ಸಿಎಎ ವಿರುದ್ಧ ಒಗ್ಗೂಡಿ ಧ್ವನಿಗೂಡಿಸಿ

ಸಿಎಎ ವಿರುದ್ಧ ಒಗ್ಗೂಡಿ ಧ್ವನಿಗೂಡಿಸಿ

ಬೆಂಗಳೂರು, ಜ.16: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರುದ್ಧ ದಲಿತರು ಸೇರಿದಂತೆ ಎಲ್ಲರೂ ಒಗ್ಗೂಡಿ ಧ್ವನಿಗೂಡಿಸಬೇಕಿದೆ ಎಂದು ಬಿಎಸ್ಪಿ ರಾಜ್ಯ ಪ್ರಧಾನ ಸಂಯೋಜಕ ಎಂ.ಎಲ್. ತೋಮರ್ ತಿಳಿಸಿದರು.

ಗುರುವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನ ಸಭಾಂಗಣದಲ್ಲಿ  ಬಹುಜನ ಸಮಾಜ ಪಕ್ಷ ಮುಖ್ಯಸ್ಥೆ  ಮಾಯಾವತಿ ಅವರ 64ನೆ ಜನ್ಮ ದಿನ ಅಂಗವಾಗಿ  ಆಯೋಜಿಸಿದ್ದ, ‘ಜನ ಕಲ್ಯಾಣ ದಿನ’ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸಿಎಎ, ಎನ್‌ಆರ್‌ಸಿ ಪ್ರಕ್ರಿಯೆ ಮುಸ್ಲಿಮರಿಗೆ ಮಾತ್ರವಲ್ಲ, ಆದಿವಾಸಿ, ದಲಿತ  ವಿರೋಧಿಯಾಗಿದೆ. ಈ ಸಂಬಂಧ ಈಗಾಗಲೇ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ನೇತತ್ವದ ನಿಯೋಗ ರಾಷ್ಟ್ರಪತಿಯನ್ನು ಭೇಟಿಯಾಗಿ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಹಿಂಪಡೆಯಬೇಕೆಂದು ಒತ್ತಾಯ ಮಾಡಿದೆ. ಜತೆಗೆ, ಸಿಎಎ, ಎನ್‌ಆರ್‌ಸಿ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳಿಗೂ ಬೆಂಬಲ ಘೋಷಿಸಲಾಗಿದೆ. ಭವಿಷ್ಯದಲ್ಲೂ ನಡೆಯುವ ಹೋರಾಟಗಳಿಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.

ನೋಟು ಅಮಾನ್ಯೀಕರಣದಿಂದ ಭಾತರದ ಆರ್ಥಿಕ ಸ್ಥಿತಿ ಅಧೋಗತಿಗೆ ತಲುಪಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಬಿಜೆಪಿಯವರು ಹಿಂದೆ ಜಾತಿ, ಧರ್ಮದ ಹೆಸರಲ್ಲಿ ಸಮಾಜ ಒಡೆಯುತ್ತಿರುವವರು ಇದೀಗ ದೇವರ ಹೆಸರಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಒಂದು ವರ್ಷಕ್ಕೆ 2 ಕೋಟಿ ಉದ್ಯೋಗ ಕಲ್ಪಿಸುತ್ತೇನೆ ಎಂದು ಭರವಸೆ ನೀಡಿದ್ದರು. ಅದರ ಬದಲು ಇದೀಗ ಜನ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಶ್ರೀಮಂತರ ದುಡ್ಡಿನಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಹೀಗಾಗಿಯೇ ಮೋದಿ ಅವರು ಇವತ್ತು ಜನಸೇವೆಗಿಂತಲೂ ಹೆಚ್ಚಾಗಿ ಶ್ರೀಮಂತರ ಸೇವೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಬಿಎಸ್ಪಿ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ  ಮಾತನಾಡಿ, ಕೂಲಿ ಕಾರ್ಮಿಕರಿಗೆ ಕೆಲಸ ಹಾಗೂ ಕೋಟಿ ಉದ್ಯೋಗ ಸಷ್ಠಿ ಮಾಡುತ್ತೇವೆ ಎಂದು ಹೇಳಿದ್ದ ಬಿಜೆಪಿ ಸರಕಾರ ಇದಾವುದೂ ಮಾಡಲಿಲ್ಲ. ಬದಲಿಗೆ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆ. ಇನ್ನೂ ಈ ಸರಕಾರದಲ್ಲಿ ದಲಿತರು, ಮುಸ್ಲಿಮರು, ಹಿಂದುಳಿದ ವರ್ಗದವರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಅವರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಣ ಬಲದಿಂದ ರಾಜಕೀಯ ಮಾಡುವ ಇಂದಿನ ದಿನಗಳಲ್ಲಿ ಬಡವರ ಪರವಾಗಿ ಧ್ವನಿಗೂಡಿಸುವ ಪಕ್ಷ ಬಿಎಸ್ಪಿ ಮಾತ್ರ. ಕಾನ್ಸಿರಾಂ ಅವರು ಹಾಕಿಕೊಟ್ಟ ಮಾರ್ಗ ದರ್ಶನದಲ್ಲಿ ನಡೆದು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಬಿಎಸ್ಪಿ ನಾಯಕಿ ಮಾಯಾವತಿ ಭೂಮಿ ಹಂಚಿಕೆ, ಮೇಲ್ವರ್ಗದವರು ಸೇರಿದಂತೆ ಎಲ್ಲರಿಗೂ ಮೀಸಲಾತಿ ಕಲ್ಪಿಸಿದ್ದರು. ಆದರೆ, ಇಂದು ಬಡ ಹಾಗೂ ಮಧ್ಯಮ ವರ್ಗದವರು ಬದುಕು ನಡೆಸಲು ಪ್ರಯಾಸ ಪಡುವ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಬಹುಜನ ಸಮಾಜ ಪಕ್ಷದ ರಾಜ್ಯ ಘಟಕ ಹೊರ ತಂದಿರುವ 2020ನೇ ಸಾಲಿನ ಕ್ಯಾಲೆಂಡರ್ ಅನ್ನು ಪಕ್ಷದ ರಾಜ್ಯಾಧ್ಯಕ್ಷ ಬಿಎಸ್ಪಿ ರಾಜ್ಯಾಧ್ಯಕ್ಷ ಎಂ.ಕಷ್ಣಮೂರ್ತಿ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಸಂಯೋಜಕ ಎಸ್ಸಿ ಜಯಚಂದ್ರ, ರಾಜ್ಯ ಸಹ ಸಂಯೋಜಕ ದಿನೇಶ್ ಗೌತಮ್, ಕೆ.ಬಿ.ವಾಸು, ಎಚ್.ಡಿ.ಬಸವರಾಜ್, ಡಿ.ಆರ್.ನಾರಾಯಣಸ್ವಾಮಿ, ನಹೀದಾ ಸಲ್ಮಾ, ಬೆಂಗಳೂರು ಅಧ್ಯಕ್ಷ ಸಂದೀಪ್ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos