ದೇವಸ್ಥನಗಳಿಗೆ ‘ಇ-ಹುಂಡಿ’

ದೇವಸ್ಥನಗಳಿಗೆ ‘ಇ-ಹುಂಡಿ’

ಬೆಂಗಳೂರು, ಸೆ. 13: ದೇವಸ್ಥಾನದ ಹುಂಡಿಗೆ ನೀವು ಹಾಕುವ ಪ್ರತಿ ಪೈಸೆ ಕಾಣಿಕೆಗೂ ಲೆಕ್ಕ ಸಿಗಲಿದೆ. ಒಂದೊಂದು ರೂಪಾಯಿಗೂ ರಶೀದಿ ಸಿಗಲಿದೆ.

ಇಂಥದ್ದೊಂದು ಎಲೆಕ್ಟ್ರಾನಿಕ್ ಹುಂಡಿ ವ್ಯವಸ್ಥೆಯನ್ನು ರಾಜ್ಯ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಅಳವಡಿಸಲು ಸರ್ಕಾರ ನಿರ್ಧರಿಸಿದೆ. ಆರಂಭದಲ್ಲಿ ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ಮೂಕಾಂಬಿಕೆ ದೇವಸ್ಥಾನ ಸೇರಿದಂತೆ ಆಯ್ದ 10- 15 ದೇವಸ್ಥಾನಗಳಲ್ಲಿ ಪ್ರಾಯೋಗಿಕವಾಗಿ ಯೋಜನೆ ಜಾರಿಗೆ ಬರಲಿದೆ.

‘ಇ- ಆಡಳಿತ’ ಇಲಾಖೆ ಹಾಗೂ ಖಾಸಗಿ ಸಂಸ್ಥೆಯೊಂದರ ಸಹಯೋಗದಲ್ಲಿ ‘ಇ-ಹುಂಡಿ’ ವ್ಯವಸ್ಥೆ ಅಳವಡಿಕೆಗೆ ಇಲಾಖೆ ಪ್ರಯತ್ನ ನಡೆಸಿದೆ. ಖಾಸಗಿ ಸಂಸ್ಥೆ ಸುಧಾರಿತ ಸಾಧನವನ್ನು ಅಭಿವೃದ್ಧಿಪಡಿಸಿದ್ದು, ತಮಿಳುನಾಡಿನ 25ಕ್ಕೂ ಹೆಚ್ಚು ದೇವಸ್ಥಾನದಲ್ಲಿ ಅಳವಡಿಸಿದೆ. ಭಕ್ತರು ಹಾಕುವ ಕಾಣಿಕೆ, ನಾಣ್ಯ, ನೋಟುಗಳನ್ನು ಮೌಲ್ಯಮಾಪನ ಮಾಡುವ, ರಸೀದಿ ನೀಡುವ ಹಾಗೂ ಆಯಾ ದಿನವೇ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ.

ಸದ್ಯಕ್ಕೆ ನಾಣ್ಯ, ನೋಟು, ನೋಟಿನ ಕಂತೆ ಸ್ವೀಕಾರ ವ್ಯವಸ್ಥೆ ಇದೆ. ಹರಕೆ ಚಿನ್ನ, ಬೆಳ್ಳಿ ಕಾಣಿಕೆಯನ್ನು ಮೌಲ್ಯಮಾಪನ ಮಾಡುವ ವ್ಯವಸ್ಥೆ ಅಳವಡಿಕೆ ಸಾಧ್ಯತೆ ಬಗ್ಗೆಯೂ ಚರ್ಚೆ ನಡೆದಿದೆ.

ದೇವಸ್ಥಾನಕ್ಕೆ ಭಕ್ತರು ನೀಡುವ ಕಾಣಿಕೆಯ ಪ್ರತಿ ಪೈಸೆಯ ಲೆಕ್ಕ ಪಡೆಯಲು ಸುಧಾರಿತ ತಂತ್ರಜ್ಞಾನ ಅಳವಡಿಸಿಕೆ ಮುಜರಾಯಿ   ಇಲಾಖೆ ಸಜ್ಜಾಗಿದೆ.

ಸಚಿವರಿಗೆ ಪ್ರಾತ್ಯಕ್ಷಿಕೆ: ವಿಕಾಸಸೌಧದಲ್ಲಿ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನಡೆಸಿದ ಪರಿಶೀಲನಾ ಸಭೆಯಲ್ಲಿ ಪ್ರಾತ್ಯಕ್ಷಿಕೆ ನೀಡಲಾಗಿದೆ. ಸಭೆ ಬಳಿಕ ಮಾತನಾಡಿದ ಅವರು, ಹುಂಡಿಗೆ ಹಾಕುವ ಪ್ರತಿ ಪೈಸೆಯ ಲೆಕ್ಕ ಸಿಗಲಿದೆ ಎಂದರು.

ಇ-ಹುಂಡಿಗೆ ಸಂಗ್ರಹವಾಗುವ ಹಣದ ಮೌಲ್ಯ ಅದೇ ದಿನ ಸಂಬಂಧಪಟ್ಟ ರಾಷ್ಟ್ರೀಕೃತ ಬ್ಯಾಂಕ್ನ ನಿರ್ದಿಷ್ಟ ಖಾತೆಗೆ ಜಮೆಯಾಗುವ ವ್ಯವಸ್ಥೆ ಇರಲಿದೆ ಎಂದು ಹೇಳಿದರು.

ಹೇಗಿರುತ್ತೆ ಇ-ಹುಂಡಿ?

ಸುಮಾರು 5.5 ಅಡಿ ಎತ್ತರದ 300ಕೆ.ಜಿ. ತೂಕದ ಸಾಧನ ಎಟಿಎಂ ಯಂತ್ರದ ಮಾದರಿಯಲ್ಲಿರುತ್ತದೆ. ನಾಣ್ಯ, ನೋಟುಗಳನ್ನು ಹಾಕುತ್ತಿದ್ದಂತೆ ಲೆಕ್ಕ ಹಾಕಿ ರಸೀದಿ ನೀಡಲಿದೆ. ಉನ್ನತ ಅಧಿಕಾರಿಗಳು ಕುಳಿತಲ್ಲೇ ನಿರ್ದಿಷ್ಟ ದೇವಾಲಯದ ‘ಇ-ಹುಂಡಿ’ಯಲ್ಲಿನ ಕಾಣಿಕೆ ಮೊತ್ತದ ವಿವರ ಪಡೆಯಲು ಅವಕಾಶವಿರಲಿದೆ. ಸಾಧನವನ್ನು ಹಾನಿಪಡಿಸಲು, ಹಣ ದೋಚಲು ಯತ್ನಿಸಿದರೆ ಎಚ್ಚರಿಕೆ ಗಂಟೆ ಮೊಳಗುವ ವ್ಯವಸ್ಥೆಯೂ ಇರಲಿದೆ. ನಾನಾ ಸೇವಾ ಕಾರ್ಯಗಳಿಗೆ ಶುಲ್ಕ ಪಾವತಿಸಿ ರಸೀದಿ ಪಡೆಯಲು ಅವಕಾಶವಿರುತ್ತದೆ ಎಂದು ಮೂಲಗಳು ಹೇಳಿವೆ.

 

ಫ್ರೆಶ್ ನ್ಯೂಸ್

Latest Posts

Featured Videos