ಸಾರ್ವಜನಿಕ ವಲಯದ ಬ್ಯಾಂಕ್‍ಗಳ ವಿಲೀನ ನಿಲ್ಲಿಸಬೇಕು: ಸಿಪಿಐ(ಎಂ) ಪೊಲಿಟ್‍ ಬ್ಯುರೊ

ಸಾರ್ವಜನಿಕ ವಲಯದ ಬ್ಯಾಂಕ್‍ಗಳ ವಿಲೀನ ನಿಲ್ಲಿಸಬೇಕು: ಸಿಪಿಐ(ಎಂ) ಪೊಲಿಟ್‍ ಬ್ಯುರೊ

ನವದೆಹಲಿ:
ಭಾರತ ಸರಕಾರವು ವಿಜಯಾ ಬ್ಯಾಂಕ್,  ಬ್ಯಾಂಕ್‍ ಆಫ್‍ ಬರೋಡ ಮತ್ತು ದೇನಾ ಬ್ಯಾಂಕ್‍ ಈ 3 ರಾಷ್ಟ್ರೀಕೃತ ಬ್ಯಾಂಕ್‍ಗಳನ್ನು
ವಿಲೀನಗೊಳಿಸಲು ತಕ್ಕುದಲ್ಲದ ತರಾತುರಿಯಿಂದ ಮುಂದೊತ್ತುತ್ತಿರುವುದರ ಬಗ್ಗೆ ಸಿಪಿಐ(ಎಂ) ಪೊಲಿಟ್‍ ಬ್ಯುರೊ ಆಳವಾದ ಆತಂಕವನ್ನು ವ್ಯಕ್ತಪಡಿಸಿದೆ.

ಈ ನಿಟ್ಟಿನಲ್ಲಿ ಸರಕಾರ ಬ್ಯಾಂಕ್‍ಗಳ ನೌಕರರ, ಅಧಿಕಾರಿಗಳ ಮತ್ತು ಇಡೀ ಉದ್ದಿಮೆಯ ಸಾಮೂಹಿಕ ವಿರೋಧವನ್ನು ಉಪೇಕ್ಷಿಸುತ್ತಿದೆ
ಎಂದು ಅದು ಹೇಳಿದೆ.

ಸಂಬಂಧಪಟ್ಟ ಬ್ಯಾಂಕ್‍ಗಳನ್ನು ಶಕ್ತಿಯುತಗೊಳಿಸಬೇಕು
ಮತ್ತು ಕ್ರೋಡೀಕರಿಸಬೇಕು
ಎಂಬ ಆಧಾರದಲ್ಲಿ ಬ್ಯಾಂಕ್‍ಗಳ ವಿಲೀನವನ್ನು ಸರಕಾರ ಸಮರ್ಥಿಸಿಕೊಳ್ಳುತ್ತಿದೆ. ಆದರೆ ವಾಸ್ತವವಾಗಿ, ಇಂತಹ ವಿಲೀನ ಎಲ್ಲ ಮೂರು ಬ್ಯಾಂಕ್‍ಗಳನ್ನೂ ವಿಲೀನದ ನಂತರ ಮತ್ತಷ್ಟು ದುರ್ಬಲಗೊಳಿಸುತ್ತದೆ. ದೊಡ್ಡ ಕಾಪೊರೇಟ್‍ ಗುಂಪುಗಳು ಸಾಲ ಮರುಪಾವತಿಯಲ್ಲಿ ಉದ್ದೇಶಪೂರ್ವಕವಾಗಿ ಸುಸ್ತಿ ಮಾಡಿಕೊಂಡಿರುವುದರಿಂದಾಗಿಯೇ ಸಾರ್ವಜನಿಕ ವಲಯದ ಬ್ಯಾಂಕ್ಗಳ ಸಮಸ್ಯೆ ಹೊಮ್ಮಿರುವುದು. ಇದಕ್ಕೆ ಪರಿಹಾರ ಇರುವುದು ಈ ಸುಸ್ತಿದಾರ ಕಾಪರ್ಪೊರೇಟ್‍ಗಳಿಂದ ಅಪಾರ ಸಾಲ ಮೊತ್ತಗಳನ್ನು ದಂಡದೊಂದಿಗೆ ನೇರವಾಗಿ ವಸೂಲಿ ಮಾಡಲು ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳುವುದರಲ್ಲಿದೆ.
ಬದಲಾಗಿ ವಿಲೀನದ ವ್ಯರ್ಥ ಕಸರತ್ತುಗಳಿಂದ ಅಲ್ಲ ಎಂದು ಪೊಲಿಟ್‍ಬ್ಯುರೊ ಮೋದಿಗೆ ಚಾಟಿ ಬೀಸಿದೆ.

ಆದರೆ ಸರಕಾರ ಸುಸ್ತಿ ಮಾಡಿಕೊಂಡ ಕಾಪೊರೇಟ್‍ಗಳ ಬಗ್ಗೆ ಒಂದು ಸಂಪೂರ್ಣವಾಗಿ ಸಡಿಲವಾದ ನಿಲುವನ್ನು ಪ್ರದರ್ಶಿಸುತ್ತ ಬಂದಿದೆ. ಮತ್ತು ಐಬಿಸಿ(ದಿವಾಳಿ ಮತ್ತು ಪಾಪರ್ ಸಂಹಿತೆ) ವಿಧಾನದ ಮೂಲಕ ಸಾರ್ವಜನಿಕ ವಲಯದ ಬ್ಯಾಂಕ್‍ಗಳು ತಮಗೆ ಬಾಕಿ ಬರಬೇಕಾದ ಸಾಲದ ಮೊತ್ತಗಳಲ್ಲಿ ದೊಡ್ಡ ಪ್ರಮಾಣದ ಕಡಿತಗಳಿಗೆ ಒಪ್ಪುವಂತೆ ಬಲವಂತ ಮಾಡುತ್ತಿದೆ. ಇಂತಹ ಬ್ಯಾಂಕ್‍ ವಿಲೀನಗಳು ಅವುಗಳ ಮೂಲ ಸಮಸ್ಯೆಗಳನ್ನು ಬಗೆಹರಿಸುವ ಬದಲು ವಾಸ್ತವವಾಗಿ ಹಲವಾರು ಬ್ಯಾಂಕ್‍ ಶಾಖೆಗಳನ್ನು ಅನಿವಾರ್ಯವಾಗಿ ಮುಚ್ಚುವುದರ ಮೂಲಕ ಬ್ಯಾಂಕ್‍ಗಳು ಕಾರ್ಯ ನಿರ್ವಹಿಸುವ ಪ್ರದೇಶಗಳನ್ನು ಹಿಂಡಿ ಹಿಪ್ಪೆ ಮಾಡುತ್ತವೆ. ಇದು ಉದ್ಯೋಗಾವಕಾಶಗಳನ್ನು ತೀವ್ರವಾಗಿ ಬಾಧಿಸುತ್ತದೆ. ಇದಲ್ಲದೆ ಬ್ಯಾಂಕಿಂಗ್‍ ಸೇವೆಗಳ ಲಭ್ಯತೆಯನ್ನು ಮತ್ತು ಹರಹನ್ನೂ ಕಡಿತಗೊಳಿಸುತ್ತದೆ. ಇದು ಮುಖ್ಯವಾಗಿ ದೂರ-ದೂರದ ಪ್ರದೇಶಗಳಲ್ಲಿ ಇರುವವರನ್ನೇ ಹೆಚ್ಚಾಗಿ ತಟ್ಟುತ್ತದೆ ಎಂದು ಸಿಪಿಎಂ ವಿಶ್ಲೇಷಿಸಿದೆ. ಬ್ಯಾಂಕ್‍ಗಳ ವಿಲೀನದ ಇಂತಹ ಹಾನಿಕಾರಕ ಕಸರತ್ತನ್ನು ಸಿಪಿಐ(ಎಂ) ವಿರೋಧಿಸುವುದಾಗಿ ಹೇಳಿರುವ ಪೊಲಿಟ್‍ ಬ್ಯುರೊ ಇಂತಹ ನಡೆಗಳಿಗೆ ಮುಂದಾಗಬಾರದು ಎಂದು ಸರಕಾರಕ್ಕೆ ಆಗ್ರಹಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos