ಗಡುವು ಮೀರಿ 3 ತಿಂಗಳಾದರೂ ಮರಗಳ ಗಣತಿ ಆರಂಭವಾಗಿಲ್ಲ

ಗಡುವು ಮೀರಿ 3 ತಿಂಗಳಾದರೂ ಮರಗಳ ಗಣತಿ ಆರಂಭವಾಗಿಲ್ಲ

ಬೆಂಗಳೂರು, ಜ. 28: ಮರಗಳ ಗಣತಿ ಕಾರ್ಯ ಆರಂಭಿಸದ ಬಿಬಿಎಂಪಿ ಹಾಗೂ ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯಲ್ಲಿ ಮರಗಳ ಗಣತಿ ಬಗ್ಗೆ ತಜ್ಞರ ವಿಶೇಷ ಸಮಿತಿ ರಚಿಸಿರುವ ಕುರಿತು ಪ್ರಮಾಣ ಪತ್ರ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಈ ಕುರಿತು ಸಲ್ಲಿಸಿರುವ ಪಿಐಎಲ್ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಿನ್ನೆ ಮಧ್ಯಾಹ್ನ ನಡೆಯಿತು.

ಮರಗಣತಿ ಮಾಡಲು ಈಗಾಗಲೇ ವೆಬ್ಸೈಟ್ವೊಂದನ್ನು ರಚಿಸಲಾಗಿದ್ದು, ಈ ವೆಬ್ಸೈಟ್ನಲ್ಲಿ ಮರಗಳ ಸಂಖ್ಯೆಯ ಬಗ್ಗೆ ಮಾಹಿತಿ ಕಲೆ ಹಾಕಲಾಗುವುದು ಎಂದು ಪೀಠಕ್ಕೆ ಸರ್ಕಾರದ ಪರ ವಕೀಲರು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ವೆಬ್ಸೈಟ್ ಪ್ರಾರಂಭಿಸಿದ ಮಾತ್ರಕ್ಕೆ ಮರ ಗಣತಿ ಕಾರ್ಯ ಶುರು ಮಾಡಲಾಗಿದೆ ಎಂದರ್ಥವಲ್ಲ. ಮತ್ತೊಂದೊಡೆ ಕೋರ್ಟ್ ಅನುಮತಿ ಇಲ್ಲದೇ ರಾಜ್ಯ ಸರ್ಕಾರವು ಮರ ಗಣತಿ ಮಾಡಲು ತಜ್ಞರ ಸಮಿತಿ ರಚನೆ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿತು.

ಮರಗಳ ಗಣತಿಗೆ ಸಂಬಂಧಿಸಿದಂತೆ ಬಿಬಿಎಂಪಿ ಹಾಗೂ ಮರ ವಿಜ್ಞಾನ ಸಂಸ್ಥೆ ಮಾಡಿಕೊಂಡಿರುವ ಒಡಂಬಡಿಕೆಯಲ್ಲಿ ಹಲವು ತಪ್ಪುಗಳಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿನ ರಸ್ತೆ ಹಾಗೂ ಬೀದಿಗಳಲ್ಲಿನ ಮರಗಳನ್ನು ಮಾತ್ರ ಎಣಿಕೆ ಮಾಡಲಾಗುವುದು. ಖಾಸಗಿ ಜಾಗ ಮತ್ತು ಆಸ್ತಿಗಳಲ್ಲಿನ ಮರಗಳನ್ನು ಗಣತಿಗೆ ಪರಿಗಣಿಸಲಾಗುವುದಿಲ್ಲ ಎಂದು ಒಪ್ಪಂದದಲ್ಲಿ ಹೇಳಲಾಗಿದೆ. ಇದು ಮರಗಳ ಸಂರಕ್ಷಣಾ ಕಾಯ್ದೆ ಹಾಗೂ ಹೈಕೋರ್ಟ್ ನೀಡಿರುವ ಆದೇಶಕ್ಕೆ ವಿರುದ್ಧವಾಗಿದೆ. ಮುಖ್ಯವಾಗಿ ಗಡುವು ಮೀರಿ ಮೂರು ತಿಂಗಳಾದರೂ ಈವರೆಗೆ ಮರಗಳ ಗಣತಿ ಆರಂಭವಾಗಿಲ್ಲ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos