ಒಳಚರಂಡಿ ಕಾಮಗಾರಿ ಕಿರಿಕಿರಿ

ಒಳಚರಂಡಿ ಕಾಮಗಾರಿ ಕಿರಿಕಿರಿ

ಮಧುಗಿರಿ: ಇಲ್ಲಿನ ಪುರಸಭೆ ವ್ಯಾಪ್ತಿಯಲ್ಲಿ ೪೮.೯೫ ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿಯಿಂದ ಪಾದಚಾರಿಗಳು ಹಾಗೂ ವಾಹನ ಸವಾರರು ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದಾರೆ.
ಪಟ್ಟಣದ ಟಿವಿವಿ ಬಡಾವಣೆ, ಪುರಸಭೆ ಮುಂಭಾಗ, ರಾಜರಾಜೇಶ್ವರಿ ಟಾಕಿಸ್ ರಸ್ತೆ, ಕೆ.ಆರ್.ಬಡಾವಣೆ, ವೆಂಕಟರಮಣ ದೇವಾಲಯ ರಸ್ತೆ, ಪಿಎಲ್‌ಡಿ ಬ್ಯಾಂಕ್ ರಸ್ತೆ, ಎಚ್.ಎಸ್.ರಸ್ತೆ, ರಾಘವೇಂದ್ರ ಕಾಲೊನಿ, ಕರಡಿಪುರ ಸೇರಿದಂತೆ ಪಟ್ಟಣದ ಬಹುತೇಕ ರಸ್ತೆ ಹಾಗೂ ಮುಖ್ಯರಸ್ತೆಗಳಲ್ಲಿ ಒಳ ಚರಂಡಿ ಕಾಮಗಾರಿ ಕೆಲಸ ನಡೆಯುತ್ತಿದೆ. ಆದರೆ, ಒಳಚರಂಡಿ ಕಾಮಗಾರಿಗಾಗಿ ಅಗೆದ ರಸ್ತೆಗಳಲ್ಲಿ ಜನರು ಸಂಚಾರ ಮಾಡಬೇಕಾದರೆ ಹರಸಾಹಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ.
ಒಳ ಚರಂಡಿ ಕಾಮಗಾರಿ ವೇಳೆ ಆ ಸ್ಥಳದಲ್ಲಿ ಹಾದು ಹೋಗಿರುವ ಕುಡಿಯುವ ನೀರಿನ ಪೈಪ್‌ಗಳನ್ನು ಕಿತ್ತು ಹಾಕಲಾಗುತ್ತಿದೆ. ಇದರಿಂದ ನಿವಾಸಿಗಳ ಮನೆಗಳಿಗೆ ನೀರು ಸರಬರಾಜು ಆಗದೆ ರಸ್ತೆ ತುಂಬೆಲ್ಲ ವ್ಯರ್ಥವಾಗಿ ನೀರು ಹರಿಯುತ್ತಿದೆ. ಒಡೆದು ಹೋಗಿರುವ ಪೈಪ್ಗಳನ್ನು ಸರಿಪಡಿಸುವಂತೆ ಒಳಚರಂಡಿ ಕಾಮಗಾರಿ ಗುತ್ತಿಗೆದಾರರಿಗೆ ಹೇಳಿದರೆ, ಇದೆಲ್ಲ ಪುರಸಭೆ ಅಧಿಕಾರಿಗಳು ಸರಿಪಡಿಸುತ್ತಾರೆ ಎಂದು ಸಬೂಬು ನೀಡುತ್ತಾರೆ. ಒಬ್ಬರ ಮೇಲೆ ಒಬ್ಬರು ಹೇಳಿಕೊಂಡು ಯಾರೂ ಸರಿಪಡಿಸುತ್ತಿಲ್ಲ ಎಂದು ನಿವಾಸಿಗಳು ದೂರುತ್ತಾರೆ.
ಮಳೆ ಬಂದಾಗ ರಸ್ತೆಗಳಲ್ಲಿ ಹಾಗೂ ಗುಂಡಿಗಳಲ್ಲಿ ನೀರು ತುಂಬಿಕೊಳ್ಳುತ್ತಿರುವುದ ರಿಂದ ಜನರು ಹಾಗೂ ವಾಹನ ಸವಾರರು ಸಂಚಾರ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇನ್ನು ವೃದ್ಧರು, ಮಹಿಳೆಯರು ಹಾಗೂ ಮಕ್ಕಳ ಪಾಡಂತೂ ಹೇಳತೀರದು. ಮಳೆಗಾಲದಲ್ಲಿ ಒಳ ಚರಂಡಿ ಕಾಮಗಾರಿ ಪ್ರಾರಂಭ ಮಾಡಿರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos