ದೇವಸ್ಥಾನ ಕಳ್ಳರ ಬಂಧನ

ದೇವಸ್ಥಾನ ಕಳ್ಳರ ಬಂಧನ

ರಾಮನಗರ: ದೇವಸ್ಥಾನಗಳಿಗೆ ಕನ್ನ ಹಾಕಿ ದೇವರ ಚಿನ್ನ, ಬೆಳ್ಳಿ ಒಡವೆ ಮತ್ತು ಹುಂಡಿಯ ದುಡ್ಡು ದೋಚುತ್ತಿದ್ದ ಇಬ್ಬರು ಐನಾತಿ ಕಳ್ಳರನ್ನು ಬಂಧಿಸಿ ರಾಮನಗರ ಜಿಲ್ಲೆಯ ಸುಮಾರು 8 ಪ್ರಕರಣಗಳನ್ನು ಭೇದಿಸುವಲ್ಲಿ ಸಾತನೂರು ಪೊಲೀಸರು ಯಶ್ವಸಿಯಾಗಿದ್ದಾರೆ.
ಬೆಂಗಳೂರಿನ ಬನಶಂಕರಿ ಮೂಲದ ವೆಂಕಟರಾಜು ಮತ್ತು ಸಾತನೂರು ಹೋಬಳಿಯ ವಡ್ಡರದೊಡ್ಡಿ ಗ್ರಾಮದ ಮುನೇಶ್ ಎಂಬ ಇಬ್ಬರು ಐನಾತಿ ಕಳ್ಳರನ್ನು ಬಂಧಿಸಿ, ಅವರಿಂದ ಸುಮಾರು 40 ಗ್ರಾಂ ಚಿನ್ನದ ಒಡವೆಗಳು ಮತ್ತು 1.5 ಕೆಜಿ ಬೆಳ್ಳಿಯ ವಸ್ತುಗಳು ಹಾಗೂ 3,920 ರೂಪಾಯಿ ಹುಂಡಿ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಡಿ.9 ರಂದು ರಾತ್ರಿ ಸಾತನೂರು ಗ್ರಾಮದ ಮಾರಮ್ಮ ದೇವಸ್ಥಾನದ ಬೀಗ ಹೊಡೆದು ದೇವರ ಮೈಮೇಲಿದ್ದ ಚಿನ್ನದ ಮತ್ತು ಬೆಳ್ಳಿಯ ಒಡವೆಗಳು ಮತ್ತು ಹುಂಡಿಯಲ್ಲಿದ್ದ ಹಣವನ್ನು ದೋಚಿದ್ದಾರೆ ಎಂದು ಗ್ರಾಮಸ್ಥರು ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು, ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಸಾತನೂರು ಪೊಲೀಸ್ ಠಾಣೆಯ 1 ಪ್ರಕರಣ, ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯ 4 ಪ್ರಕರಣ, ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ 1, ಕಗ್ಗಲೀಪುರ ಪೊಲೀಸ್ ಠಾಣೆಯ 1 ಮತ್ತು ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ 1 ಒಟ್ಟು 8 ದೇವಾಲಯ ಕಳವು ಪ್ರಕರಣಗಳನ್ನು ಸಾತನೂರು ಪೊಲೀಸರು ಭೇದಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos