ಭಾರತೀಯರೆಲ್ಲರೂ ಒಂದೇ ಎಂದು ಪರಿಗಣಿಸಿ: ವೆಂಕಯ್ಯ ನಾಯ್ಡು

ಭಾರತೀಯರೆಲ್ಲರೂ ಒಂದೇ ಎಂದು ಪರಿಗಣಿಸಿ: ವೆಂಕಯ್ಯ ನಾಯ್ಡು

ಬೆಂಗಳೂರು, . 07:  ಭಾರತ್ ಮಾತಾ ಕಿ ಜೈ ಎಂದು ಕೂಗುವುದಷ್ಟೆ ದೇಶಭಕ್ತಿಯಲ್ಲ. ಬದಲಾಗಿ ರಾಷ್ಟ್ರದ ಎಲ್ಲಾ  ರಾಜ್ಯದ ಜನರೂ ಒಬ್ಬರನ್ನೊಬ್ಬರು ಗೌರವಿಸಬೇಕು. ಜಾತಿ ಮತ ಧರ್ಮ, ಭಾಷೆ ಪ್ರಾಂತ್ಯಬೇಧವಿಲ್ಲದೆ ಸಕಲ ಭಾರತೀಯರು ಒಂದೇ ಎಂದು ಪರಿಗಣಿಸುವುದೇ ನಿಜವಾದ ದೇಶಭಕ್ತಿ ಎಂದು ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅಭಿಪ್ರಾಯ ಪಟ್ಟಿದ್ದಾರೆ.

ರಾಜ್ಯಭವನದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್‌)ನ ರಜತ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ದೇಶಭಕ್ತಿ ತುಂಬ ಬೇಕು. ಭಾರತ್ ಮಾತಾ ಕಿ ಜೈ ಎಂದು ಕೂಗುವುದಷ್ಟೆ ದೇಶಭಕ್ತಿಯಲ್ಲ. ರಾಷ್ಟ್ರದ ಪ್ರತಿಯೊಂದು ರಾಜ್ಯದ ಜನರೂ ಒಬ್ಬರನ್ನೊಬ್ಬರು ಗೌರವಿಸಬೇಕು. ಜಾತಿ ಮತ ಧರ್ಮ, ಭಾಷೆ ಪ್ರಾಂತ್ಯಬೇಧವಿಲ್ಲದೆ ಸಕಲ ಭಾರತೀಯರು ಒಂದೇ ಎಂದು ಪರಿಗಣಿಸುವುದೇ ನಿಜವಾದ ದೇಶಭಕ್ತಿ ಎಂದು ಹೇಳಿದರು.

ವಿಶ್ವವಿದ್ಯಾಲಯಗಳು ದೇಗುಲದಂತೆ ಪವಿತ್ರ ಸ್ಥಾನಗಳು. ಪಾದರಕ್ಷೆಗಳನ್ನು ಹೊರಗೆ ಕಳಚಿಟ್ಟು ನಾವು ದೇವಸ್ಥಾನಕ್ಕೆ ಹೋಗುವ ರೀತಿಯಲ್ಲೇ ರಾಜಕೀಯವನ್ನು ವಿಶ್ವವಿದ್ಯಾಲಯಗಳಿಂದ ಹೊರಗಿಡಬೇಕಾದುದು ಅತ್ಯಗತ್ಯ. ವಿಶ್ವದ ಬುದ್ದಿವಂತರು, ಉದ್ಯಮಗಳಲ್ಲಿ ಅತಿ ಎತ್ತರಕೇರಿದವರಲ್ಲಿ ದಕ್ಷಿಣ ಭಾರತೀಯರ ಸಂಖ್ಯೆ ಹೆಚ್ಚು. ದಕ್ಷಿಣ ಭಾರತದ ಮಣ್ಣಿನಲ್ಲಿ ವಿಶೇಷತೆ ಇದೆ. ಆದರೂ ಶಿಕ್ಷಣದ ಗುಣಮಟ್ಟ ಮಾತ್ರ ಹೆಚ್ವಳವಾಗುತ್ತಿಲ್ಲ ಏಕೆ ಎಂದು ಪ್ರಶ್ನಿಸಿದ ಅವರು, ಶಿಕ್ಷಣ ಅಂದರೆ ಕೇವಲ ಉದ್ಯೋಗಕ್ಕಾಗಿ ಮಾತ್ರ ಸೀಮಿತವಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಕಮೀಷನ್ -ವೊಮಿಷನ್ ಇರಬಾರದು. ಬದಲಿಗೆ ಹವ್ಯಾಸದಿಂದ ಕರ್ತವ್ಯ ನಿರ್ವಹಿಸಬೇಕು. ಶಿಕ್ಷಣ ಪಡೆಯುವುದೆಂದರೆ ಜ್ಞಾನದ ಪರಿಧಿ ವಿಸ್ತಾರ ಎಂದರ್ಥ ಎಂದರು.

ಉನ್ನತ ಶಿಕ್ಷಣದ ಗುಣಮಟ್ಟ ಹೆಚ್ಚಳಕ್ಕೆ ನ್ಯಾಕ್ ನ ಮೌಲ್ಯಾಂಕನ ಪದ್ದತಿಯ ಕೊಡುಗೆ ಪ್ರಮುಖ ಕಾರಣ. ಈಗಲೂ ನಮ್ಮ ರಾಷ್ಡ್ರದಲ್ಲಿ ಶೇಕಡಾ 20ರಷ್ಡು ಜನರು ಅವಿದ್ಯಾವಂತರಾಗಿದ್ದಾರೆ‌. ಭಾರತ ಅಭಿವೃದ್ಧಿ ಹೊಂದುತ್ತಿದೆ. ಆದರೂ ಕೊರತೆಗಳೂ ಸಾಕಷ್ಟಿವೆ. ನಮ್ಮಲ್ಲಿ ವಿಶ್ವವಿದ್ಯಾಲಯಗಳ ಸಂಖ್ಯೆಯೇನೋ ಹೆಚ್ಚುತ್ತಿದೆ. ಆದರೆ ಶಿಕ್ಷಣದ ಗುಣಮಟ್ಟದ ಕಥೆ ಏನು ? ಎಂದು ಪ್ರಶ್ನಿಸಿದ ಅವರು, ಒಂದು ಕಾಲದಲ್ಲಿ ಶಿಕ್ಷಣದ ವಿಷಯದಲ್ಲಿ ಭಾರತವನ್ನು ವಿಶ್ವಗುರು ಎಂದು ಗುರುತಿಸಲಾಗುತ್ತಿತ್ತು. ಆದರೆ ಇಂದು ಶಿಕ್ಷಣದ ಶ್ರೇಯಾಂಕ ಪಟ್ಟಿಯಲ್ಲಿ ಮೊದಲ  200 ಮೊದಲ 100 ರಾಷ್ಡ್ರಗಳ ಪಟ್ಟಿಯಲ್ಲೂ ಭಾರತಕ್ಕೆ ಸ್ಥಾನ ಸಿಕ್ಕಿಲ್ಲ.  ಇದಕ್ಕೆ ಕಾರಣ ಏನು ಎಂಬುದನ್ನು ಕಂಡುಹಿಡಿಯಬೇಕು. ಖಾಸಗಿ ವಿವಿ ಗಳಿಗೆ ಅವಕಾಶಕೊಟ್ಟಿದ್ದು ತಪ್ಪಿಲ್ಲ. ಡೀಮ್ಡ್ ವಿವಿ ಗಳಲ್ಲಿ ಗುಣಮಟ್ಟ ಪರವಾಗಿಲ್ಲ. ಆದರೆ ಸರ್ಕಾರಿ ಸ್ವಾಮ್ಯದ ವಿವಿಗಳಲ್ಲಿ ಗುಣಮಟ್ಟ ಏಕೆ ಆಗುತ್ತಿಲ್ಲ. ನಮ್ಮ ವಿವಿಗಳಿಗೆ ಕೊಡುತ್ತಿರುವ ಸೌಲಭ್ಯದಲ್ಲಿ ಯಾವುದೇ ಕೊರತೆ ಇಲ್ಲ. ಆದರೂ ಗುಣಮಟ್ಟ ಹೆಚ್ಚಳ ಏಕಾಗುತ್ತಿಲ್ಲ ಎಂದು ಉಪ ರಾಷ್ಟ್ರಪತಿ ಪ್ರಶ್ನಿಸಿದರು.

ರಾಜ್ಯಪಾಲ ವಜುಬಾಯಿ ವಾಲಾ ಮಾತನಾಡಿ, ನ್ಯಾಕ್ ಇಂದು 25 ವರ್ಷಗಳನ್ನು ಪೂರೈಸಿದೆ. ಹಲವಾರು ಸಂಸ್ಥೆಗಳು 25  ವರ್ಷ, 50 ವರ್ಷ 75 ವರ್ಷ ಪೂರೈಸುತ್ತವೆ. ಆದರೆ ಆ ಎಲ್ಲ ಸಂಸ್ಥೆಗಳು ದೇಶಕ್ಕೆ ಏನು  ಕೊಡುಗೆ ಕೊಟ್ಟಿವೆ ಎಂಬುದು ಮುಖ್ಯ. ಈ ನಿಟ್ಟಿನಲ್ಲಿ ಪ್ರತಿಯೊಂದು ಸಂಸ್ಥೆಯೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಫ್ರೆಶ್ ನ್ಯೂಸ್

Latest Posts

Featured Videos