅದಕ್ಕಾಗಿ ಕೆರೆಗಳ ಹೂಳುತ್ತುವುದರಿಂದ ಮಳೆ ನೀರು ನಿಲ್ಲಲು ಸಹಕಾರಿಯಾಗುತ್ತದೆ. ಇದರಿಂದ ಅಂತರ್ಜಲಮಟ್ಟ ಹೆಚ್ಚಾಗಲು ಅನುಕೂಲವಾಗುತ್ತದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.

ತಾಲೂಕಿನ ಅರದೇಶನಹಳ್ಳಿ ಗ್ರಾಮದ ಸರ್ವೇ ನಂ.224 ರಲ್ಲಿರುವ ಸುಮಾರು 202 ಎಕರೆ ಪ್ರದೇಶದ ಕೆರೆಯ ಹೂಳೆತ್ತುವ ಕಾಮಗಾರಿಗೆ ಸಮಾಜ ಸೇವಕ ಚೇತನ್‌ ಗೌಡ ಮತ್ತು ಅವರ ತಂಡದ ನೇತೃತ್ವದಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಕೆರೆಗಳಲ್ಲಿ ಹೆಚ್ಚು ಹೂಳು ತುಂಬಿರುವುದರಿಂದ ಬಿದ್ದ ಮಳೆ ನೀರು ಕೆರೆಯಲ್ಲಿ ನಿಲ್ಲದೆ ಪೋಲಾಗುತ್ತಿದೆ. ಬಿದ್ದ ಮಳೆ ನೀರು ಸರಾಗವಾಗಿ ಹರಿಯಲು ಕೆರೆಗಳಲ್ಲಿ ಹೂಳೆತ್ತುವ ಕಾರ್ಯವಾಗಬೇಕಿದೆ.

ಈ ಕಾರ್ಯದಿಂದ ಮಳೆ ನೀರು ಸಂಗ್ರಹವಾಗುವುದರ ಜೊತೆಗೆ ಈ ಭಾಗದ ರೈತರಿಗೆ, ಪ್ರಾಣಿ-ಪಕ್ಷಿಗಳಿಗೆ, ವನ್ಯ ಜೀವಿಗಳಿಗೆ ಸಾಕಷ್ಟು ಅನುಕೂಲವಾಗುತ್ತದೆ. ಈ ಭಾಗದಲ್ಲಿ ಯಾವುದೇ ನದಿ ಮೂಲಗಳಲ್ಲಿ ಮಳೆ ಆಧಾರಿತವಾಗಿ ಈ ಜಿಲ್ಲೆ ಇದ್ದು, ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿರುವುದರಿಂದ ಇಂತಹ ಕೆರೆ ಹೂಳೆತ್ತುವ ಕಾರ್ಯ ಮಾಡುವುದರಿಂದ ಜನರಿಗೆ, ಪ್ರಾಣಿ-ಪಕ್ಷಿ ಸಂಕುಲಕ್ಕೆ ಹೆಚ್ಚಿನ ಅನುಕೂಲವಾಗುತ್ತದೆ. ಸರ್ಕಾರದ ಅನುದಾನವಿಲ್ಲದೆ ಇದೇ ಭಾಗದ ಸಮಾಜ ಸೇವೆಯಲ್ಲಿ ತೊಡಗಿರುವ ಚೇತನ್‌ ಗೌಡ ಹಾಗೂ ಅವರ ತಂಡ ಕೆರೆ ಹೂಳೆತ್ತುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯವಾಗಿದೆ.

ಮುಂದಿನ ದಿನಗಳಲ್ಲಿ ಜಿಲ್ಲೆಯ ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ದಾನಿಗಳ ಸಹಕಾರದಿಂದ ಮಾಡಲಾಗುವುದು. ಜಿಲ್ಲೆಯಲ್ಲಿ ನೀಲಗಿರಿ ಮರಗಳ ಕಟಾವಿಗೆ ಸಂಬಂಧಿಸಿದಂತೆ ರೈತರು ತಮ್ಮನ್ನು ಬೇಟಿ ಮಾಡಿ ಮೊದಲು ಸರ್ಕಾರಿ ಜಾಗದಲ್ಲಿರುವ ನೀಲಗಿರಿ ಮರಗಳನ್ನು ತೆರವುಗೊಳಿಸುವಂತೆ ಮನವಿ ಮಾಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ನೀಲಗಿರಿ ಮರಗಳ ತೆರವಿಗೆ ಒಂದು ಸಭೆಯನ್ನು ಕರೆದು ನೀಲಗಿರಿ ಮರಗಳಿಂದ ಉಪಯೋಗವೇನು, ಮಾರಕವೇನು ಎಂಬುವುದರ ಬಗ್ಗೆ ಚರ್ಚಿಸುತ್ತೇನೆ. ಖಾಸಗಿ ಜಮೀನಿನಲ್ಲಿರುವ ನೀಲಗಿರಿ ಮರಗಳ ತೆರವಿನ ನಂತರ ಪರ್ಯಾಯವಾಗಿ ಏನು ಕ್ರಮ ಕೈಗೊಳ್ಳಬೇಕು ಎಂಬುವುದರ ಬಗ್ಗೆಯೂ ಸಹ ಚರ್ಚಿಸಲಾಗುವುದು. ಜಿಲ್ಲಾಧಿಕಾರಿಯಾಗಿ ಬಂದ ಮೇಲೆ ಇದೇ ಮೊದಲ ಬಾರಿಗೆ ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದು ಹೇಳಿದರು.

ಶಾಸಕ ನಿಸರ್ಗ ಎಲ್.ಎನ್.ನಾರಾಯಣಸ್ವಾಮಿ ಮಾತನಾಡಿ, ಕೆರೆಗಳನ್ನು ಹೂಳೆತ್ತಿದರೆ ಸಾಲದು ಕೆರೆಗೆ ನೀರು ಬರುವ ನಾಲೆಗಳನ್ನು ಮೊದಲು ಒತ್ತುವರಿದಾರರಿಂದ ತೆರವುಗೊಳಿಸುವ ಕೆಲಸವಾಗಬೇಕು. ಕೆರೆಗೆ ನೀರು ಸಂಗ್ರಹಗೊಳ್ಳಲು ಕಾಲೂವೆಗಳ ಪಾತ್ರ ಬಹು ಮುಖ್ಯವಾಗಿರುತ್ತದೆ. ನೀರಿನ ಬವಣೆಯಿಂದ ಜನ ಯಾವರೀತಿ ಎಂಬುವುದು ಪ್ರತಿಯೊಬ್ಬರಿಗೂ ತಿಳಿದಿದೆ. ಕೆರೆ ಅಭಿವೃದ್ಧಿಯಾದರೆ ಮಳೆನೀರು ಸಂಗ್ರಹದಿಂದ ಈ ಭಾಗದಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಕೆರೆಗಳ ಅಭಿವೃದ್ಧಿಗೆ 30 ಕೋಟಿ ಅನುದಾನವನ್ನು ಬಿಡುಗಡೆಗೊಳಿಸಿ ಸರ್ಕಾರಕ್ಕೆ ಕಳುಹಿಸಿಕೊಡಲಾಗಿತ್ತು. ಆದರೆ ಈಗೀನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅನುದಾನಗಳನ್ನು ತಡೆಹಿಡಿದುಕೊಂಡಿದ್ದಾರೆ. ತಾಲೂಕಿನಲ್ಲಿ ವಿವಿಧ ಕಾಮಗಾರಿಗಳಿಗೆ 120ಕೋಟಿ ಅನುದಾನ ಬಿಡುಗಡೆಯಾಗಿತ್ತು. ಅದರಲ್ಲೂ ಸಹ ತಡೆಹಿಡಿದಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡಬಾರದು. ಈ ಬಗ್ಗೆ ವಿಧಾನಸೌಧದಲ್ಲಿ ಪ್ರಶ್ನಿಸಲಾಗುವುದು ಎಂದು ಹೇಳಿದರು.

ಸಮಾಜ ಸೇವಕ ಚೇತನ್‌ಗೌಡ ಮಾತನಾಡಿ, ಮೊದಲ ಹಂತವಾಗಿ 50 ಎಕರೆ ಕೆರೆಯನ್ನು ಅಭಿವೃದ್ಧಿ ಪಡಿಸಲು ಸುಮಾರು 2ಕೋಟಿ ರೂ.ಗಳು ಬೇಕಾಗುತ್ತದೆ. ಕೆರೆಯನ್ನು ಅಭಿವೃದ್ಧಿ ಪಡಿಸಲಾಗುತ್ತದೆ. ಕೆರೆ ಅಭಿವೃದ್ಧಿಯಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಲಿದೆ. ತನಗೆ ರೈತರ ಸಂಕಷ್ಟದ ಬಗ್ಗೆ ಅರಿವಿದೆ. ಸಮಾಜ ಸೇವೆಯ ಆಕಾಂಕ್ಷೆಯಿಂದ ಕೆರೆಗಳ ಅಭಿವೃದ್ಧಿ ಮಾಡಲು ಮುಂದಾಗಲಾಗಿದೆ ಎಂದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸೊಣ್ಣಪ್ಪ ಮಾತನಾಡಿ, ಹೆಬ್ಬಾಳ-ನಾಗವಾರ ಶುದ್ಧಿಕರಿಸಿದ ನೀರನ್ನು ತಾಲೂಕಿನ ಕೆಲವು ಕೆರೆಗಳಿಗೆ ಹರಿಸಲಾಗುತ್ತಿದೆ. ಆದರೆ ತಾಲೂಕಿನಲ್ಲಿರುವ ದೊಡ್ಡ ಕೆರೆಗಳಿಗೆ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಹರಿಸಿದರೆ ಆ ಕೆರೆಗಳು ಹೆಚ್ಚಿನ ಅಭಿವೃದ್ಧಿಯಾಗುತ್ತದೆ. ಜಿಲ್ಲಾಧಿಕಾರಿಗಳು ಮತ್ತು ಶಾಸಕರು ಇತ್ತ ಗಮನಹರಿಸುವಂತೆ ಆಗಬೇಕು ಎಂದರು.

ಈ ವೇಳೆಯಲ್ಲಿ ತಹಶೀಲ್ದಾರ್ ಅಜಿತ್ ರೈ, ಗ್ರಾಪಂ ಸದಸ್ಯ ಸುಬ್ರಮಣಿ, ಪಿಡಿಒ ಮಹೇಶ್, ಮುಖಂಡರಾದ ಪಟ್ಟಾಬಿ, ರಾಜಣ್ಣ, ಕೆಂಪರಾಜು, ಅರದೇಶನಹಳ್ಳಿ ಗ್ರಾಮಸ್ಥರು ಮತ್ತಿತರರು ಇದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos