ಬಿಜೆಪಿ ಆಪರೇಷನ್‍ಗೆ ದೋಸ್ತಿ ಸರ್ಕಾರ ಗಢಗಢ.. ಸಂಕ್ರಾಂತಿಯ ಸಿಹಿ ಯಾರಿಗೆ?

ಬಿಜೆಪಿ ಆಪರೇಷನ್‍ಗೆ ದೋಸ್ತಿ ಸರ್ಕಾರ ಗಢಗಢ.. ಸಂಕ್ರಾಂತಿಯ ಸಿಹಿ ಯಾರಿಗೆ?

ಬೆಂಗಳೂರು: ಲೋಕಸಭೆ ಚುನಾವಣೆ ನಡೆಯುವ ಹೊತ್ತಿಗೆ ರಾಜ್ಯದಲ್ಲಿ ಬಜೆಪಿ ಸರ್ಕಾರ ಸಚಿಸಿ ಲೋಕಸಭಾ ಚುನಾವಣೆಗೆ ಶಕ್ತಿ ತಂದುಕೊಳ್ಳಬೇಕು. ಆ ಮೂಲಕ ಮತ್ತೆ ಮೋದಿಯನ್ನು ಪ್ರಧಾನಿ ಮಾಡಲೇಬೇಕೆಂಬ ಬಿಜೆಪಿಯ ಹಠ. ಇನ್ನೊಂದಡೆ ತಮ್ಮ ನಡುವಿನ ಒಳ ಜಗಳಗಳ ಮಧ್ಯೆಯೂ  ಮೈತ್ರಿಯನ್ನು ಉಳಿಸಿಕೊಂಡು ಮೋದಿಯನ್ನು ಅಧಿಕಾರಕ್ಕೆ ಬರದಂತೆ ತಡೆಯಬೇಕೆಂಬ ಹಠ. ಈ ಇಬ್ಬರ ಹಠ ರಾಜಕಾರಣದ ಪ್ರತೀ ಬೆಳವಣಿಗೆಗಳೂ ಕುತೂಹಲ ಕೆರಳಿಸುತ್ತಿದೆ.

ಹೈಕಮಾಂಡ್ ಸೂಚನೆಯಿಂದ ಬಿಜೆಪಿ ಶಾಸಕರು ಸಭೆಯಿಂದ ನೇರವಾಗಿ ಗುರುಗ್ರಾಮದ ಬಳಿ ಇರುವ ರೆಸಾರ್ಟ್ ಗೆ ತೆರಳಲು ಸಿದ್ಧರಾಗಿದ್ದಾರೆ.

ಎಲ್ಲಾ ಶಾಸಕರನ್ನು ರೆಸಾರ್ಟ್ ಗೆ ಶಿಫ್ಟ್ ಮಾಡುವಂತೆ ಅಮಿತ್ ಶಾ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಯಡಿಯೂರಪ್ಪ ಸಹಿತ 98 ಶಾಸಕರು ಗುರುಗ್ರಾಮಕ್ಕೆ ಬಸ್‍ನ ಮೂಲಕ ತೆರಳಲಿದ್ದಾರೆ. 2 ಬಸ್‍ಗಳಲ್ಲಿ ಶಾಸಕರನ್ನು ಶಿಫ್ಟ್ ಮಾಡಲು ಸಿದ್ಧತೆ ನಡೆದಿದೆ ಎಂದು ಹೇಳಲಾಗುತ್ತಿದೆ. ದೆಹಲಿಯಲ್ಲಿ ನಡೆದ ಸಭೆಯಲ್ಲಿ ಆಪರೇಷನ್ ಕಮಲದ ಬಗ್ಗೆ ಬಿ.ಎಸ್.ಯಡಿಯೂರಪ್ಪ ಶಾಸಕರಿಗೆ ಮಾಹಿತಿ ನೀಡಿದ್ದಾರೆ.

16 ಕೈ ಶಾಸಕರು ಹಾಗೂ ಇಬ್ಬರು ಪಕ್ಷೇತರರು ಬಿಜೆಪಿಗೆ ಬರಲಿದ್ದಾರೆ. ಎಲ್ಲರೂ ಕೂಡ ಒಟ್ಟಿಗೆ ಇರೋಣ  ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದು ಬೇಡ ಎಂದಿದ್ದಾರೆ. ಡಿಕೆ ಶಿವಕುಮಾರ್ ಇಲ್ಲವೇ ಎಚ್‍ಡಿಕೆ ಯಾರೇ ಕರೆ ಮಾಡಿ ಅಮಿಷಗಳನ್ನ ಒಡ್ಡಿದ್ದರು ಅದನ್ನು ನಮ್ಮ ಗಮನಕ್ಕೆ ತನ್ನಿ. ಅವರು ಕಾಲ್ ಮಾಡಿದರೆ ಅದನ್ನು ರೆಕಾರ್ಡ್ ಮಾಡಿಕೊಳ್ಳಿ ಎಂದು ಬಿಜೆಪಿ ಶಾಸಕರಿಗೆ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

ಮಧ್ಯಾಹ್ನ ಯಡಿಯೂರಪ್ಪನವರು ಇಂದು ಸಂಜೆ ಬಿಜೆಪಿ ಶಾಸಕರು ರಾಜ್ಯಕ್ಕೆ ಮರಳಲಿದ್ದಾರೆ ಎಂದು ತಿಳಿಸಿದ್ದರು. ಆದರೆ ಸಂಜೆಯಾಗುತ್ತಿದ್ದಂತೆ ಪ್ಲಾನ್ ಬದಲಾಗಿದೆ. ಕ್ಷಣ ಕ್ಷಣಕ್ಕೂ ಬಿಜೆಪಿ ನಾಯಕರ ಪ್ಲಾನ್ ಬದಲಾಗುತ್ತಿದ್ದು, ಕುತೂಹಲ ಮೂಡಿಸಿದೆ. ಇತ್ತ ಬೆಂಗಳೂರಿನಲ್ಲಿ ಕಾಂಗ್ರೆಸ್, ಜೆಡಿಎಸ್ ನಾಯಕರು ಆಪರೇಷನ್ ಕಮಲಕ್ಕೆ ಪ್ರತಿತಂತ್ರ ರೂಪಿಸುತ್ತಿದ್ದಾರೆ.

ಸರ್ಕಾರ ರಚನೆಯಾದಾಗಿನಿಂದಲೂ ದೋಸ್ತಿ ಸರ್ಕಾರ ಒಂದಿಲ್ಲೊಂದು ಸಂಕಷ್ಟಗಳನ್ನು ಎದುರಿಸುತ್ತಾ ಬರುತ್ತಾ ಇದೆ. ಇದನ್ನೇ ಅಸ್ತ್ರವಾಗಿಸಿಕೊಂಡ ಬಿಜೆಪಿ ಆಪರೇಷನ್‍ ಕಮಲಕ್ಕೆ ಮೋದಿ ಮತ್ತು ಅಮಿತ್‍ ಶಾ ಟೀಂ ರಣತಂತ್ರ ರೂಪಿಸುತ್ತಾ ಬಂದಿದೆ. ಅದು ಸಂಕ್ರಾಂತಿಯ ಸಮಯದಲ್ಲಿ ರಾಜಕೀಯ ಕ್ರಾಂತಿ ಮಡಲೇಬೇಕೆಂದು ಕಮಲ ಪಾಳಯ ಮಾಸ್ಟರ್ ಪ್ಲ್ಯಾನ್ ನಡೆಸಿದೆ.

ದೆಹಲಿಯಲ್ಲಿ ನಡೆದ 2 ದಿನಗಳ ಕಾರ್ಯಕಾರಣಿರಿ ಸಭೆ ನಡೆದ ನಂತರ 100 ಶಾಸಕರನ್ನು ದೋಸ್ತಿ ಸರಕಾರ ಕೆಡವಲು ಪ್ರತಿಯೊಬ್ಬ ಬಿಜೆಪಿ ಶಾಸಕನಿಗೂ ಜವಾಬ್ದಾರಿಯನ್ನು ನೀಡಿದೆ ಎನ್ನಲಾಗಿತ್ತು. ದೆಹಲಿಯಲ್ಲಿ ರಾಜ್ಯ ಬಿಜೆಪಿ ಶಾಸಕರ ಜೊತೆ ಸಭೆ ನಡೆಸಲು ಮುಂದಾಗಿದ್ದ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಭೆಯನ್ನು ಸಂಜೆ ಯಾದರೂ ಸಭೆ ನಡೆಸಿಲ್ಲ. ಮುಂದಿನ ಲೋಕಸಭೆ ಚುನಾವಣೆ ದೃಷ್ಟಿಯಿಂದ ಅಮಿತಾ ಶಾ ಸಭೆ ನಡೆಸಿಲ್ಲ. ಬಿಎಸ್‍ವೈ ಗೆ  ಇನ್ನೂ 2 ದಿನಗಳ ಕಾಲ ದೆಹಲಿಯಲ್ಲೇ ಇರಲು ಕಡಕ್‍ ಸೂಚನೆ ನೀಡಲಾಗಿದೆ.

ಮೈತ್ರಿ  ಕೂಟದ ಬಳಗ ಸರ್ಕಾರ ಸುಭದ್ರವಾಗಿದೆ, ಸರ್ಕಾರ ಉರುಳಿಸಲು ಅಸಾಧ್ಯ ಎಂದು ಆತಂಕದ ಭಾವನೆಯಿಂದಲೇ ಹೇಳುತ್ತಿದ್ದರೆ. ಇತ್ತ ಬಿಎಸ್ ವೈ ದೆಹಲಿಯಲ್ಲಿ 100 ಶಾಸಕರನ್ನು ಗುಡ್ಡೆ ಹಾಕಿಕೊಂಡು ಮೈತ್ರಿಗೆ ಖೆಡ್ಡಾ ತೋಡಿ ಮುಖ‍್ಯಮಂತ್ರಿಯಾಗುವ ಗುಂಗಿನಲ್ಲಿದ್ದಾರೆ.

ಬಿಎಸ್‍ವೈ ತಮ್ಮ ಪಕ್ಷದ 104 ಶಾಸಕರು ಕಾಂಗ್ರೆಸ್ ಗೆ ಹೋಗದಂತೆ ತಡೆಯಲು ದೆಹಲಿಯಲ್ಲಿ ಹಿಡಿದಿಟ್ಟು, ಜೆಡಿಎಸ್‍, ಕಾಂಗ್ರೆಸ್‍ ಹಾಗೂ ಪಕ್ಷೇತರ ಶಾಸಕರನ್ನು ತಮ್ಮತ್ತ ಸೆಳೆಯುವ ತಂತ್ರ ಹೆಣೆದಿದ್ದಾರೆ. ಬಹುತೇಕ  ಇನ್ನೂ ಎರಡು ದಿನಗಳ ಕಾಲ ಬಿಜೆಪಿ ಶಾಸಕರನ್ನು ದೆಹಲಿಯಲ್ಲಿಯೇ ಹಿಡಿದಿಡುವುದು ಸ್ಪಷ್ಟವಾಗಿದೆ.

ಇನ್ನು ಕಮಲದ ಆಪರೇಷನ್‍ಗೆ ಬೆಚ್ಚಿ ಬಿದ್ದಿರುವ ಮೈತ್ರಿಯ ಘಟಾನುಘಟಿಗಳು ರಹಸ್ಯ ಕಾರ್ಯಾಚರಣೆ  ನಡೆಸುತ್ತಿದ್ದಾರೆ. ಕಾರ್ಯಾಚರಣೆ ಕುರಿತು ಮೈತ್ರಿಯ ನಾಯಕರು ಯಾವುದೇ ಗುಟ್ಟು ಬಿಟ್ಟು ಕೊಡುತ್ತಿಲ್ಲ. ನಾಲ್ವರು ಶಾಸಕರನ್ನು ಸೆಳೆಯಲು ಬಂಡೆಪ್ಪ ಕಾಶೆಂಪೂರು, ಹಾಗೂ ಸಚಿವ ಸಿ ಎಸ್ ಪುಟ್ಟರಾಜುಗೆ ಜವಾಬ್ದಾರಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಒಟ್ಟಿನಲ್ಲಿ ರಾಜ್ಯ ರಾಜಕಾರಣದ ಪ್ರತೀ ಕ್ಷಣದ ಬೆಳವಣಿಗೆಗಳು ಕುತೂಹಲ ಮೂಡಿಸಿವೆ. ಈ ಮಧ್ಯೆ  ಆಡಳಿತ ಹಾಗೂ ಪ್ರತಿಪಕ್ಷಗಳ ತಂತ್ರಗಳ ಬಗ್ಗೆ ಅಂತೆಕಂತೆಯ ಸುದ್ದಿಗಳೂ ಜೋರಾಗಿಯೇ ಹರಿದಾಡ್ತಿವೆ.  ಇನ್ನೂ 2 ದಿನಗಳ ಬಳಿಕವಷ್ಟೇ ಬಿಜೆಪಿಯ ತಂತ್ರ ಯಶಸ್ವೀಯಾಗುತ್ತಾ? ದೋಸ್ತಿ ಸರ್ಕಾರ ಸುಭದ್ರವಾಗಿರುತ್ತಾ ಅನ್ನೋದು ಸ್ಪಷ್ಟವಾಗಿ ಗೊತ್ತಾಗಲಿದೆ. ವಿಧಾನ ಸಭೆ ಚುನಾವಣೆ ಮುಗಿದಾಗಿನಿಂದಲೂ ಆಡಳಿತ ಹಾಗೂ ಪ್ರತಿಪಕ್ಷಗಳು ತಮ್ಮ ಅಸ್ತಿತ್ವದ ಬಗ್ಗೆಯೇ ಯೋಚಿಸ್ತಾ, ತಮ್ಮ ಸ್ವಾರ್ಥದಲ್ಲಿ ಮುಳುಗಿವೆ. ಬದಲಾಗಿ ರಾಜ್ಯದ ಬರ, ವಿದ್ಯಾರ್ಥಿ-ಯುವಜನರ ಭವಿಷ್ಯದ ಕುರಿತು ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲ ಎಂಬುದು ಬೇಸರದ ಸಂಗತಿಯಾಗಿದೆ.

ಈ ಎಲ್ಲಾ ರಾಜಕೀಯ ಬೆಳವಣಿಗೆಗಳು ರಾಜ್ಯದ ಪ್ರತೀ ಸಾಮಾನ್ಯನೂ ಅಸಹ್ಯ ಪಟ್ಟುಕೊಳ್ಳವಂತ ಮಟ್ಟಕ್ಕೆ ತಲುಪಿದ್ದಂತೂ ಸುಳ್ಳಲ್ಲ. ಯಾರು ಯಾರನ್ನು ಆಪರೇಷನ್ ಮಾಡ್ತಾರೋ? ಯಾರು ಯಾರು ದೋಸ್ತಿ ಮಾಡ್ಕೋತಾರೋ? ಮಾಡಿಕೊಂಡು ರಾಜ್ಯದ ಸರ್ವಾಗೀಣ ಅಭಿವೃದ್ಧಿಗೆ ಒತ್ತು ಕೊಡಬೇಕಿದು ರಾಜ್ಯದ ಪ್ರಜ್ಞಾವಂತರ ಆಶಯವಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos